ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ-ಪಾಕಿಸ್ತಾನದ 117 ಗಣ್ಯರಿಂದ ಪ್ರಧಾನಿ ನರೇಂದ್ರ ಮೋದಿ, ಶೆಹಬಾಜ್ ಶರೀಫ್‌ಗೆ ಬಹಿರಂಗ ಪತ್ರ: ಶಾಂತಿ ಮಾತುಕತೆಗೆ ಮನವಿ

ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ 117 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಶೆಹಬಾಜ್ ಶರೀಫ್ ಅವರಿಗೆ ಬಹಿರಂಗ ಪತ್ರ ಬರೆದು ಶಾಂತಿ ಮಾತುಕತೆಗಳನ್ನು ಮರುಪ್ರಾರಂಭಿಸಲು ಮನವಿ ಮಾಡಿದ್ದಾರೆ. ರಾಜತಾಂತ್ರಿಕ ಸಂಬಂಧಗಳ ಪುನರುಜ್ಜೀವನ, ವೀಸಾ ಸೇವೆಗಳ ಮರುಆರಂಭ, ಗಡಿ ವ್ಯಾಪಾರ ಮತ್ತು ಬಸ್ ಸೇವೆಗಳ ಪುನರಾರಂಭ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಆದರೆ, ಗಡಿಯಾಚೆಗಿನ ಭಯೋತ್ಪಾದನೆ ಸಂಪೂರ್ಣ ನಿಂತ ಬಳಿಕವೇ ಮಾತುಕತೆ ಸಾಧ್ಯ ಎಂಬ ತನ್ನ ನಿಲುವನ್ನು ಭಾರತ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ನರೇಂದ್ರ ಮೋದಿ - ಶೆಹಬಾಜ್ ಶರೀಫ್ (ಸಂಗ್ರಹ ಚಿತ್ರ)

ವದೆಹಲಿ, ಜು. 1: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ನಡೆದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಪ್ರಮುಖ ರಾಜಕಾರಣಿಗಳು ಹಾಗೂ ಸಾರ್ವಜನಿಕ ಗಣ್ಯರು ಸೇರಿ 100ಕ್ಕೂ ಹೆಚ್ಚು ಪ್ರಸಿದ್ಧ ವ್ಯಕ್ತಿಗಳು ಉಭಯ ದೇಶಗಳ ನಡುವೆ ಶಾಂತಿ ಮತ್ತು ಸಾಮಾನ್ಯ ದ್ವಿಪಕ್ಷೀಯ ಸಂಬಂಧಗಳನ್ನು ಮರುಸ್ಥಾಪಿಸಲು ಒಟ್ಟಾಗಿ ಕರೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಅವರಿಗೆ ಜಂಟಿ ಮನವಿ ಸಲ್ಲಿಸಿರುವ ಅವರು, ಸುಸ್ಥಿರ ಶಾಂತಿಗಾಗಿ ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

'ಸೆಂಟರ್ ಫಾರ್ ಪೀಸ್ ಆ್ಯಂಡ್‌ ಪ್ರೋಗ್ರೆಸ್' ಬಿಡುಗಡೆ ಮಾಡಿರುವ ಈ ಬಹಿರಂಗ ಪತ್ರಕ್ಕೆ ಭಾರತದ 61 ಮತ್ತು ಪಾಕಿಸ್ತಾನದ 56 ಜನ ಸೇರಿ ಒಟ್ಟು 117 ಗಣ್ಯರು ಸಹಿ ಹಾಕಿದ್ದಾರೆ. ದೀರ್ಘಕಾಲದ ಹಗೆತನವು ಕೋಟ್ಯಂತರ ಯುವ ಪೀಳಿಗೆಯ ಅವಕಾಶಗಳು, ಸಮೃದ್ಧಿ ಮತ್ತು ಸುರಕ್ಷಿತ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಈ ಗಣ್ಯರು ಉಭಯ ಸರ್ಕಾರಗಳಿಗೆ ಎಚ್ಚರಿಸಿದ್ದಾರೆ. ಭಾರತದ ಕಡೆಯಿಂದ ಫಾರೂಕ್ ಅಬ್ದುಲ್ಲಾ, ಮಿರ್ವೈಜ್ ಉಮರ್ ಫಾರೂಕ್, ಮೆಹಬೂಬಾ ಮುಫ್ತಿ, ಮನೋಜ್ ಝಾ ಸಹಿ ಹಾಕಿದ್ದರೆ, ಖುರ್ಷಿದ್ ಮಹಮೂದ್ ಕಸೂರಿ, ಅಶ್ರಫ್ ಜೆಹಾಂಗೀರ್ ಖಾಜಿ ಮತ್ತು ಪರ್ವೇಜ್ ಹೂಡ್‌ಭಾಯ್ ಪಾಕಿಸ್ತಾನದ ಪ್ರಮುಖರು.

ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಮೃತದೇಹದಿಂದ ಮೆದುಳು, ಹೃದಯ ಸೇರಿ ಹಲವು ಅಂಗಾಂಗ ನಾಪತ್ತೆ!

ಉಭಯ ದೇಶಗಳ ನಡುವೆ ವಿಶ್ವಾಸ ವೃದ್ಧಿಸಲು ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಬೇಕು, ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಹೈಕಮಿಷನರ್‌ಗಳನ್ನು ಮರುನೇಮಕ ಮಾಡಬೇಕು, ವೀಸಾ ಸೇವೆಗಳನ್ನು ಪುನರಾರಂಭಿಸಬೇಕು ಮತ್ತು ವಾಣಿಜ್ಯ ವಿಮಾನಗಳಿಗಾಗಿ ವಾಯುಪ್ರದೇಶವನ್ನು ಮುಕ್ತಗೊಳಿಸಬೇಕು ಎಂದು ಗಣ್ಯರು ಕೋರಿದ್ದಾರೆ. ಇದರೊಂದಿಗೆ ವ್ಯಾಪಾರಕ್ಕಾಗಿ ಅಟ್ಟಾರಿ-ವಾಗ್ಹಾ ಭೂ ಗಡಿಯನ್ನು ಪುನಃ ತೆರೆಯುವುದು, ಶ್ರೀನಗರ-ಮುಜಾಫರಾಬಾದ್ ಬಸ್ ಸೇವೆ ಪುನರಾರಂಭಿಸುವುದು ಹಾಗೂ ಪಾಕಿಸ್ತಾನದ ನೀಲಂ ಕಣಿವೆಯಲ್ಲಿರುವ ಶಾರದಾ ಪೀಠಕ್ಕೆ ಸುಲಭ ಪ್ರಯಾಣ ಕಲ್ಪಿಸುವುದು ಶಾಂತಿ ಸ್ಥಾಪನೆಗೆ ಪೂರಕವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಳೆಯ ವಿವಾದಗಳನ್ನು ಇತ್ಯರ್ಥಗೊಳಿಸಲು 2004 ಮತ್ತು 2007ರ ನಡುವೆ ನಡೆದ ಸಮಾಲೋಚನೆಗಳ ಚೌಕಟ್ಟನ್ನು ಮರುಪರಿಶೀಲಿಸುವಂತೆ ಪತ್ರದಲ್ಲಿ ವಿನಂತಿಸಲಾಗಿದೆ. ಆದರೆ ಪಾಕಿಸ್ತಾನದ ಕುರಿತು ನವದೆಹಲಿಯ ಕಠಿಣ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

"ಭಯೋತ್ಪಾದನೆ ಮತ್ತು ಮಾತುಕತೆ ಜತೆಯಾಗಿ ಸಾಗಲು ಸಾಧ್ಯವಿಲ್ಲ, ಹಾಗೆಯೇ ಭಯೋತ್ಪಾದನೆ ಮತ್ತು ವ್ಯಾಪಾರ ಒಂದೇ ದಾರಿಯಲ್ಲಿ ಹೋಗಲು ಸಾಧ್ಯವಿಲ್ಲ" ಎಂದು ಭಾರತ ಸರ್ಕಾರವು ಪುನರುಚ್ಚರಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ಸಂಪೂರ್ಣವಾಗಿ ನಿಂತರೆ ಮಾತ್ರ ದ್ವಿಪಕ್ಷೀಯ ಬಾಂಧವ್ಯ ಸುಧಾರಿಸಲು ಸಾಧ್ಯ ಎಂದು ಭಾರತ ಸ್ಪಷ್ಟಪಡಿಸಿದೆ. ದಕ್ಷಿಣ ಏಷ್ಯಾದ ಭವಿಷ್ಯವು ಸಂಘರ್ಷದಿಂದಲ್ಲ, ಬದಲಿಗೆ ಶಾಂತಿ ಮತ್ತು ಪ್ರಗತಿಯಿಂದ ರೂಪಿತವಾಗಬೇಕು ಎಂದು ಗಣ್ಯರು ಆಶಿಸಿದ್ದಾರೆ.