ಮುಂಬೈ: ಸ್ಯಾಂಡಲ್‌ವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಧೂಳೆಬ್ಬಿಲು ಸಿದ್ಧವಾಗುತ್ತಿದೆ ಯಶ್ (Yash) ನಟನೆಯ 'ಟಾಕ್ಸಿಕ್' ಸಿನಿಮಾ (Toxic Movie). ಪ್ರಶಾಂತ್ ನೀಲ್ ನಟನೆಯ ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಸಿನಿ ರಸಿಕರೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ, ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ʼಟಾಕ್ಸಿಕ್ʼ ಸದ್ಯ ಕುತೂಹಲ ಕೆರಳಿಸಿದೆ. ಕ್ಲಾಸ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ಮಲಯಾಳಂ ನಟಿ ಕಂ ನಿರ್ದೇಶಿಕಿ ಗೀತು ಮೋಹನ್‌ದಾಸ್ (Geethu Mohandas) ಹಾಲಿವುಡ್ ಚಿತ್ರದ ಶೈಲಿಯಲ್ಲಿ ʼಟಾಕ್ಸಿಕ್ʼಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗೋವಾದ ಡ್ರಗ್ಸ್ ಮಾಫಿಯಾದ ಸುತ್ತ ಇದರ ಕಥೆ ಸಾಗಲಿದೆ ಎನ್ನಲಾಗಿದ್ದು, ಸದ್ಯ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದು ತಲುಪಿದೆ.
ಬೆಂಗಳೂರು, ಗೋವಾ, ಮುಂಬೈ ಮುಂತಾದೆಡೆ ಚಿತ್ರೀಕರಣ ನಡೆಸಿರುವ ಸಿನಿಮಾ ತಂಡ ಇದೀಗ ಮತ್ತೆ ಮುಂಬೈಗೆ ಮರಳಿದೆ. ಮೂಲಗಳ ಪ್ರಕಾರ ಕೊನೆಯ ಹಂತದ ಚಿತ್ರೀಕರಣ ಮುಂಬೈಯಲ್ಲಿ ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿರುವ ಈ ಆ್ಯಕ್ಷನ್ ಥ್ರಿಲ್ಲರ್‌ಗಾಗಿ ಮುಂಬೈಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ʼʼಈ ಕೊನೆಯ ಹಂತದಲ್ಲಿ ಚಿತ್ರದ ಅತೀ ಮುಖ್ಯ ಘಟ್ಟದ ಭಾಗವನ್ನು ಚಿತ್ರೀಕರಿಸಲಾಗುತ್ತದೆ. ಮೈ ನವಿರೇಳಿಸುವ ಚೇಸಿಂಗ್, ಮುಖಾಮುಖಿ ಮತ್ತು ಭಾವನಾತ್ಮಕ ದೃಶ್ಯಗಳನ್ನು ಈ ಹಂತದಲ್ಲಿ ಸೆರೆ ಹಿಡಿಯಲಾಗುತ್ತದೆʼʼ ಎಂದು ಮೂಲಗಳು ತಿಳಿಸಿವೆ.
ʼʼಇದು ಮಾಮೂಲಿ ಆ್ಯಕ್ಷನ್ ಚಿತ್ರವಲ್ಲ. ಗೀತು ಮೋಹನ್‌ದಾಸ್ ವಿಭಿನ್ನವಾಗಿ ಸಿನಿಮಾ ಕಟ್ಟಿ ಕೊಡುತ್ತಿದ್ದಾರೆ. ಇದುವರೆಗೆ ನಟಿಸಿರದ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಲಿವುಡ್ ಲೆವೆಲ್‌ನಲ್ಲಿ ಚಿತ್ರ ಮೂಡಿ ಬರಲಿದೆ. ಯಶ್ ಈ ಚಿತ್ರದಲ್ಲಿ ನಟಿಸುವ ಜತೆಗೆ ವಿವಿಧ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕೆರಿಯರ್‌ನಲ್ಲೇ ಈ ಸಿನಿಮಾ ಮೈಲುಗಲ್ಲಾಗಿದೆʼʼ ಎಂದು ಅವರ ಆಪ್ತರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ರಾಜೀವ್ ರವಿ ಅವರ ಛಾಯಾಗ್ರಹಣ ʼಟಾಕ್ಸಿಕ್ʼ ಚಿತ್ರಕ್ಕಿದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ, ತಾರಾ ಸುತಾರಿಯಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಜ. 8ರಂದು ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಈಗಾಗಲೇ 20 ಕೋಟಿಗೂ ಹೆಚ್ಚು ವ್ಯೂಸ್ ಕಂಡು ಯುಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. 59 ಸೆಕೆಂಡ್‌ನ ಗ್ಲಿಂಪ್ಸ್ ಡ್ರಗ್ಸ್ ಮಾಫಿಯಾ ಕುರಿತ ಗ್ಲೋಬಲ್ ಸಿನಿಮಾ ಇದು ಎನ್ನುವ ಸೂಚನೆ ನೀಡಿದೆ. ಸ್ಟೈಲಿಶ್ ವಾಕ್, ಹಾಟ್ ಮ್ಯಾನರಿಸಮ್ ಲುಕ್‌ನಲ್ಲಿ ಯಶ್ ಗಮನ ಸೆಳೆದಿದ್ದಾರೆ. ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುವುದು ಗ್ಲಿಂಪ್ಸ್‌ನಲ್ಲಿ ಕಂಡು ಬಂದಿದೆ.
ಈ ಸುದ್ದಿಯನ್ನೂ ಓದಿ: Toxic Movie: ಹಾಲಿವುಡ್ ಲೆವೆಲ್‌ನಲ್ಲಿ ತಯಾರಾಗುತ್ತಿದೆ ʼಟಾಕ್ಸಿಕ್ʼ; ಇಂಗ್ಲಿಷ್‌ನಲ್ಲೂ ಶೂಟಿಂಗ್
ಬಹು ತಾರಾಗಣ, ಯಶ್ ಸ್ಟಾರ್‌ಗಿರಿ, ವಿಭಿನ್ನ ಕಥಾ ಹಂದರ, ಹಾಲಿವುಡ್ ಶೈಲಿಯ ಮೇಕಿಂಗ್ ಈ ಎಲ್ಲ ಕಾರಣಗಳಿಂದ ಈಗಾಗಲೇ ಕುತೂಹಲ ಕೆರಳಿಸಿರುವ ʼಟಾಕ್ಸಿಕ್ʼ ರಿಲೀಸ್ ಆದ ಬಳಿಕ ಬಾಕ್ಸ್ ಆಫೀಸ್‌ನ ದಾಖಲೆಗಳನ್ನೆಲ್ಲ ಉಡೀಸ್ ಮಾಡಲಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಈ ವರ್ಷಾಂತ್ಯದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.