Yash Meets Shivanna: ರಾಕಿಭಾಯ್ ಮೀಟ್ಸ್ ಶಿವಣ್ಣ; ಶಿವ ರಾಜ್‌ಕುಮಾರ್ ಆರೋಗ್ಯ ವಿಚಾರಿಸಿದ ಯಶ್-ರಾಧಿಕಾ ಪಂಡಿತ್
Shiva Rajkumar: ರಾಕಿಂಗ್ ಸ್ಟಾರ್ ಯಶ್ ಮಂಗಳವಾರ (ಫೆ. 18) ಕರುನಾಡ ಚಕ್ರವರ್ತಿ ಡಾ.ಶಿವ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಶಿವಣ್ಣ ಅವರ ನಿವಾಸಕ್ಕೆ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಆಗಮಿಸಿ ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ.


ಬೆಂಗಳೂರು: ಸದ್ಯ ಬೆಂಗಳೂರಿನಲ್ಲಿ ಮುಂಬರುವ ತಮ್ಮ ಬಹುನಿರೀಕ್ಷಿತ ಚಿತ್ರ ʼಟಾಕ್ಸಿಕ್ʼ (Toxic)ನ ಶೂಟಿಂಗ್‌ನಲ್ಲಿ ನಿರತರಾಗಿರುವ ರಾಕಿಂಗ್ ಸ್ಟಾರ್ ಯಶ್ (Yash) ಮಂಗಳವಾರ (ಫೆ. 18) ಬಿಡುವು ಮಾಡಿಕೊಂಡು ಕರುನಾಡ ಚಕ್ರವರ್ತಿ ಡಾ.ಶಿವ ರಾಜ್‌ಕುಮಾರ್ (Shiva Rajkumar) ಅವರನ್ನು ಭೇಟಿಯಾಗಿದ್ದಾರೆ (Yash Meets Shivanna). ಶಿವಣ್ಣ ಅವರ ನಿವಾಸಕ್ಕೆ ಯಶ್ ಪತ್ನಿ ರಾಧಿಕಾ ಪಂಡಿತ್ (Radhika Pandit) ಜತೆಗೆ ಆಗಮಿಸಿದ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಶಿವಣ್ಣ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಜತೆಗೂ ಯಶ್ ದಂಪತಿ ಮಾತುಕತೆ ನಡೆಸಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಸಂಪೂರ್ಣ ಚೇತರಿಸಿಕೊಂಡ ಶಿವಣ್ಣ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಯಶ್ ದಂಪತಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.
ಕೆಲವು ದಿನಗಳ ವಿಶ್ರಾಂತಿ ಪಡೆದ ಬಳಿಕ ಇದೀಗ ಶಿವ ರಾಜ್‌ಕುಮಾರ್ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯಶ್ ಮತ್ತು ರಾಧಿಕಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಿವಣ್ಣ ದಂಪತಿ ಕೆಲವು ಸಮಯಗಳ ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Shiva Rajkumar: ಡಾಕ್ಯುಮೆಂಟರಿ ರೂಪದಲ್ಲಿ ಬರಲಿದೆ ಶಿವಣ್ಣನ ಕ್ಯಾನ್ಸರ್ ಹೋರಾಟದ ಕಥೆ
ಸಂಪೂರ್ಣ ಚೇತರಿಸಿಕೊಂಡ ಶಿವಣ್ಣ
ಮೂತ್ರಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ಶಿವ ರಾಜ್‌ಕುಮಾರ್ 2024ರ ಡಿ. 18ರಂದು ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. ಡಿ. 24ರಂದು ಮಿಯಾಮಿಯ ಆಸ್ಪತ್ರೆಯಲ್ಲಿ ಶಿವ ರಾಜ್‌ಕುಮಾರ್‌ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತ್ತು. 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡು 2025ರ ಜ. 26ರಂದು ಬೆಂಗಳೂರಿಗೆ ಮರಳಿದ್ದರು. ಕೈತುಂಬಾ ಸಿನಿಮಾ ಹೊಂದಿರುವ ಶಿವ ರಾಜ್‌ಕುಮಾರ್ ಇದೀಗ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಯಶ್ ನಟನೆಯ ʼಟಾಕ್ಸಿಕ್ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಏಕಕಾಲಕ್ಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಡೆಯುತ್ತಿದೆ. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. ಯಶ್ ಈ ಚಿತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವುದರಿಂದ ಮಾ. 16ರಂದು ನಡೆದ ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ದಂಪತಿಯ ಮಗನ ನಾಮಕರಣದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬಿಡುವು ಮಾಡಿಕೊಂಡು ಶಿವಣ್ಣ ಅವರನ್ನು ಭೇಟಿಯಾಗಿದ್ದಾರೆ.
ಈ ಹಿಂದೆ ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾಗಿದ್ದ ಯಶ್-ಶಿವಣ್ಣ
ಕಳೆದ ಆಗಸ್ಟ್‌ನಲ್ಲಿ ಯಶ್ ಅವರು ಶಿವಣ್ಣ ಅವರ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ್ದರು. ಶಿವಣ್ಣ ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ಧ ಅವರನ್ನು ಯಶ್ ಭೇಟಿ ಮಾಡಿದ್ದರು. ಶಿವಣ್ಣ ಕೊಂಚ ಉದ್ದವಾದ ಕೂದಲಿರುವ ವಿಗ್ ಧರಿಸಿ, ವಿಭಿನ್ನ ಲುಕ್‌ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ಸೆಟ್‌ಗೆ ಯಶ್ ಬೇಟಿ ನೀಡಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಆಗ ವೈರಲ್ ಆಗಿತ್ತು. ಈ ಚಿತ್ರದಲ್ಲಿ ಯಶ್ ಕೂಡ ನಟಿಸುತ್ತಿದ್ದಾರಾ ಎನ್ನುವ ಅನುಮಾನವೂ ಮೂಡಿತ್ತು. ಈ ಬಗ್ಗೆ ಚಿತ್ರತಂಡದವರು ಎಲ್ಲೂ ಬಾಯ್ಬಿಟ್ಟಿಲ್ಲ.