‘ಡಾಲಿ’ ಧನಂಜಯ ಅಭಿನಯಿಸಿ, ಸ್ವತಃ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಡಾರ್ಕ್-ಕಾಮಿಡಿ ಕಥಾಹಂದರದ ‘ಮದರ್ ಪ್ರಾಮಿಸ್’ ಚಿತ್ರ ಇದೀಗ ಡಿಜಿಟಲ್ ಲೋಕಕ್ಕೆ ಕಾಲಿಡಲು ಸಂಪೂರ್ಣ ಸಜ್ಜಾಗಿದೆ. ಬೆಳ್ಳಿಪರದೆಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಈ ವಿಶಿಷ್ಟ ಸಿನಿಮಾ, ಅಕ್ಟೋಬರ್ 2ರ ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಒಟಿಟಿ ವೇದಿಕೆ ‘ಜೀ5 ಕನ್ನಡ’ದಲ್ಲಿ (ZEE5 Kannada) ನೇರವಾಗಿ ಪ್ರಸಾರವಾಗಲಿದೆ. ಅಪರಾಧ ಜಗತ್ತು, ಹೊಟ್ಟೆಹುಣ್ಣಾಗಿಸುವ ಹಾಸ್ಯ ಹಾಗೂ ತಾಯಿ-ಮಗನ ನಡುವಿನ ಬಾಂಧವ್ಯದ ಎಳೆಯೊಂದಿಗೆ ಮೂಡಿಬಂದಿರುವ ಈ ಚಿತ್ರ ಡಿಜಿಟಲ್ ಪ್ರೀಮಿಯರ್ ಮೂಲಕ ಪ್ರೇಕ್ಷಕರ ಮನೆ-ಮನ ತಲುಪಲು ತಯಾರಾಗಿದೆ.
ಏನಿದರ ಕಥೆ?
ಬೆಂಗಳೂರಿನ ಕಾಲ್ಪನಿಕ ಭೂಗತ ಜಗತ್ತಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಕಥೆಯು, ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗುವ ‘ರೋಸ್ಸಿ’ ಎಂಬ ವಿಚಿತ್ರ ಸ್ವಭಾವದ ಜೂಜುಕೋರನ ಸುತ್ತ ಹೆಣೆಯಲಾಗಿದೆ. ಈತನ ಎಡವಟ್ಟು ವರ್ತನೆಗಳು ನಗರದ ಪ್ರಭಾವಿ ಡಾನ್‌ಗಳು, ಸ್ಮಗ್ಲರ್‌ಗಳು ಹಾಗೂ ಅನಿರೀಕ್ಷಿತ ವ್ಯಕ್ತಿಗಳ ನಡುವೆ ಭೀಕರ ಸಂಘರ್ಷಕ್ಕೆ ನಾಂದಿ ಹಾಡುತ್ತವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹಾಗೂ ಕೌಟುಂಬಿಕ ಜವಾಬ್ದಾರಿಯನ್ನು ಕಾಪಾಡಿಕೊಳ್ಳಲು ಒಬ್ಬ ವ್ಯಕ್ತಿ ಎಷ್ಟರಮಟ್ಟಿಗೆ ಹೋರಾಡಬಲ್ಲ ಎಂಬುದನ್ನು ರೋಚಕ, ಭಾವನಾತ್ಮಕ ಸನ್ನಿವೇಶಗಳ ಮೂಲಕ ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.
ಅನುಭವಿ ಕಲಾವಿದರ ದಂಡು
ಚಿತ್ರದಲ್ಲಿ ನಟ ಧನಂಜಯ ಜೊತೆಗೆ ಪೂರ್ಣಚಂದ್ರ ಮೈಸೂರು, ಹಿರಿಯ ನಟಿಯರಾದ ವಿನಯಾ ಪ್ರಸಾದ್, ಗೀತಾ, ನಟರಾದ ನಾಗಭೂಷಣ ಎನ್.ಎಸ್., ಚಿ. ಗುರುದತ್, ಮಹಾದೇವ್ ಪ್ರಸಾದ್, ನರೇಶ್ ಡಿಂಗ್ರಿ ಹಾಗೂ ಶ್ರೀವತ್ಸ ಶ್ಯಾಮ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ತಾರಾಗಣವಿದೆ. ಗ್ಯಾಂಗ್‌ಸ್ಟರ್ ದ್ವೇಷ, ಅನಿರೀಕ್ಷಿತ ತಿರುವುಗಳು ಮತ್ತು ಊಹಿಸಲಾಗದ ಸನ್ನಿವೇಶಗಳ ನಡುವೆಯೂ ಚಿತ್ರದ ಆಂತರ್ಯದಲ್ಲಿರುವ ತಾಯಿ-ಮಗನ ಸೆಂಟಿಮೆಂಟ್ ಇಡೀ ಕಥೆಗೆ ಭದ್ರವಾದ ಭಾವನಾತ್ಮಕ ನೆಲೆಯನ್ನು ಒದಗಿಸಿದೆ.
ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಿ
ಚಿತ್ರದ ಒಟಿಟಿ ಬಿಡುಗಡೆ ಕುರಿತು ಮಾತನಾಡಿದ ನಟ ಧನಂಜಯ, "‘ಮದರ್ ಪ್ರಾಮಿಸ್’ ಹಾಸ್ಯ, ಅಪರಾಧ, ಗೊಂದಲ ಮತ್ತು ಕೌಟುಂಬಿಕ ಭಾವನೆಗಳ ಅಪರೂಪದ ಹೂರಣ. ಭೂಗತ ಜಗತ್ತಿನ ಹಿನ್ನೆಲೆಯಿದ್ದರೂ ತಾಯಿ-ಮಗನ ಬಾಂಧವ್ಯವೇ ಈ ಚಿತ್ರದ ಅಸಲಿ ಜೀವಾಳ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರು ಈಗ ಜೀ5 ಮೂಲಕ ಮನೆಯಲ್ಲೇ ಕುಟುಂಬ ಸಮೇತರಾಗಿ ಈ ವಿಶಿಷ್ಟ ಜಾನರ್‌ನ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಪ್ರಾರ್ಥನಾ ಗೀತೆ ಬರೆದ ʻಡಾಲಿʼ ಧನಂಜಯ; ಸಿದ್ದಗಂಗಾ ಮಠದ ಅಂಗಳದಲ್ಲಿ ನಡೆಯಿತು ‘ಮದರ್ ಪ್ರಾಮಿಸ್’ ಚಿತ್ರೀಕರಣ
ಈ ಚಿತ್ರ ಕನ್ನಡಿಗರಿಗೆ ತಲುಪುವ ಸಂಪೂರ್ಣ ವಿಶ್ವಾಸವಿದೆ
ಚಿತ್ರದ ನಿರ್ದೇಶಕ ಪೂರ್ಣಚಂದ್ರ ಮೈಸೂರು ಮಾತನಾಡಿ, "ಕ್ರೈಂ ಜಾನರ್‌ನಲ್ಲಿ ಹಾಸ್ಯದ ಜೊತೆಗೆ ತಾಯಿಯ ಮಾತಿನ ಪಾವಿತ್ರ್ಯತೆಯನ್ನು ಒಟ್ಟಿಗೆ ತೆರೆಗೆ ತರುವುದು ದೊಡ್ಡ ಸವಾಲಾಗಿತ್ತು. ಇಂತಹ ಅದ್ಭುತ ಪ್ರತಿಭೆಗಳ ಜೊತೆ ಕೆಲಸ ಮಾಡಿದ್ದು ಉತ್ತಮ ಅನುಭವ ನೀಡಿದೆ. ಒಟಿಟಿ ಮೂಲಕ ಚಿತ್ರವು ವಿಶ್ವಾದ್ಯಂತ ಇರುವ ಕನ್ನಡಿಗರಿಗೆ ತಲುಪುವ ಸಂಪೂರ್ಣ ವಿಶ್ವಾಸವಿದೆ" ಎಂದಿದ್ದಾರೆ.
ಜೀ5 ಕನ್ನಡದ ಬಿಸಿನೆಸ್ ಹೆಡ್ ಎಸ್. ದೀಪಕ್ ಅವರು, "ಕನ್ನಡ ಪ್ರೇಕ್ಷಕರಿಗೆ ಸದಾ ಹೊಸ ಬಗೆಯ ಹಾಗೂ ಉತ್ಕೃಷ್ಟ ಕಂಟೆಂಟ್ ತಲುಪಿಸುವ ನಮ್ಮ ಪ್ರಯತ್ನದಲ್ಲಿ ‘ಮದರ್ ಪ್ರಾಮಿಸ್’ ಚಿತ್ರ ಒಟಿಟಿ ಲೈಬ್ರರಿಗೆ ಬಲ ತಂದಿದೆ. ಅಕ್ಟೋಬರ್ 2 ರಿಂದ ಸಿನಿಪ್ರಿಯರು ಈ ಮನರಂಜನಾತ್ಮಕ ಚಿತ್ರವನ್ನು ವೀಕ್ಷಿಸಬಹುದು" ಎಂದು ಖಚಿತಪಡಿಸಿದ್ದಾರೆ.