ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಶ್ಮಿಕಾ ಮಂದಣ್ಣ ನೀಡಿದ್ದ 'ಶೋ-ಆಫ್' ಕಾಮೆಂಟ್‌ಗೆ ಪ್ರಬುದ್ಧವಾಗಿ ಉತ್ತರಿಸಿದ ʻರಾಕಿ ಭಾಯ್‌ʼ ಯಶ್; ಆದ್ರೆ ಟಾಂಗ್‌ ಕೊಟ್ಟಿದ್ದು ಯಾರಿಗೆ?

ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ‘ಆಪ್ ಕೀ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ರಾಕಿಂಗ್ ಸ್ಟಾರ್ ಯಶ್, ಈ ಹಿಂದೆ ರಶ್ಮಿಕಾ ಮಂದಣ್ಣ ತಮ್ಮ ಬಗ್ಗೆ ನೀಡಿದ್ದ ‘ಶೋ-ಆಫ್’ ಹೇಳಿಕೆಗೆ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಇನ್ನೊಬ್ಬರ ಅಭಿಪ್ರಾಯ ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ‘ಆಪ್ ಕೀ ಅದಾಲತ್’ ಶೋನಲ್ಲಿ ನಟಿ ರಶ್ಮಿಕಾ ಮಂದಣ್ಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಖ್ಯಾತ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ ಜನಪ್ರಿಯ 'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಬಗ್ಗೆ ನೀಡಿದ್ದ ‘ಶೋ-ಆಫ್’ ಹೇಳಿಕೆಯ ವಿವಾದಕ್ಕೆ ಅತ್ಯಂತ ಪ್ರಬುದ್ಧವಾಗಿ ಹಾಗೂ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ರಶ್ಮಿಕಾ ನೀಡಿದ್ದ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಸೃಷ್ಟಿಸಿ, ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈ ಹಳೆಯ ಘಟನೆಯನ್ನು ಕೆದಕದೆ ಶಾಂತಚಿತ್ತದಿಂದ ಉತ್ತರಿಸಿದ ಯಶ್, ರಶ್ಮಿಕಾ ಪರ ನಿಂತು ಇಂತಹ ವಿವಾದಗಳಿಗೆ ಕಾರಣವಾಗುವ ಟಿವಿ ಕಾರ್ಯಕ್ರಮಗಳ ಸ್ವರೂಪಕ್ಕೆ ನೇರ ಟಾಂಗ್ ನೀಡಿದ್ದಾರೆ.

ಕೆಲವು 'ಬಕ್ವಾಸ್' ಕಾರ್ಯಕ್ರಮಗಳಿರುತ್ತವೆ

ಸಂದರ್ಶನದಲ್ಲಿ ಮಾತನಾಡಿದ ಯಶ್, "ಅವರು ಯಾವ ಅರ್ಥದಲ್ಲಿ ಹಾಗೆ ಮಾತನಾಡಿದ್ದರೋ ನನಗೆ ತಿಳಿದಿಲ್ಲ. ಆಗಿನ್ನೂ ಅವರು ಚಿತ್ರರಂಗಕ್ಕೆ ಹೊಸಬರಾಗಿದ್ದರು. ಟಿವಿಯಲ್ಲಿ ಕೆಲವು 'ಬಕ್ವಾಸ್' ಕಾರ್ಯಕ್ರಮಗಳಿರುತ್ತವೆ, ಅಲ್ಲಿ ಸಂದರ್ಶಕರು ಮೂರ್ನಾಲ್ಕು ಆಯ್ಕೆಗಳನ್ನು ಮುಂದಿಟ್ಟು ಯಾವುದಾದರೂ ಒಂದನ್ನು ಆರಿಸುವಂತೆ ಒತ್ತಡ ಹೇರುತ್ತಾರೆ. ಬಹುಶಃ ಆ ಸಂದರ್ಭದಲ್ಲಿ ಈ ಆಯ್ಕೆಗೆ ಆ ಹುಡುಗಿ ನಾನು ಸರಿಹೊಂದಬಹುದು ಎಂದು ಅಂದುಕೊಂಡಿರಬಹುದು" ಎಂದಿದ್ದಾರೆ ಯಶ್‌. ಜೊತೆಗೆ ಇಂತಹ ವಿವಾದಾತ್ಮಕ ಆಯ್ಕೆಗಳನ್ನು ನೀಡಿ ರೇಟಿಂಗ್ ಗಿಟ್ಟಿಸಿಕೊಳ್ಳುವ ಮಾಧ್ಯಮಗಳ ಕಾರ್ಯವೈಖರಿಗೆ ಟಾಂಗ್‌ ನೀಡಿದ್ದಾರೆ.

Yash Meets Shivanna: ರಾಕಿಭಾಯ್‌ ಮೀಟ್ಸ್‌ ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

ಆತ್ಮವಿಶ್ವಾಸವನ್ನು ಕುಗ್ಗಿಸಲು ಬಿಡುವುದಿಲ್ಲ

ಇತರರ ಅಭಿಪ್ರಾಯಗಳು ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಒತ್ತಿ ಹೇಳಿದ ಯಶ್, "ಅದರಲ್ಲಿ ತಪ್ಪೇನೂ ಇಲ್ಲ, ಅದು ಕೇವಲ ಒಬ್ಬರ ಅಭಿಪ್ರಾಯ ಅಷ್ಟೇ. ನಾನೂ ಕೂಡ ಅಂದೇ ಅದನ್ನೇ ಸ್ಪಷ್ಟಪಡಿಸಿದ್ದೆ. ನಿಮ್ಮ ಬಗ್ಗೆ ಯಾರಾದರೂ ಯಾವುದೇ ಅಭಿಪ್ರಾಯ ಹೊಂದಿರಬಹುದು, ಆದರೆ ಇನ್ನೊಬ್ಬರ ಅಭಿಪ್ರಾಯ ಎಂದಿಗೂ ನನ್ನ ವ್ಯಕ್ತಿತ್ವವಾಗಲು ಸಾಧ್ಯವಿಲ್ಲ. ನಾನು ಏನಾಗಿದ್ದೇನೋ ಅದು ಇತರರ ದೃಷ್ಟಿಕೋನದಿಂದ ಬದಲಾಗುವುದಿಲ್ಲ" ಎಂದಿದ್ದಾರೆ. ಇಡೀ ಸಂದರ್ಶನದುದ್ದಕ್ಕೂ ಹೊರಗಿನ ಟೀಕೆಗಳು ಅಥವಾ ಹೋಲಿಕೆಗಳು ತಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಬಿಡುವುದಿಲ್ಲ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದರು. 2016ರ 'ಕಿರಿಕ್ ಪಾರ್ಟಿ' ಮೂಲಕ ಬಂದ ರಶ್ಮಿಕಾ ಹಾಗೂ 'ಕೆಜಿಎಫ್' ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಬೆಳೆದ ಯಶ್ ಇಬ್ಬರೂ ಇಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.

'ಜೆನ್ ಜಿ' ಪೀಳಿಗೆಗೆ ಕಿವಿಮಾತು

ಇದೇ ವೇಳೆ, ಗೀತು ಮೋಹನ್‌ದಾಸ್ ನಿರ್ದೇಶನದ ತಮ್ಮ ಮುಂಬರುವ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಮೇಲಿನ ಚರ್ಚೆಗಳ ಕುರಿತೂ ಮಾತನಾಡಿದ ನಟ, ಪ್ರೇಕ್ಷಕರಿಗೆ ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಪೂರ್ಣ ಸ್ವಾತಂತ್ರ್ಯವಿದೆ ಎಂದರು. ಸಿನಿಮಾವನ್ನು ಅದರ ಕಥೆ ಮತ್ತು ಉದ್ದೇಶದ ಹಿನ್ನೆಲೆಯಲ್ಲಿ ಅಳೆಯಬೇಕೆಂದು ತಿಳಿಸಿದ ಅವರು, ಹೊಸ ಪೀಳಿಗೆಯಾದ 'ಜೆನ್ ಜಿ' (Gen Z) ಪ್ರೇಕ್ಷಕರು ಈಗಾಗಲೇ ಸ್ಥಾಪಿತವಾಗಿರುವ ಕಲ್ಪನೆಗಳನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.