ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Toxic Movie: 'ಟಾಕ್ಸಿಕ್‌ʼ ಚಿತ್ರತಂಡದಲ್ಲಿ ಮುಸುಕಿನ ಗುದ್ದಾಟ? ನಟನೆ ಜತೆಗೆ ಯಶ್‌ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರ? ಸಹ ಕಲಾವಿದ ಹೇಳಿದ್ದೇನು?

Sudev Nair: ಸದ್ಯ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಭಾರತೀಯ ಚಿತ್ರಗಳಲ್ಲಿ ಕನ್ನಡದ ʼಟಾಕ್ಸಿಕ್‌ʼ ಕೂಡ ಒಂದು. ʼಕೆಜಿಎಫ್‌ 2' ಬಳಿಕ ಯಶ್‌ ನಟಿಸುತ್ತಿರುವ ಚಿತ್ರ ಇದಾಗಿದ್ದು, ಶೂಟಿಂಗ್‌ ಭರದಿಂದ ಸಾಗುತ್ತಿದೆ. ಈ ಮಧ್ಯೆ ಚಿತ್ರತಂಡದ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ವದಂತಿ ಹರಡಿದ್ದು, ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸುದೇವ್‌ ನಾಯರ್‌ ಇದನ್ನು ನಿರಾಕರಿಸಿದ್ದಾರೆ.

'ಟಾಕ್ಸಿಕ್‌ʼ ಚಿತ್ರತಂಡದಲ್ಲಿ ಮುಸುಕಿನ ಗುದ್ದಾಟ?

-

Ramesh B Ramesh B Sep 2, 2025 10:51 PM

ಬೆಂಗಳೂರು: ʼಟಾಕ್ಸಿಕ್‌ʼ (Toxic Movie)- ಸದ್ಯ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಸ್ಯಾಂಡಲ್‌ವುಡ್‌ ಚಿತ್ರ. ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲೂ ಏಕಕಾಲಕ್ಕೆ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ (Yash) ನಟಿಸುತ್ತಿದ್ದು ಇದೇ ಕಾರಣಕ್ಕೆ ಹಲವರ ಗಮನ ಸೆಳೆದಿದೆ. ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ (Geethu Mohandas) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಕೆವಿಎನ್‌ ಪ್ರೊಡಕ್ಷನ್ಸ್‌ (KVN Productions) ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಹಾಲಿವುಡ್‌ ಚಿತ್ರದ ಮಾದರಿಯಲ್ಲಿ ಮೂಡಿ ಬರುತ್ತಿದೆ. ಈ ಮಧ್ಯೆ ಚಿತ್ರತಂಡದಲ್ಲಿ ಎಲ್ಲವೂ ಸರಿ ಇಲ್ಲ, ಗೀತು ಮೋಹನ್‌ದಾಸ್‌ ಅವರ ಕೆಲಸದ ಬಗ್ಗೆ ಅಸಮಾಧಾನಗೊಂಡ ಯಶ್‌ ಗುಟ್ಟಾಗಿ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಇದೀಗ ಚಿತ್ರದಲ್ಲಿ ನಟಿಸುತ್ತಿರುವ ಸುದೇವ್‌ ನಾಯರ್‌ (Sudev Nair) ಈ ಬಗ್ಗೆ ಪ್ರತಿಕ್ರಿಯಿಸಿ ಗಾಳಿಸುದ್ದಿಯನ್ನು ನಿರಾಕರಿಸಿದ್ದಾರೆ.

ʼಟಾಕ್ಸಿಕ್‌ʼ ಚಿತ್ರವನ್ನು ಮುಂದಿನ ವರ್ಷ ಮಾರ್ಚ್‌ 19ರಂದು ತೆರೆಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ. ಈ ಬಗ್ಗೆ ಈಗಾಗಲೇ ಘೋಷಣೆಯನ್ನೂ ಹೊರಡಿಸಿದ್ದಾರೆ. ಗೋವಾದ ಡ್ರಗ್ಸ್‌ ಮಾಫಿಯಾ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ ದೃಶ್ಯಗಳಿವೆ ಎನ್ನಲಾಗುತ್ತಿದೆ. ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿರುವ ಟೀಸರ್‌ ಗಮನ ಸೆಳೆದಿದೆ.

ಕೆವಿನ್‌ ಪ್ರೊಡಕ್ಷನ್ಸ್‌ ಹಂಚಿಕೊಂಡ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Toxic Movie: ಬದಲಾಯ್ತು ಸ್ಯಾಂಡಲ್‌ವುಡ್‌ ಖದರ್‌; ಹಾಲಿವುಡ್‌ ಶೈಲಿಯಲ್ಲಿ ಮೂಡಿ ಬರುತ್ತಿದೆ 'ಟಾಕ್ಸಿಕ್‌'

ಸುದೇವ್‌ ನಾಯರ್‌ ಹೇಳಿದ್ದೇನು?

ಈ ಮಧ್ಯೆ ಯಶ್‌ ಅಸಮಾಧಾನಗೊಂಡಿದ್ದು, ಕೆಲವೊಂದು ಭಾಗಗಳನ್ನು ರೀಶೂಟ್‌ ಮಾಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಚಿತ್ರದ ಬಜೆಟ್‌ ಅಂದುಕೊಂಡದ್ದಕ್ಕಿಂತ ಹೆಚ್ಚಾಗುತ್ತಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಇದೀಗ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸುದೇವ್‌ ನಾಯರ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಸೂಯೆಯಿಂದ ಕೆಲವರು ಈ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʼʼಈಗ ಹಬ್ಬಿರುವ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ಅಸೂಯೆಯಿಂದ ಕೆಲವರು ಈ ರೀತಿಯ ವದಂತಿ ಹಬ್ಬಿಸುತ್ತಿದ್ದಾರೆ. ನಮ್ಮ ಚಿತ್ರತಂಡ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ನಿಮಗೇ ಗೊತ್ತು. ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿರುವುದಕ್ಕೆ ಈ ಟೀಮ್‌ ಉತ್ತಮ ಉದಾಹರಣೆ. ದೊಡ್ಡ ಸ್ಟಾರ್‌ ಎನಿಸಿಕೊಂಡಿರುವ ಯಶ್‌ ಪ್ರತಿಯೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದಾರೆ. ಜತೆಗೆ ಅವರೊಬ್ಬ ಉತ್ತಮ ನಟ ಕೂಡ. ಗೀತು ಕಾರ್ಯ ವೈಖರಿಗೆ ಅವರು ಸಹಕರಿಸುತ್ತಿದ್ದಾರೆʼʼ ಎಂದು ವಿವರಿಸಿದ್ದಾರೆ.

ʼʼಯಶ್‌ ಮತ್ತು ಗೀತು ಇಬ್ಬರೂ ಒಂದೊಳ್ಳೆ ಚಿತ್ರವನ್ನು ತೆರೆಗೆ ತರಲು ಶ್ರಮಿಸುತ್ತಿದ್ದಾರೆ. ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲವೊಮ್ಮೆ ದೃಶ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಲು ಇಬ್ಬರೂ ಚರ್ಚೆ ನಡೆಸುತ್ತಾರೆ. ಅಭಿಪ್ರಾಯಗಳನ್ನು ಇಬ್ಬರೂ ಪರಸ್ಪರ ಪರಿಗಣಿಸುತ್ತಾರೆ. ಯಶ್‌ ಆಗಾಗ ತಮ್ಮ ಆಲೋಚೆಗಳನ್ನು, ಸಲಹೆಗಳನ್ನು ಗೀತು ಜತೆ ಹಂಚಿಕೊಳ್ಳುತ್ತಿರುತ್ತಾರೆʼʼ ಎಂದು ತಿಳಿಸಿದ್ದಾರೆ.

ಆ್ಯಕ್ಷನ್‌ ದೃಶ್ಯಗಳಿಗೆ ಆದ್ಯತೆ

ಗ್ಯಾಂಗ್‌ಸ್ಟರ್‌ ಕಥೆಯನ್ನು ಹೊಂದಿರುವ ʼಟಾಕ್ಸಿಕ್‌ʼನಲ್ಲಿ ಆ್ಯಕ್ಷನ್‌ ದೃಶ್ಯಗಳು ಹೈಲೈಟ್‌ ಆಗಲಿವೆ. ಹಾಲಿವುಡ್‌ನ 'ಜಾನ್‌ ವಿಕ್‌', 'ಫಾಸ್ಟ್‌ & ಫ್ಯೂರಿಯಸ್‌' ಮುಂತಾದ ಚಿತ್ರಗಳಿಗೆ ಸ್ಟಂಟ್‌ ಮ್ಯಾನ್‌ ಆಗಿ ಕಾರ್ಯ ನಿರ್ವಹಿಸಿದ ಜೆ.ಜೆ. ಪೆರ‍್ರಿ (J.J.Perry) ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಇದೀಗ ಅವರು ಬರೋಬ್ಬರಿ 45 ದಿನಗಳ ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣಕ್ಕೆ ಮುಂಬೈಯಲ್ಲಿ ಚಾಲನೆ ನೀಡಿದ್ದಾರೆ. ಅವರು ತಮ್ಮ ಸ್ಕ್ವಾಡ್‌ನೊಂದಿಗೆ ಚಿತ್ರೀಕರಣಕ್ಕೆ ಸಿದ್ದತೆಯಲ್ಲಿ ತೊಡಗಿರುವ ದೃಶ್ಯವನ್ನು ಕೆವಿನ್‌ ಪ್ರೊಡಕ್ಷನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದರಿಂದ ಯಶ್‌ ಫ್ಯಾನ್ಸ್‌ ಥ್ರಿಲ್‌ ಆಗಿದ್ದು, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಇನ್ನು ಚಿತ್ರದಲ್ಲಿ ನಾಯಕಿಯರ ದಂಡೇ ಇದೆ. ನಯನತಾರಾ, ಕಿಯಾರ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತಿತರರು ನಟಿಸುತ್ತಿದ್ದಾರೆ. ಜತೆಗೆ ರುಕ್ಮಿಣಿ ವಸಂತ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.