ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತ್ನಿಯ ಅಪೋಲೋ ಆಸ್ಪತ್ರೆ ಇದ್ದರೂ ಶಸ್ತ್ರ ಚಿಕಿತ್ಸೆಗಾಗಿ ನಟ ರಾಮ್‌ ಚರಣ್ ಕೊಯಮತ್ತೂರಿಗೆ ಹೋಗಿದ್ದೇಕೆ? ಚಿರು ಪುತ್ರನಿಗೆ ಏನು ಸಮಸ್ಯೆ?

ನಟ ರಾಮ್ ಚರಣ್ ಅವರಿಗೆ ಸೋಮವಾರ (ಜುಲೈ 27) ಕೊಯಮತ್ತೂರಿನ ಪ್ರಸಿದ್ಧ ಗಂಗಾ ಆಸ್ಪತ್ರೆಯಲ್ಲಿ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಆದರೆ, ಪತ್ನಿ ಉಪಾಸನಾ ಅವರ 'ಅಪೋಲೋ' ಆಸ್ಪತ್ರೆಯಿದ್ದರೂ, ಶಸ್ತ್ರಚಿಕಿತ್ಸೆಗೆ ಕೊಯಮತ್ತೂರನ್ನು ರಾಮ್‌ ಚರಣ್ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಕೇಳಿಬಂದಿದೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪುತ್ರ, ನಟ ರಾಮ್ ಚರಣ್ ಅವರಿಗೆ ಸೋಮವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಅಂದಹಾಗೆ, ಪತ್ನಿ ಉಪಾಸನಾ ಕುಟುಂಬಕ್ಕೆ ಸೇರಿದ ‘ಅಪೋಲೋ’ಯಂತಹ ದೇಶದ ಪ್ರಸಿದ್ಧ ಆಸ್ಪತ್ರೆ ಇದ್ದರೂ, ರಾಮ್ ಚರಣ್ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿಗೆ ತೆರಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

‘ಪೆದ್ದಿ’ ಶೂಟಿಂಗ್ ವೇಳೆ ಮಣಿಕಟ್ಟಿಗೆ ಗಾಯ!

ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲೇ ಅವರ ಮಣಿಕಟ್ಟಿಗೆ ತೀವ್ರ ಗಾಯವಾಗಿತ್ತು. ಆದರೆ, ಸಿನಿಮಾದ ಪ್ರಚಾರ ಹಾಗೂ ಬಿಡುಗಡೆಗೆ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ನೋವನ್ನು ತಡೆದುಕೊಂಡೇ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿದ್ದರು. ಸದ್ಯ ‘ಪೆದ್ದಿ’ ಚಿತ್ರದ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲೇ ನಿರ್ದೇಶಕ ಸುಕುಮಾರ್ ಅವರ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಆ ಕೆಲಸಗಳಿಗೆ ಈ ಗಾಯ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ರಾಮ್ ಚರಣ್ ಭಾನುವಾರವೇ ಕೊಯಮತ್ತೂರಿಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ರಾಮ್‌ ಚರಣ್‌ ಹೊಸ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ? ಮದುವೆ ಬಳಿಕ ಹೆಚ್ಚಾಯ್ತು ʻನ್ಯಾಶನಲ್‌ ಕ್ರಶ್‌ʼ ಬೇಡಿಕೆ

ಅಪೋಲೋ ಬಿಟ್ಟು ‘ಗಂಗಾ’ ಆಸ್ಪತ್ರೆಯೇ ಏಕೆ?

ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರು ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ದೇಶದ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಸ್ವಂತ ಆಸ್ಪತ್ರೆಗಳಿದ್ದರೂ ರಾಮ್ ಚರಣ್ ಕೊಯಮತ್ತೂರಿನ ಗಂಗಾ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಅಲ್ಲಿನ ವಿಶೇಷ ನೈಪುಣ್ಯತೆ. ಗಂಗಾ ಆಸ್ಪತ್ರೆಯು ಆರ್ಥೋಪೆಡಿಕ್ಸ್, ಮೈಕ್ರೋ ವ್ಯಾಸ್ಕುಲರ್, ಪ್ಲಾಸ್ಟಿಕ್ ಸರ್ಜರಿ ಹಾಗೂ ಮುಖ್ಯವಾಗಿ ಕೈ ಮತ್ತು ಮಣಿಕಟ್ಟಿನ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಏಷ್ಯಾದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ನಂಬಿಕಸ್ಥ ವೈದ್ಯಕೀಯ ಕೇಂದ್ರವಾಗಿದೆ.

ಮಣಿಕಟ್ಟು, ನರಗಳು ಮತ್ತು ಮೂಳೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಚಿಕಿತ್ಸೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನೀಡುವಲ್ಲಿ ಈ ಆಸ್ಪತ್ರೆಯ ತಜ್ಞರು ಪ್ರಸಿದ್ಧರಾಗಿದ್ದಾರೆ. ಹೀಗಾಗಿ, ಈ ನಿರ್ದಿಷ್ಟ ಸಮಸ್ಯೆಗೆ ಕೊಯಮತ್ತೂರಿನ ಗಂಗಾ ಆಸ್ಪತ್ರೆಯೇ ಸೂಕ್ತವೆಂದು ನಿರ್ಧರಿಸಿ, ಪ್ರಸಿದ್ಧ ವೈದ್ಯರಾದ ಡಾ. ಪ್ರವೀಣ್ ಹಾಗೂ ಹಿರಿಯ ಮೂಳೆ ರೋಗ ತಜ್ಞ ಡಾ. ರಾಜಶೇಖರ್ ಅವರ ನೇತೃತ್ವದ ವಿಶೇಷ ವೈದ್ಯಕೀಯ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.‌

Ram Charan: ಮಗಳ ಮುಖವನ್ನು ಅಂತೂ ರಿವೀಲ್‌ ಮಾಡಿದ್ರು ರಾಮ್‌ ಚರಣ್‌ ದಂಪತಿ

ಕೊಯಮತ್ತೂರಿನಲ್ಲಿ ಮೆಗಾ ಕುಟುಂಬ

ಈ ಟೈಮ್‌ನಲ್ಲಿ ರಾಮ್ ಚರಣ್ ಜೊತೆಗಿರಲು ತಂದೆ ಮೆಗಾ ಸ್ಟಾರ್ ಚಿರಂಜೀವಿ, ತಾಯಿ ಸುರೇಖಾ, ಪತ್ನಿ ಉಪಾಸನಾ ಸೇರಿದಂತೆ ಇಡೀ ಕುಟುಂಬವೇ ಕೊಯಮತ್ತೂರಿಗೆ ತೆರಳಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ರಾಮ್ ಚರಣ್ ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾಗೂ ಚಿತ್ರರಂಗದ ಪ್ರಮುಖರು ಶುಭ ಹಾರೈಸುತ್ತಿದ್ದಾರೆ.