ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Cult Movie Review: ʻಸಾರಾಯಿ ಸೀಸೆಯಲಿ ನನ್ನ ದೇವಿ ಕಾಣುವಳುʼ ಎನ್ನುವ ಭಗ್ನಪ್ರೇಮಿಯೊಬ್ಬನ ʼಕಲ್ಟ್‌ʼ ಲವ್‌ ಸ್ಟೋರಿ

Cult Review: ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾವು ಪ್ರೀತಿಯಲ್ಲಿ ಸೋತ ಭಗ್ನಪ್ರೇಮಿಯೊಬ್ಬನ ಭಾವನಾತ್ಮಕ ಪಯಣದ ಕಥೆಯನ್ನು ಹೊಂದಿದೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದ ಹೇಗಿದೆ? ಸಿನಿಪ್ರಿಯರಿಗೆ ಝೈದ್‌ ಖಾನ್‌ ನಟನೆಯ ಇಷ್ಟವಾಗುತ್ತದೆಯಾ? ಮುಂದೆ ಓದಿ.

ಬನಾರಸ್‌ ಸಿನಿಮಾದ ನಂತರ ನಟ ಝೈದ್‌ ಖಾನ್‌ ಅವರು ಕಲ್ಟ್‌ ಸಿನಿಮಾ ಘೋಷಿಸಿದ್ದರು. ಬನಾರಸ್‌ ಸಿನಿಮಾದಲ್ಲಿ ಚಾಕೋಲೆಟ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದ ಝೈದ್‌ ಖಾನ್‌, ಕಲ್ಟ್‌ ಸಿನಿಮಾದ ಪೋಸ್ಟರ್‌ಗಳಿಂದಲೇ ಅಚ್ಚರಿ ಮೂಡಿಸಿದ್ದರು. ಇದೀಗ ಕಲ್ಟ್‌ ಸಿನಿಮಾ ತೆರೆಕಂಡಿದೆ.

ಕಲ್ಟ್‌ ಸಿನಿಮಾದ ಕಥೆ ಏನು?

ಉತ್ತಮ ವಿದ್ಯಾರ್ಥಿ ಎನಿಸಿಕೊಂಡ ಮಾಧವ್‌ ಅಲಿಯಾಸ್‌ ಮ್ಯಾಡಿ (ಝೈದ್‌ ಖಾನ್) ಉಡುಪಿಯಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾನೆ. ಆದರೆ ಓದುಬಿಟ್ಟು ಕುಡಿತದ ದಾಸನಾಗಿದ್ದಾನೆ. ಯಾವ ಮಟ್ಟಕ್ಕೆಂದರೆ, ಇವನು ಕುಡಿದು ಬಿಸಾಕಿದ ಬಾಟಲಿಗಳನ್ನೇ ಮಾರಿದ್ದಕ್ಕೆ ಗುಜರಿ ಅಂಗಡಿಯವನು ಹೊಸ ಗಾಡಿ ಖರೀದಿ ಮಾಡಿರುತ್ತಾನೆ! ಅಷ್ಟೊಂದು ದೊಡ್ಡ ಕುಡುಕ ಈ ಮ್ಯಾಡಿ. ಅಷ್ಟಕ್ಕೂ ಇವನು ಕುಡಿಯಲು ಕಾರಣ, ತಾನು ಇಷ್ಟಪಟ್ಟ ಹುಡುಗಿ ಗೀತಾ (ಮಲೈಕಾ) ಜೊತೆಗಿಲ್ಲ ಎಂಬುದು. ಹೀಗೆ ಭಗ್ನ ಪ್ರೇಮಿಯಾಗಿರುವ ಮ್ಯಾಡಿ ಬಾಳಲ್ಲಿ ಇತಿಹಾಸಿನಿ (ರಚಿತಾ) ಎಂಟ್ರಿ ಕೊಡುತ್ತಾಳೆ. ಅಂತಿಮವಾಗಿ ತನ್ನಿಂದ ದೂರವಾದ ಗೀತಾಳ ಜೊತೆ ಮ್ಯಾಡಿ ಸೇರುತ್ತಾನಾ? ಅಷ್ಟಕ್ಕೂ ಗೀತಾ ದೂರವಾಗೋದು ಏಕೆ? ಇತಿಹಾಸಿನಿ ಮತ್ತು ಮ್ಯಾಡಿ ಒಂದಾಗುತ್ತಾರಾ ಎಂಬ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಸಾಗುವ ಕಥೆಯೇ ʻಕಲ್ಟ್‌ʼ ಸಿನಿಮಾ.

ಮೇಕಿಂಗ್‌ ಹೇಗಿದೆ?

ನಿರ್ದೇಶಕ ಅನಿಲ್‌ ಕುಮಾರ್‌ ಈ ಹಿಂದೆ ಉಪಾಧ್ಯಕ್ಷ ಎಂಬ ಕಾಮಿಡಿ ಸಿನಿಮಾವನ್ನು ನಿರ್ದೇಶಿಸಿ, ಸಕ್ಸಸ್‌ ಆಗಿದ್ದರು. ಆದರೆ ಈ ಬಾರಿ ಕಲ್ಟ್‌ ಎಂಬ ತ್ರಿಕೋನ ಪ್ರೇಮಕಥೆಯನ್ನು ಹೇಳುವುದಕ್ಕೆ ಹೋಗಿದ್ದಾರೆ. ಅದರ ಜೊತೆಗೆ ಹೀರೋಗೆ ಒಂದಷ್ಟು ಬಿಲ್ಡಪ್‌, ಭಗ್ನ ಪ್ರೇಮಿಗಳ ಮನಗೆಲ್ಲೋಕೆ ಪ್ರೀತಿ ಬಗ್ಗೆ ಒಂಚೂರು ಪಂಚಿಂಗ್‌ ಡೈಲಾಗ್ಸ್‌ ಅನ್ನು ಕೂಡ ಇಡಲಾಗಿದೆ. ಇದರ ಜೊತೆಗೆ ಕಥೆ ಮೂಲ ಆಶಯದ ಬಗ್ಗೆ ಇನ್ನಷ್ಟು ಸ್ಟ್ರಾಂಗ್‌ ಬರವಣಿಗೆ ಬೇಕಿತ್ತು.

Actor Zaid Khan: ನಟ ದರ್ಶನ್‌ಗೆ ಜನವರಿಯಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ: ನಟ ಝೈದ್‌ ಖಾನ್

ಅರ್ಜುನ್‌ ಜನ್ಯ ಸಂಗೀತದಲ್ಲಿ ಅಯ್ಯೋ ಶಿವನೇ ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತ ಕೂಡ ಮಸ್ತ್‌ ಆಗಿದೆ. ಆದರೆ ಸ ಹಿ ಪ್ರಾ ಶಾಲೆ ಕಾಸರಗೋಡು ಚಿತ್ರದ ಹೇ ಶಾರದೆ ಮತ್ತು ಆಲ್‌ಓಕೆ ಅವರ ಹ್ಯಾಪಿ ಹಾಡನ್ನು ಪುನಃ ಬಳಸಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ! ರವಿವರ್ಮ ಕಂಪೋಸ್‌ ಮಾಡಿರುವ ಫೈಟ್ಸ್‌ನಲ್ಲಿ ಹೊಸತನವಿದೆ. ಜೆ ಎಸ್‌ ವಾಲಿ ಛಾಯಾಗ್ರಹಣ ಚೆನ್ನಾಗಿದೆ. ರಚಿತಾ ರಾಮ್‌ ಅವರ ಎಪಿಸೋಡ್‌ನ ಫ್ಲಾಶ್‌ಬ್ಯಾಕ್‌ ಕಥೆಯಲ್ಲಿ ಗಟ್ಟಿತನವಿದೆ. ಲವ್‌ ಸ್ಟೋರಿ ಜೊತೆಗೆ ಪೋಷಕರ ಸೆಂಟಿಮೆಂಟ್‌ಗೂ ಅನಿಲ್‌ ಕುಮಾರ್‌ ಜಾಗ ಮಾಡಿದ್ದಾರೆ.

ನಟನೆಯಲ್ಲಿ ಮಾಗಿದ ಝೈದ್‌; ಮಿಂಚಿದ ರಚಿತಾ

ನಟ ಝೈದ್‌ ಖಾನ್‌ ಅವರು ಬನಾರಸ್‌ ಸಿನಿಮಾಗೆ ಹೋಲಿಸಿದರೆ, ನಟನೆಯಲ್ಲಿ ಜಾಸ್ತಿಯೇ ಮಾಗಿದ್ದಾರೆ. ಈ ಬಾರಿ ಅವರೇ ತಮ್ಮ ಪಾತ್ರಕ್ಕೆ ಡಬ್ಬಿಂಗ್‌ ಕೂಡ ಮಾಡಿರುವುದು ಅವರೊಳಗಿನ ಕಲಾವಿದ ಹೆಚ್ಚು ಬೆಳೆದಿದ್ದಾನೆ ಎಂಬುದಕ್ಕೆ ಸಾಕ್ಷಿ. ಹಳ್ಳಿಯ ಮುಗ್ಧಹುಡುಗನಾಗಿ, ಭಗ್ನ ಪ್ರೇಮಿಯಾಗಿ ಝೈದ್‌ ಖಾನ್‌ ಅವರ ನಟನೆ ಚೆನ್ನಾಗಿದೆ. ಆಕ್ಷನ್‌ ಸೀನ್‌ಗಳಲ್ಲೂ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ರಚಿತಾಗೆ ಮತ್ತೊಂದು ಸವಾಲಿನ ಪಾತ್ರ ಎನ್ನಬಹುದು. ಇಂಥ ಪಾತ್ರಗಳನ್ನು ಮಾಡುವುದಕ್ಕೆ ದೈಹಿಕವಾಗಿ ಮಾತ್ರವಲ್ಲದೇ, ಮಾನಸಿಕವಾಗಿಯೂ ಸದೃಢವಾಗಿರಬೇಕು. ಅದನ್ನಿಲ್ಲಿ ರಚಿತಾ ಸಾಬೀತು ಮಾಡಿದ್ದಾರೆ. ಮಲೈಕಾಗೆ ಈ ಬಾರಿ ಬೇರೆಯದೇ ಶೇಡ್‌ನ ರೋಲ್‌ ಸಿಕ್ಕಿದೆ. ಎರಡು ರೀತಿಯ ಪಾತ್ರದಲ್ಲೂ ತಮ್ಮ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ಧಾರೆ.‌

Cult Movie: ದೂರು ಹಿಂಪಡೆದ ಡ್ರೋನ್‌ ತಂತ್ರಜ್ಞ, ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾ ಶೂಟಿಂಗ್‌ ನಿರಾತಂಕ

ಕಿಶನ್‌ ಬಿಳಗಲಿಗೆ ಒಂದು ಸರ್ಪ್ರೈಸ್‌ ಎಂಟ್ರಿ ಇದೆ. ಜೊತೆಗೆ ಕಥೆ ಮೇನ್‌ ತಿರುವು ನೀಡುವುದು ಕೂಡ ಇವರೇ. ಇನ್ನು, ಹಂಪಿ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳುವ ರಂಗಾಯಣ ರಘು ಇಷ್ಟವಾಗುತ್ತಾರೆ. ರಂಗಾಯಣ ರಘು ಮತ್ತು ರಚಿತಾ ಕಾಂಬಿನೇಷನ್‌ನ ಸೀನ್‌ಗಳು ಸಿನಿಮಾವನ್ನು ಎಮೋಷನಲ್‌ ಮಾಡುತ್ತವೆ. ಆಲ್‌ಓಕೆ, ಅಚ್ಯುತ್‌ ಕುಮಾರ್‌ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

Movie: ಕಲ್ಟ್‌
Release Date: ಜನವರಿ 23, 2026
Language: ಕನ್ನಡ
Genre: ರೊಮ್ಯಾನ್ಸ್, ಡ್ರಾಮಾ,
Director: ಅನಿಲ್‌ ಕುಮಾರ್‌
Cast: ಝೈದ್‌ ಖಾನ್‌, ಮಲೈಕಾ, ರಚಿತಾ ರಾಮ್‌, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಅಲೋಕ್, ಕಿಶನ್‌ ಬಿಳಗಲಿ
Duration: 163 ನಿಮಿಷ
Rating: 3/5