ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುವ ರಾಜ್‌ಕುಮಾರ್‌ ನಟನೆಯ 3ನೇ ಸಿನಿಮಾಕ್ಕೆ ಸಿಕ್ಕೇ ಬಿಟ್ರು ಭರವಸೆಯ ನಿರ್ದೇಶಕ; ಯಾರವರು?

ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್ ಅವರು 'ಯುವ' ಮತ್ತು 'ಎಕ್ಕ' ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ತಮ್ಮ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಈ ಬಾರಿ ಜಡೇಶ್ ಕೆ ಹಂಪಿ ಅವರ ಜೊತೆಗೆ ಸಿನಿಮಾ ಮಾಡಲು ಯುವ ಒಪ್ಪಿಗೆ ನೀಡಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆಯಂತೆ.

ಕನ್ನಡ ಚಿತ್ರರಂಗದ ಭರವಸೆಯ ನಟ, ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ಅವರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಮುಂದಿನ ಹೆಜ್ಜೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾರಥ್ಯದ 'ಯುವ' ಚಿತ್ರದ ಮೂಲಕ ಅದ್ಧೂರಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಯುವ, ಮಾಸ್ ಆಕ್ಷನ್ ಹಾಗೂ ಡ್ಯಾನ್ಸ್ ಮೂಲಕ ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.

ಅದಾದ ಬಳಿಕ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಚಿತ್ರದಲ್ಲಿ ಯುವ ರಾಜ್‌ಕುಮಾರ್ ನಟಿಸಿದ್ದರು. ಕಳೆದ ವರ್ಷ ತೆರೆಕಂಡಿದ್ದ 'ಎಕ್ಕ' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಾಗೂ ವಿಮರ್ಶಾತ್ಮಕವಾಗಿ ಉತ್ತಮ ರೆಸ್ಪಾನ್ಸ್ ಪಡೆದು, ಯುವ ಅವರ ಸಿನಿಮಾ ಕರಿಯರ್‌ಗೆ ಒಂಚೂರು ಬೂಸ್ಟ್‌ ನೀಡಿತ್ತು. ಇದೀಗ ಯುವ ರಾಜ್‌ಕುಮಾರ್ ತಮ್ಮ ಮೂರನೇ ಚಿತ್ರವನ್ನು ಆರಂಭಿಸುವ ಭರ್ಜರಿ ತಯಾರಿಯಲ್ಲಿದ್ದಾರೆ.

Ekka Kannada Movie: ʼಎಕ್ಕʼ ರಿಲೀಸ್‌ ಡೇಟ್‌ ಫಿಕ್ಸ್‌; ಜು. 18ಕ್ಕೆ ತೆರೆಗೆ ಬರಲಿದೆ ಯುವ ರಾಜ್‌ಕುಮಾರ್‌ ಚಿತ್ರ

ಜಡೇಶ್ ಕೆ. ಹಂಪಿ ಜೊತೆ ಯುವ ಹೊಸ ಸಿನಿಮಾ

ಯುವ ಅವರ ಈ ಮೂರನೇ ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಅದಕ್ಕೀಗ ಸ್ಯಾಂಡಲ್‌ವುಡ್ ಅಂಗಳದಿಂದ ಒಂದು ಎಕ್ಸ್‌ಕ್ಲೂಸಿವ್ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ, ಯುವ ರಾಜ್‌ಕುಮಾರ್ ಅವರು ಈ ಬಾರಿ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಕಥೆಗಾರ ಹಾಗೂ ನಿರ್ದೇಶಕ ಜಡೇಶ್ ಕೆ. ಹಂಪಿ ಅವರೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ. ಹೊಸ ಪ್ರಾಜೆಕ್ಟ್‌ಗಾಗಿ ಇಬ್ಬರ ನಡುವೆ ಈಗಾಗಲೇ ಸರಣಿ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಈ ಬೆಳವಣಿಗೆಯ ಕುರಿತು ಚಿತ್ರತಂಡದಿಂದ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಬೀಳದಿದ್ದರೂ, ಹೊಸ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಚಾಲ್ತಿಯಲ್ಲಿದ್ದು, ಇಬ್ಬರ ಕಾಂಬಿನೇಷನ್ ಫಿಕ್ಸ್ ಆಗಿದೆ ಎಂದು ಆಪ್ತ ವಲಯಗಳು ಖಚಿತಪಡಿಸಿವೆ.

'ಕಾಟೇರ' ಖ್ಯಾತಿಯ ಜಡೇಶ್

ನಿರ್ದೇಶಕ ಜಡೇಶ್ ಕೆ. ಹಂಪಿ ಅವರು ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಿಸಿರುವ 'ರಾಜಹಂಸ', 'ಜಂಟಲ್‌ಮನ್' ಮತ್ತು ಶರಣ್ ಅಭಿನಯದ ಸೂಪರ್ ಹಿಟ್ 'ಗುರು ಶಿಷ್ಯರು' ಹಾಗೂ ದುನಿಯಾ ವಿಜಯ್‌ ಅವರ 'ಲ್ಯಾಂಡ್‌ಲಾರ್ಡ್' ಸಿನಿಮಾಗಳು ವಿಭಿನ್ನ ಕಥಾಹಂದರದಿಂದ ಗಮನ ಸೆಳೆದಿದ್ದವು. ಇವರ ಸಿನಿಮಾಗಳಲ್ಲಿ ಸದಾ ಈ ಮಣ್ಣಿನ ಸೊಗಡಿನ ಮತ್ತು ನೈಜತೆಯ ಕಥೆಗಳಿರುತ್ತವೆ. ಕೇವಲ ನಿರ್ದೇಶನ ಮಾತ್ರವಲ್ಲದೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಇಂಡಸ್ಟ್ರಿ ಹಿಟ್ ಬ್ಲಾಕ್‌ಬಸ್ಟರ್ 'ಕಾಟೇರ' ಚಿತ್ರಕ್ಕೆ ಕಥೆ-ಸಂಭಾಷಣೆ ಬರೆಯುವ ಮೂಲಕ ಜಡೇಶ್ ಜನಮನ್ನಣೆ ಗಳಿಸಿದ್ದರು. ಆ ಚಿತ್ರವು ತನ್ನ ಗ್ರಾಮೀಣ ಹಿನ್ನೆಲೆ, ಕ್ರಾಂತಿಕಾರಿ ಹಾಗೂ ಭಾವನಾತ್ಮಕ ಕಥೆಯ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Ekka Movie: ಅಪ್ಪು ಹುಟ್ಟುಹಬ್ಬಕ್ಕೆ ಹೊರಬಂತು ʼಎಕ್ಕʼ ಚಿತ್ರದ ಟೈಟಲ್‌ ಟ್ರ್ಯಾಕ್‌; ಭರ್ಜರಿಯಾಗಿ ಹೆಜ್ಜೆ ಹಾಕಿದ ಯುವ ರಾಜ್‌ಕುಮಾರ್‌

ಶೀಘ್ರದಲ್ಲೇ ಘೋಷಣೆ?

ಈಗ ಅಂತಹದ್ದೇ ಒಂದು ಕಮರ್ಷಿಯಲ್ ಹಾಗೂ ಕಂಟೆಂಟ್ ಆಧಾರಿತ ಪವರ್‌ಫುಲ್ ಕಥೆಯನ್ನು ಜಡೇಶ್ ಅವರು ಯುವ ರಾಜ್‌ಕುಮಾರ್ ಅವರಿಗಾಗಿ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಯುವ ಮತ್ತು ಜಡೇಶ್‌ ಸೇರಿ ಈ ಹೊಸ ಸ್ಕ್ರಿಪ್ಟ್ ಕುರಿತು ಸುದೀರ್ಘ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದು, ಯುವ ಅವರ ಮಾಸ್ ಇಮೇಜ್‌ಗೆ ತಕ್ಕಂತೆ ಈ ಕಥೆ ಇರಲಿದೆಯಂತೆ. ಈ ಹೊಸ ಸಿನಿಮಾದ ಕುರಿತು ಶೀಘ್ರದಲ್ಲೇ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.