ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಿಂದ ನಟಿ ರಕ್ಷಿತಾ ಪ್ರೇಮ್‌ ದೂರವಾಗಿದ್ದೇಕೆ? ಸತ್ಯ ಬಿಚ್ಚಿಟ್ಟ ʻಕ್ರೇಜಿ ಕ್ವೀನ್‌ʼ

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಿಂದ ಹೊರಬಂದ ರಹಸ್ಯವನ್ನು ಕೊನೆಗೂ ರಕ್ಷಿತಾ ಪ್ರೇಮ್‌ ಬಹಿರಂಗಪಡಿಸಿದ್ದಾರೆ. ಸುಮಾರು 9 ವರ್ಷಗಳ ಕಾಲ 'ಕಾಮಿಡಿ ಕಿಲಾಡಿಗಳು' ಮತ್ತು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಗಳ ತೀರ್ಪುಗಾರರಾಗಿದ್ದ ರಕ್ಷಿತಾ, ಅಲ್ಲಿಂದ ಹೊರಬಂದಿದ್ದೇಕೆ ಎಂಬುದನ್ನು ಇನ್‌ಸ್ಟಾಗ್ರಾಮ್ ಸಂವಾದದಲ್ಲಿ ತಿಳಿಸಿದ್ದಾರೆ.

ನಟಿ ಮತ್ತು ನಿರ್ಮಾಪಕಿ ರಕ್ಷಿತಾ ಪ್ರೇಮ್ ಅವರು ಬರೋಬ್ಬರಿ 9 ವರ್ಷಗಳ ಕಾಲ ಜೀ ಕನ್ನಡ ವಾಹಿನಿಯೊಂದಿಗೆ ಅವಿನಾಭಾವ ನಂಟು ಹೊಂದಿದ್ದರು. ಈ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ‘ಕಾಮಿಡಿ ಕಿಲಾಡಿಗಳು’ ಮತ್ತು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಗಳಿಗೆ ಅವರು ಜಡ್ಜ್‌ ಆಗಿದ್ದರು. ಆದರೆ, ಕಳೆದ ವರ್ಷ ಜೀ ಕನ್ನಡ ವಾಹಿನಿಗೆ ರಕ್ಷಿತಾ ಇದ್ದಕ್ಕಿದ್ದಂತೆ ವಿದಾಯ ಹೇಳಿದರು. ದೀರ್ಘಕಾಲದಿಂದ ಮುನ್ನಡೆಸಿಕೊಂಡು ಬಂದಿದ್ದ ಈ ಜಡ್ಜ್ ಸ್ಥಾನದಿಂದ ಅವರು ಕೆಳಗಿಳಿಯಲು ಕಾರಣವೇನು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಅದಕ್ಕೀಗ ರಕ್ಷಿತಾ ಉತ್ತರ ನೀಡಿದ್ದಾರೆ

ನೀವ್ಯಾಕೆ ಜೀ ಕನ್ನಡ ಬಿಟ್ರಿ?

ನಟಿ ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗಷ್ಟೇ ಅವರು ತಮ್ಮ ಅಭಿಮಾನಿಗಳೊಂದಿಗೆ 'ಪ್ರಶ್ನೋತ್ತರ' ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, "ನೀವು ಜೀ ಕನ್ನಡ ವಾಹಿನಿಯ ತೀರ್ಪುಗಾರರ ಸ್ಥಾನವನ್ನು ತೊರೆಯಲು ಕಾರಣವೇನು?" ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ರಕ್ಷಿತಾ ಅವರು ಅಷ್ಟೇ ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ.

ಹುಟ್ಟುಹಬ್ಬದಂದೇ ಭರ್ಜರಿ ಗಿಫ್ಟ್‌ ನೀಡಿದ ʻಕ್ರೇಜಿ ಕ್ವೀನ್‌ʼ ರಕ್ಷಿತಾ ಪ್ರೇಮ್;‌ ʻಇಡಿಯಟ್‌ʼ ಅಂತ ಕರೆದಿದ್ದು ಯಾರಿಗೆ?

‌ನನಗೆ ಸಮಸ್ಯೆ ಎದುರಾಯಿತು ಎಂದ ರಕ್ಷಿತಾ

ಅಭಿಮಾನಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಿತಾ ಪ್ರೇಮ್ ಅವರು, "ನನ್ನ ಪ್ರಾಮಾಣಿಕ ಉತ್ತರ ಯಾವಾಗಲೂ ಸತ್ಯವೇ ಆಗಿರುತ್ತದೆ. ಜೀ ಕನ್ನಡ ವಾಹಿನಿಯ ಆಂತರಿಕ ತಂಡದಲ್ಲಿ (Internal Team) ಬದಲಾವಣೆಗಳಾದವು. ಆ ಹೊಸ ತಂಡದ ಜೊತೆ ಕೆಲಸ ಮಾಡಲು ನನಗೆ ಸಮಸ್ಯೆ ಎದುರಾಯಿತು, ಈ ಕಾರಣಕ್ಕಾಗಿ ನಾನು ಅಲ್ಲಿಂದ ಹೊರಬಂದೆ. ಇಂದಿಗೂ ಅಲ್ಲಿರುವ ಹಲವರು ನನಗೆ ಬಹಳ ಇಷ್ಟ. ಅಲ್ಲಿ ಕಳೆದ ಸುಂದರ ಕ್ಷಣಗಳು ಮತ್ತು ನೆನಪುಗಳು ಸದಾ ನನ್ನ ಹೃದಯದಲ್ಲಿರುತ್ತವೆ. ಆದರೆ, ಕೆಲವು ವ್ಯಕ್ತಿಗಳು ಎಲ್ಲವನ್ನೂ ಕೆಡಿಸುತ್ತಾರೆ, ಅದಕ್ಕೆ ನಾವು ಏನು ಮಾಡಲು ಸಾಧ್ಯ? ಸದ್ಯ ನಾನು ಆ ವಿಚಾರದಿಂದ ಹೊರಬಂದು (Move on) ಮುಂದೆ ಸಾಗಿದ್ದೇನೆ. ಅವರೂ ಕೂಡ ಹಾಗೆಯೇ ಇರುತ್ತಾರೆ ಎಂದು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.‌

ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್‌ ವಾರ್! ದರ್ಶನ್‌ - ʻಕಿಚ್ಚʼ ಸುದೀಪ್‌ ಬಗ್ಗೆ ರಕ್ಷಿತಾ ಪ್ರೇಮ್‌ ದಂಪತಿ ಹೇಳಿದ್ದೇನು?

ಹಿಂದೊಮ್ಮೆ ಇದರ ಬಗ್ಗೆ ಮಾತನಾಡಿದ್ದ ರಕ್ಷಿತಾ

ಆರೇಳು ತಿಂಗಳ ಹಿಂದೆಯೂ ಈ ಬಗ್ಗೆ ರಕ್ಷಿತಾ ಮಾತನಾಡಿದ್ದರು. "ನಿರ್ದಿಷ್ಟ ಕಾರ್ಯಕ್ರಮದಲ್ಲಿ ನೀವು ನನ್ನನ್ನು ನಿರೀಕ್ಷಿಸುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ಆದರೆ, ಕಳೆದ 9 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿದ್ದ ವಾಹಿನಿಯಲ್ಲಿ ನಾನೀಗ ಇಲ್ಲ. ಜೀವನದಲ್ಲಿ ಸದಾ ಬದಲಾವಣೆಗಳನ್ನು ಬಯಸುತ್ತೇನೆ. ಮುಖ್ಯವಾಗಿ 'ಕಮ್ಫರ್ಟ್ ಝೋನ್'ನಿಂದ ಹೊರಬಂದು ಹೊಸತನ್ನು ಪ್ರಯತ್ನಿಸುವುದು ನನಗೀಗ ಅಗತ್ಯವಾಗಿದೆ" ಎಂದು ರಕ್ಷಿತಾ ಹೇಳಿಕೊಂಡಿದ್ದರು. ಇದೀಗ ಅಭಿಮಾನಿ ಕೇಳಿದ ಪ್ರಶ್ನೆ ಉತ್ತರಿಸುತ್ತಾ, ಕಾರಣವನ್ನೂ ತಿಳಿಸಿದ್ದಾರೆ.