Toxic Review: ಮಗರಾಯನ ಜೊತೆ ʻರಾಯʼನ ಮಾನಸಿಕ ಸಮರ; 'ಟಾಕ್ಸಿಕ್'ನಲ್ಲಿ ಆದಿಯಿಂದ ಅಂತ್ಯದವರೆಗೂ ಎಲ್ಲವೂ ಅಬ್ಬರ!
Toxic Movie Review: ನಾಲ್ಕು ವರ್ಷಗಳ ಕಾಯುವಿಕೆಯ ನಂತರ ತೆರೆಕಂಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ರೆಟ್ರೋ ಕಾಲಘಟ್ಟದ ಮತ್ತು ಪೋರ್ಚುಗೀಸ್ ಗೋವಾದ ಗ್ಯಾಂಗ್‌ಸ್ಟರ್ ಕಥೆಯನ್ನು ಹೊಂದಿದೆ. ಅಕ್ಕ-ತಮ್ಮನ ಭಾವನಾತ್ಮಕ ಬಂಧ, ಅಧಿಕಾರದ ದಾಹ ಹಾಗೂ ರಾಯ-ಟಿಕೆಟ್ ಪಾತ್ರಗಳ ದ್ವಿಪಾತ್ರಾಭಿನಯ ಇಲ್ಲಿ ಹೈಲೈಟ್ ಆಗಿದೆ.
-
ಚಿತ್ರ ವಿಮರ್ಶೆ: ಟಾಕ್ಸಿಕ್
ತಾರಾಗಣ: ಯಶ್, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ಸುದೇವ್ ನಾಯರ್, ಬಾಲಾಜಿ ಮನೋಹರ್ ಇತರರು
ನಿರ್ದೇಶನ: ಗೀತು ಮೋಹನ್‌ದಾಸ್
ಅವಧಿ: 3 ಗಂಟೆ 14 ನಿಮಿಷ
ರೇಟಿಂಗ್: 3/5
ಕೊನೆಗೂ 'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. 2022ರಲ್ಲಿ ತೆರೆಕಂಡ 'ಕೆಜಿಎಫ್ ಚಾಪ್ಟರ್ 2' ಬಳಿಕ ಯಶ್ ತಮ್ಮ ನಾಲ್ಕು ವರ್ಷಗಳ ಸಂಪೂರ್ಣ ಸಮಯವನ್ನು 'ಟಾಕ್ಸಿಕ್' ಚಿತ್ರಕ್ಕಾಗಿ ಮೀಸಲಿಟ್ಟಿದ್ದರು. ಈ ಬಾರಿ ಭಾರತೀಯ ಚಿತ್ರರಂಗ ಮಾತ್ರವಲ್ಲದೆ, ಹಾಲಿವುಡ್ ಮಟ್ಟದಲ್ಲೂ ಸದ್ದು ಮಾಡುವ ಕನಸನ್ನು ಅವರು ಹೊತ್ತಿದ್ದರು. ಆ ಕನಸಿಗೆ ತಕ್ಕಂತೆ 'ಟಾಕ್ಸಿಕ್' ಮೂಡಿಬಂದಿದೆಯಾ? ಯಶ್ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗಲಿದೆಯಾ? ಇಲ್ಲಿದೆ ಸಂಪೂರ್ಣ ಸಿನಿಮಾ ವಿಮರ್ಶೆ.
ಇದು 50-60ರ ದಶಕದ ಕಥೆ
ಅವನು ರಾಯ (ಯಶ್), ಅವನಿಗೊಬ್ಬಳು ಅಕ್ಕ ಗಂಗಾ (ನಯನತಾರಾ). ಇಬ್ಬರೂ ಅನಾಥರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಪ್ರೀತಿಯೂ ಇವರಿಗೆ ಸಿಕ್ಕಿಲ್ಲ. ಇದು ರಾಯ ಮತ್ತು ಗಂಗಾ ಅವರ ಹಿನ್ನೆಲೆ. ತಮ್ಮನನ್ನು ಚೆನ್ನಾಗಿ ಬೆಳೆಸಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕು ಎಂಬುದು ಗಂಗಾಳ ಆಸೆ. ಅದನ್ನು ಆಕೆ ನೆರವೇರಿಸುತ್ತಾಳೆ ಕೂಡ. ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಗೋವಾದಲ್ಲಿರುವ ಈ ಅಕ್ಕ-ತಮ್ಮ, ತಮ್ಮದೇ ಆದ ದೊಡ್ಡ ಸಾಮ್ರಾಜ್ಯ ಕಟ್ಟಬೇಕೆಂಬ ಹಪಾಹಪಿ ಹೊಂದಿರುತ್ತಾರೆ. ಆದರೆ ರಾಯನಿಗೆ ಹಣ ಮತ್ತು ಹೆಣ್ಣಿನ ಮೇಲೆ ಅತಿಯಾದ ಮೋಹ. ಅದು ಕೊನೆಗೆ ಆತನನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದೇ ಚಿತ್ರದ ಕಥಾಹಂದರ.
ಮೇಲ್ನೋಟಕ್ಕೆ ಇದೊಂದು ರೆಟ್ರೋ ಕಾಲಘಟ್ಟದ ಆಕ್ಷನ್ ಥ್ರಿಲ್ಲರ್ ಎನಿಸಿದರೂ, ಅದಕ್ಕಿಂತ ಹೆಚ್ಚಾಗಿ ಸೈಕಲಾಜಿಕಲ್ ಥ್ರಿಲ್ಲರ್ ಎನ್ನಬಹುದು. ಇದರಲ್ಲಿ ಹಣ, ಅಧಿಕಾರದ ಮೇಲೆ ಆಸೆ, ಹೆಣ್ಣಿನ ಮೋಹ, ನಿಸ್ವಾರ್ಥ ಪ್ರೀತಿ, ತಂದೆ-ಮಗನ ಬಾಂಧವ್ಯ, ಅಕ್ಕ-ತಮ್ಮ ಅನುಬಂಧ, ತ್ರಿಕೋನ ಪ್ರೇಮಕಥೆ, ಅಂಡರ್‌ವರ್ಲ್ಡ್.. ಹೀಗೆ ಎಲ್ಲವೂ ಅಡಗಿದೆ. ಇಲ್ಲಿ ಎಲ್ಲವನ್ನೂ ಪಡೆದುಕೊಂಡು ದೊಡ್ಡ ಸಾಮ್ರಾಜ್ಯದ ಅಧಿಪತಿಯಾಗುವ ರಾಯ, ಕೊನೆಗೆ ಬೆಲೆಕಟ್ಟಲಾಗದ ಸಂಬಂಧಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ನಿರ್ದೇಶಕಿ ಗೀತು ಮೋಹನ್‌ದಾಸ್ ಬಹಳ ಸೂಕ್ಷ್ಮವಾಗಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಯಶ್ ನಟನಾ ಸಾಮರ್ಥ್ಯಕ್ಕೆ ಸವಾಲು
'ಟಾಕ್ಸಿಕ್' ಚಿತ್ರದಲ್ಲಿ ರಾಯ ಮತ್ತು ಆತನ ಮಗ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಎರಡೂ ಪಾತ್ರಗಳು ಕಥೆಗೆ ಪರಸ್ಪರ ಭಿನ್ನವಾದ ಶಕ್ತಿಯನ್ನು ಒದಗಿಸುತ್ತವೆ. ರಾಯ ಸಂಪೂರ್ಣವಾಗಿ ಗ್ಯಾಂಗ್‌ಸ್ಟರ್ ಜಗತ್ತಿನಲ್ಲಿ ಬೇರೂರಿದ ಪಾತ್ರವಾದರೆ, ಟಿಕೆಟ್ ಪಾತ್ರವು ಕಥೆಗೆ ಭಾವನಾತ್ಮಕ ಆಯಾಮವನ್ನು ತಂದುಕೊಡುತ್ತದೆ. ತಮ್ಮ ಅಮೋಘ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಯಶ್ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸೂಕ್ಷ್ಮ ಭಾವನಾತ್ಮಕ ಸನ್ನಿವೇಶಗಳು ಹಾಗೂ ಆಕ್ಷನ್ ದೃಶ್ಯಗಳೆರಡರಲ್ಲೂ ಅವರು ಲೀಲಾಜಾಲವಾಗಿ ನಟಿಸಿದ್ದಾರೆ.
ರಾಯ ಮತ್ತು ಟಿಕೆಟ್ ನಡುವಿನ ವ್ಯತ್ಯಾಸಗಳು ಸ್ಪಷ್ಟವಾಗುತ್ತಾ ಹೋದಂತೆ, ಅವರ ದ್ವಿಪಾತ್ರಾಭಿನಯವೇ ಚಿತ್ರದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಯಶ್‌ಗೆ ಇಲ್ಲಿ ಮೂರು ಶೇಡ್‌ಗಳುಳ್ಳ ಪಾತ್ರವೇ ಸಿಕ್ಕಿದೆ. ಅದನ್ನು ಅವರು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ತಮ್ಮನಾಗಿ, ಅಪ್ಪನಾಗಿ, ಪ್ರೇಮಿಯಾಗಿ, ಮಗನಾಗಿ ಜೊತೆಗೆ ಖಡಕ್ ಗ್ಯಾಂಗ್‌ಸ್ಟರ್ ಆಗಿಯೂ ಮಿಂಚಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿನ ಅವರ ನಟನೆ ಅಪಾರ ಮೆಚ್ಚುಗೆಗೆ ಅರ್ಹ. ತಮ್ಮ ಸ್ಟಾರ್ ಇಮೇಜ್‌ನ ಹಂಗನ್ನು ತೊರೆದು ಅವರು ಇಲ್ಲಿ ಜೀವಿಸಿದ್ದಾರೆ.
ಗೀತು ಮೋಹನ್‌ದಾಸ್ ಕೆಲಸ ಹೇಗಿದೆ?
ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ವೃತ್ತಿಜೀವನದಲ್ಲಿ ಇದು ಮೊದಲ ದೊಡ್ಡ ಕ್ಯಾನ್ವಾಸ್‌ನ ಸಿನಿಮಾ. ಪ್ಯಾನ್ ಇಂಡಿಯಾ ಸ್ಟಾರ್ ಹೀರೋ, ಭಾರಿ ಬಜೆಟ್, ಜೊತೆಗೆ ಐವರು ಜನಪ್ರಿಯ ನಟಿಯರು... ಇವೆಲ್ಲವನ್ನೂ ಸರಿದೂಗಿಸುವಲ್ಲಿ ಅವರು ಕೊಂಚ ಎಡವಿದರೇ ಎಂಬ ಅನುಮಾನ ಪ್ರಥಮಾರ್ಧ ಮುಗಿಯುವ ಹೊತ್ತಿಗೆ ಕಾಡುತ್ತದೆ. 'ಟಾಕ್ಸಿಕ್' ಸಿನಿಮಾ ತನ್ನ ಕಥೆಯ ಎಳೆಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಕಥೆ ಆರಂಭವಾದ ಕೆಲ ಸಮಯದವರೆಗೆ ಮೂಲ ಸ್ವರೂಪವೇನು ಎಂಬುದು ಸ್ಪಷ್ಟವಾಗುವುದಿಲ್ಲ; ಅಷ್ಟರಮಟ್ಟಿಗೆ ಸಂಕೀರ್ಣವಾದ ಕಥಾಹಂದರವನ್ನು ಇದು ಒಳಗೊಂಡಿದೆ.
ಚಿತ್ರದ ಪ್ರಥಮಾರ್ಧವು ತನ್ನ ಮಲ್ಟಿಲೇಯರ್ ನಿರೂಪಣೆಯಿಂದ ಪ್ರೇಕ್ಷಕರ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಗೀತು ಮೋಹನ್‌ದಾಸ್ ಇಲ್ಲಿ ಪಾತ್ರಗಳು, ಸಂಬಂಧಗಳು ಮತ್ತು ಗ್ಯಾಂಗ್‌ಸ್ಟರ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ನಂತರ ಕಥೆಯ ಡ್ರಾಮಾ ಹಂತ-ಹಂತವಾಗಿ ಬೆಳೆಯುತ್ತಾ ಸಾಗುತ್ತದೆ. ದ್ವಿತೀಯಾರ್ಧಕ್ಕೆ ಭಾರಿ ನಿರೀಕ್ಷೆ ಹುಟ್ಟಿಸುವ ರೀತಿಯಲ್ಲೇ ಇಂಟರ್ವೆಲ್ ಬ್ಲಾಕ್ ಅನ್ನು ರೂಪಿಸಲಾಗಿದೆ.
Yash-Radhika Pandit: ಯಶ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್! ಚೆಂದದ ವಿಡಿಯೊ ಶೇರ್ ಮಾಡಿದ ರಾಧಿಕಾ ಪಂಡಿತ್
ಮೇಕಿಂಗ್ ಮತ್ತು ತಾಂತ್ರಿಕ ಶ್ರೀಮಂತಿಕೆ ಹೇಗಿದೆ?
ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಯಶ್ ಈ ಸಿನಿಮಾದ ಚಿತ್ರಕಥೆಗೆ ಜಂಟಿಯಾಗಿ ಕೆಲಸ ಮಾಡಿದ್ದಾರೆ. ಇಬ್ಬರ ಬರವಣಿಗೆಯಲ್ಲೂ ದೃಶ್ಯ ವೈಭವಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಕಥೆಗಿಂತ ವೈಭವೀಕರಣ ಮತ್ತು ಅದ್ದೂರಿತನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಪ್ರತಿ ಸನ್ನಿವೇಶದಲ್ಲೂ ನಾಯಕನನ್ನು ವಿಜೃಂಭಿಸಲಾಗಿದೆ. ಚಿತ್ರದುದ್ದಕ್ಕೂ ಆಕ್ಷನ್ ದೃಶ್ಯಗಳಿದ್ದು, ಕೆಲವೆಡೆ ಅನಗತ್ಯ ಸನ್ನಿವೇಶಗಳು ದೀರ್ಘವೆನಿಸುತ್ತವೆ. ಜೊತೆಗೆ ಒಂದಷ್ಟು ಕಡೆ ಅಗತ್ಯ ವಿವರಣೆಗಳ ಕೊರತೆ ಎದ್ದು ಕಾಣುತ್ತದೆ. ಇವುಗಳ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನಹರಿಸಿ, ಚಿತ್ರದ ಅವಧಿಯನ್ನು ಕೊಂಚ ಮೊಟಕುಗೊಳಿಸಬಹುದಿತ್ತು.
ʻಟಾಕ್ಸಿಕ್ʼ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ; ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ‘ರಾಕಿ ಭಾಯ್’ ಯಶ್ ವಿಶೇಷ ಪೂಜೆ
ಸಾಹಸ ಸನ್ನಿವೇಶಗಳಿಗೆ ಹೇರಳವಾದ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಕಥೆಯು ಎಮೋಷನಲ್ ತಳಹದಿಯ ಮೇಲೆ ನಿಂತಿದ್ದರೂ, ಅದನ್ನು ಕಮರ್ಷಿಯಲ್ ಮಾದರಿಯಲ್ಲಿ ಕಟ್ಟಿಕೊಟ್ಟಿರುವುದು ಕೊಂಚ ಹಿನ್ನಡೆ ತಂದಿದೆ. ಕೆಲವು ಕಡೆ ಲಾಜಿಕ್‌ಗೆ ಪ್ರಾಮುಖ್ಯತೆ ಸಿಕ್ಕಿಲ್ಲ. ಛಾಯಾಗ್ರಾಹಕ ರಾಜೀವ್ ರವಿ ಸಿನಿಮಾಟೋಗ್ರಫಿ ಅದ್ಭುತವಾಗಿದ್ದು, ದೃಶ್ಯಗಳನ್ನು ಕಣ್ಮನ ಸೆಳೆಯುವಂತೆ ಸೆರೆಹಿಡಿದಿದ್ದಾರೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತದಲ್ಲಿ ಅಬ್ಬರವೇ ಕೊಂಚ ಹೆಚ್ಚಾಗಿದೆ. ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆಯ 'ತಬಾಹಿ' ಹಾಡು ಮಾತ್ರ ಕಿವಿಗೆ ಇಂಪಾಗಿದೆ.
ಐವರು ನಟಿಯರ ಸಂಗಮ
ಚಿತ್ರದಲ್ಲಿ ಹಲವು ಪ್ರಮುಖ ಪಾತ್ರಗಳು ಗಮನ ಸೆಳೆಯುತ್ತವೆ. ಅಕ್ಕನ ಪಾತ್ರದಲ್ಲಿ ನಯನತಾರಾ ಪ್ರಬುದ್ಧ ಅಭಿನಯ ನೀಡಿದ್ದಾರೆ. ರಾಯನ ಜೊತೆ ರೊಮ್ಯಾನ್ಸ್‌ನಲ್ಲಿ ಮಿಂಚುವ ಕಿಯಾರಾ ಅಡ್ವಾಣಿ, ಎಮೋಷನಲ್ ಸನ್ನಿವೇಶಗಳಲ್ಲೂ ಗಮನ ಸೆಳೆಯುತ್ತಾರೆ. ತಮ್ಮ ಗ್ಲಾಮರ್ ಇಮೇಜ್ ಬದಿಗಿಟ್ಟು ಇಂತಹ ಗಟ್ಟಿಯಾದ ಪಾತ್ರವನ್ನು ಅವರು ಒಪ್ಪಿರುವುದು ಶ್ಲಾಘನೀಯ. ಪರದೆಯ ಮೇಲಿರುವಷ್ಟು ಹೊತ್ತು ಹುಮಾ ಖುರೇಷಿ ತಮ್ಮ ಛಾಪು ಮೂಡಿಸುತ್ತಾರೆ. ದ್ವಿತೀಯಾರ್ಧದಲ್ಲಿ ರಾಯನ ಮೇಲೆಯೇ ಪ್ರಾಬಲ್ಯ ಸಾಧಿಸುವ ಪಾತ್ರದಲ್ಲಿ ರುಕ್ಮಿಣಿ ವಸಂತ್ ಆಕರ್ಷಕವಾಗಿ ನಟಿಸಿದ್ದಾರೆ. ತಾರಾ ಸುತಾರಿಯಾಗೆ ಉತ್ತಮ ಪಾತ್ರವೇ ಸಿಕ್ಕಿದ್ದು, ಅದನ್ನವರು ಸಮರ್ಥವಾಗಿ ನಿಭಾಯಿಸಿದ್ದಾರೆ.
ಒಟ್ಟಾರೆಯಾಗಿ, ‘ಟಾಕ್ಸಿಕ್’ ಹೈಲೈಟ್ ಆಗಿರುವುದೇ ಭರ್ಜರಿ ಆಕ್ಷನ್ ಮತ್ತು ಮೇಕಿಂಗ್‌ನಿಂದ! ಕಥೆಯ ಮೂಲವನ್ನು ಹೆಚ್ಚು ಹುಡುಕದೆ, ಲಾಜಿಕ್ ಬದಿಗಿಟ್ಟು ನೋಡಿದರೆ ಈ ಸಿನಿಮಾ ಆಕ್ಷನ್ ಪ್ರಿಯರಿಗೆ ಮನರಂಜನೆ ನೀಡುತ್ತದೆ. ಆದರೆ, ಸ್ಟಾರ್ ನಟ, ಪ್ರತಿಷ್ಠಿತ ನಿರ್ಮಾಣ ಸಂಸ್ಥೆ, ವಿಶ್ವಮಟ್ಟದ ತಂತ್ರಜ್ಞರು ಮತ್ತು ಬಹುತಾರಾಗಣವಿದೆ ಎಂಬ ಕಾರಣಕ್ಕೆ ಅಪಾರ ನಿರೀಕ್ಷೆ ಹೊತ್ತು ಬರುವ ಪ್ರೇಕ್ಷಕರಿಗೆ ಕೊಂಚ 'ಅಪೂರ್ಣ' ಎನಿಸುವ ಸಾಧ್ಯತೆಯೂ ಉಂಟು!