#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Maha Kumbh Mela 2025: ಕುಂಭ, ಗಂಗಾ, ಯಮುನಾ, ಸರಸ್ವತಿ...ಮಹಾ ಕುಂಭಮೇಳದ ವೇಳೆ ಪ್ರಯಾಗ್‌ರಾಜ್‌ನಲ್ಲಿ 12 ಶಿಶುಗಳ ಜನನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜ. 13ರಂದು ಆರಂಭವಾದ ಮಹಾ ಕುಂಭಮೇಳ ಮುಂದುವರಿದಿದೆ. ಪ್ರತಿದಿನ ಲಕ್ಷಾಂತರ, ವಿಶೇಷ ದಿನದಂದು ಕೋಟ್ಯಂತರ ಮಂದಿ ಇಲ್ಲಿಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಈ ಮಧ್ಯೆ ಇಲ್ಲಿನ ಆಸ್ಪತ್ರೆಯಲ್ಲಿ 12 ಮಕ್ಕಳು ಜನಿಸಿವೆ. ಆ ಮಕ್ಕಳಿಗೆ ಕುಂಭಮೇಳದ ಸ್ಮರಣಾರ್ಥ ಗಂಗಾ, ಯಮುನಾ, ಸರಸ್ವತಿ, ಕುಂಭ್‌ ಮುಂತಾದ ಹೆಸರಿಡಲಾಗಿದೆ.

ಮಹಾ ಕುಂಭಮೇಳದ ವೇಳೆ ಪ್ರಯಾಗ್‌ರಾಜ್‌ನಲ್ಲಿ 12 ಶಿಶುಗಳ ಜನನ

ಮಹಾ ಕುಂಭಮೇಳ.

Profile Ramesh B Feb 10, 2025 11:20 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ (Prayagraj)ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh Mela 2025) ಪ್ರತಿ ದಿನ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ದೇಶ-ವಿದೇಶಗಳಿಂದ ಆಸ್ತಿಕರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಈ ಮಧ್ಯೆ ಪ್ರಯಾಗ್‌ರಾಜ್‌ನ ಸೆಂಟ್ರಲ್ ಆಸ್ಪತ್ರೆಯಲ್ಲಿ 12 ಶಿಶುಗಳು ಜನಿಸಿವೆ. ʼʼತೀರ್ಥಯಾತ್ರೆಗೆ ಬಂದಿದ್ದ ಗರ್ಭಿಣಿಯರಿಗೆ ಹೆರಿಗೆಯಾಗಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆʼʼ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಶಿಶುಗಳಿಗೆ ಕುಂಭಮೇಳದ ಸ್ಮರಣಾರ್ಥ ಬಸಂತ್‌, ಬಸಂತಿ, ಗಂಗಾ, ಯಮುನಾ, ಕುಂಭ್‌ ಮುಂತಾದ ಹೆಸರಿಡಲಾಗಿದೆ. 12ನೇ ಮಗು ಫೆ. 9ರಂದು ಜನಿಸಿದೆ. ಸೆಂಟ್ರಲ್‌ ಆಸ್ಪತ್ರೆಯ ಡಾ.ಮನೋಜ್‌ ಕೌಶಿಕ್‌ ಈ ಬಗ್ಗೆ ಮಾತನಾಡಿ, ʼʼಇಲ್ಲಿನ 12 ಹೆರಿಗೆಗಳೂ ಸಹಜವಾಗಿಯೇ ಆಗಿದ್ದು, ಎಲ್ಲರೂ ಆರೋಗ್ಯವಂತರಾಗಿದ್ದಾರೆʼʼ ಎಂದು ತಿಳಿಸಿದ್ದಾರೆ.

ʼʼಫುಲ್ಪುರದ ಸರಾಯ್ ಚಾಂಡಿಯ ನೇಹಾ ಸಿಂಗ್ ಅವರಿಗೆ ಫೆ. 9ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ತಂದೆ ದೀಪಕ್ ತಮ್ಮ ಮಗನಿಗೆ ಕುಂಭ ಎಂದು ಹೆಸರಿಡಲು ಮುಂದಾದರು. ಆದರೆ ಡಿ. 29ರಂದು ಜನಿಸಿದ ಮತ್ತೊಂದು ಮಗುವಿಗೆ ಈಗಾಗಲೇ ಆ ಹೆಸರನ್ನು ನೀಡಲಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು. ಕೊನೆಗೆ ಮಗುವನ್ನು ಕುಂಭ -2 ಎಂದು ಕರೆಯಲು ಸೂಚಿಸಿದರುʼʼ ಎಂಬುದಾಗಿ ಆಸ್ಪತ್ರೆಯ ರಾಮ ಸಿಂಗ್ ವಿವರಿಸಿದ್ದಾರೆ.



"ಆಸ್ಪತ್ರೆಯ ಸಿಬ್ಬಂದಿ ನನ್ನ ಮಗನಿಗೆ ಕುಂಭ ಎಂದು ಹೆಸರಿಡದಿದ್ದರೂ, ನಾನು ಅವನಿಗೆ ಅದೇ ಹಸರಿಡುತ್ತೇನೆ. ಯಾಕೆಂದರೆ ಅವನು ಈ ಮಹಾ ಕುಂಭಮೇಳದಲ್ಲಿ ಜನಿಸಿದ್ದಾನೆ" ಎಂದು ದೀಪಕ್ ಹೇಳಿದ್ದಾರೆ. ಇಲ್ಲೇ ಬೀಡು ಬಿಟ್ಟಿರುವ ಅವರ ತಾಯಿ ಒಂದು ತಿಂಗಳ ಕಾಲ ತಪಸ್ಸು ಮತ್ತು ಆಧ್ಯಾತ್ಮಿಕತೆಯ ವ್ರತ 'ಕಲ್ಪವಸ್' ಅನ್ನು ಕೈಗೊಂಡಿದ್ದಾರೆ.

ಬಸಂತ್‌ ಪಂಚಮಿಯಾದ ಫೆ. 3ರಂದು ಜನಿಸಿದ ಗಂಡು ಮತ್ತು ಹೆಣ್ಣು ಮಗುವಿಗೆ ಬಸಂತ್‌ ಮತ್ತು ಬಸಂತಿ ಎಂಬ ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಜಾರ್ಖಂಡ್‌ ಮುಂತಾದ ಕಡೆಗಳಿಂದ ಬಂದವರು ಇಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Maha Kumbh 2025: ಕುಂಭಮೇಳದ ಬಗ್ಗೆ ತಪ್ಪು ಮಾಹಿತಿ ಹರಡಿದ 14 ಎಕ್ಸ್ ಖಾತೆಗಳ ವಿರುದ್ಧ ಕಠಿಣ ಕ್ರಮ

"ಅನೇಕ ಮಹಿಳೆಯರು ಮಹಾ ಕುಂಭಮೇಳ ನಡೆಯುವ ಜಾಗದಲ್ಲೇ ಪ್ರಸವ ನಡೆಯಬೇಕು ಎಂದು ಬಯಸುತ್ತಿದ್ದಾರೆ. ಇದು ತಮ್ಮ ಮಗುವಿಗೆ ಅದೃಷ್ಟವನ್ನು ತರುತ್ತದೆ ಎಂಬುದು ಅವರ ನಂಬಿಕೆʼʼ ಎಂದು ರಾಮ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಗರ್ಭಿಣಿಯೊಬ್ಬರಿಗೆ ಘಾಟ್‌ನಲ್ಲಿ ಸ್ನಾನ ಮಾಡುವಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಸರಸ್ವತಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸೆಕ್ಟರ್ 2ರಲ್ಲಿರುವ ಸೆಂಟ್ರಲ್ ಆಸ್ಪತ್ರೆಯು ಮಹಾ ಕುಂಭಮೇಳದಲ್ಲಿ ಭಾಗವಹಿಸುವ ಭಕ್ತರಿಗಾಗಿ ಸ್ಥಾಪಿಸಲಾದ 13 ಆರೋಗ್ಯ ಕೇಂದ್ರ ಪೈಕಿ ಒಂದು. ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯೂ ಆದ ಆರೋಗ್ಯ ಸಚಿವ ಬ್ರಜೇಶ್‌ ಪಾಠಕ್‌ ನವಜಾತ ಶಿಶುಗಳ ಹೆತ್ತವರಿಗೆ ಶುಭಾಶಯ ತಿಳಿಸಿದ್ದಾರೆ.