Maha Kumbh 2025: ಕುಂಭಮೇಳದ ಬಗ್ಗೆ ತಪ್ಪು ಮಾಹಿತಿ ಹರಡಿದ 14 ಎಕ್ಸ್ ಖಾತೆಗಳ ವಿರುದ್ಧ ಕಠಿಣ ಕ್ರಮ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜ.13ರಂದು ಚಾಲನೆ ಪಡೆದುಕೊಂಡಿರುವ ಮಹಾಕುಂಭ ಮೇಳ ಕೆಲವೊಂದು ಗೊಂದಲಗಳ ನಡುವೆಯೂ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಈ ಕುಂಭ ಮೇಳದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಹಾಗೂ ತಿರುಚಿದ ಮಾಹಿತಿ ಹರಡುತ್ತಿರುವವರ ವಿರುದ್ಧ ಇದೀಗ ಯೊಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ...
![ಮಹಾ ಕುಂಭಮೇಳದ ಬಗ್ಗೆ ತಪ್ಪು ಮಾಹಿತಿ ಹರಡಿದ್ರೆ ಹುಷಾರ್](https://cdn-vishwavani-prod.hindverse.com/media/original_images/Maha_Kumbh_2025_News_EhHU4Jc.jpg)
ಸಾಂದರ್ಭಿಕ ಚಿತ್ರ.
![Profile](https://vishwavani.news/static/img/user.png)
ಲಖನೌ: ಮಹಾ ಕುಂಭಮೇಳದ (Maha Kumbh) ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿರುವವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ (Uttar Pradesh Government) ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ (Social Media) ಮೇಲೆ ಹದ್ದಿನ ಕಣ್ಣು ಇರಿಸಿದ್ದು, ಒಟ್ಟು 14 ಎಕ್ಸ್ (X) ಖಾತೆಗಳ ವಿರುದ್ಧ ಕಾನೂನು ಸಮರ ನಡೆದಿದೆ. ಮಹಾಕುಂಭದ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿರುವ 14 ಎಕ್ಸ್ ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಉತ್ತರ ಪ್ರದೇಶದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (Director General of Police) ಪ್ರಶಾಂತ್ ಕುಮಾರ್ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.
ʼʼತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಯಮಿತ ನಿಗಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಅದರಲ್ಲೂ ಮಹಾ ಕುಂಭದಂತಹ ಬೃಹತ್ ಕಾರ್ಯಕ್ರಮದ ಬಗ್ಗೆ ತಪ್ಪು ಮಾಹಿತಿ ಹರಡದಂತೆ ನಿಗಾ ವಹಿಸಲಾಗಿದೆʼʼ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜಾರ್ಖಂಡ್‌ನ (Jharkhand) ಧನ್ ಬಾದ್‌ಗೆ (Dhanbad) ಸಂಬಂಧಿಸಿರುವ ವಿಡಿಯೊವೊಂದನ್ನು ಪ್ರಯಾಗ್‌ರಾಜ್‌ನ (Prayagraj) ಮಹಾಕುಂಭದ ವಿಡಿಯೊ ಎಂದು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿಯಬಿಡಲಾಗಿತ್ತು.
ಜಾರ್ಖಂಡ್ ಪೊಲೀಸರು ಈ ವರ್ಷದ ಜ. 1ರಂದು ನಡೆಸಿದ ಲಾಠಿ ಚಾರ್ಜ್ ಇದಾಗಿದ್ದು, ಇದನ್ನು ಉತ್ತರ ಪ್ರದೇಶ ಪೊಲೀಸರೊಂದಿಗೆ ಲಿಂಕ್ ಮಾಡಿ, ‘ತಮ್ಮ ತಪ್ಪಿ ಹೋದ ಸಂಬಂಧಿಕರನ್ನು ಹುಡುಕುತ್ತಿರುವ ಮಹಾ ಕುಂಭದ ಯಾತ್ರಿಗಳ ಮೇಲೆ ಪೊಲೀಸರ ದೌರ್ಜನ್ಯ’ ಎಂಬ ಬರಹದಡಿಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.
ಇದನ್ನೂ ಓದಿ: Viral News: ಮಹಾ ಕುಂಭಮೇಳದಲ್ಲಿ ಭಾರೀ ಟ್ರಾಫಿಕ್ ಜಾಮ್; 300 ಕಿ.ಮೀ. ಸಾಲುಗಟ್ಟಿ ನಿಂತ ವಾಹನಗಳು
ʼʼಕೂಲಂಕುಷವಾಗಿ ತನಿಖೆ ನಡೆಸಿದ ಸಂದರ್ಭದಲ್ಲಿ ಈ ವಿಡಿಯೊ ಪ್ರಯಾಗ್‌ರಾಜ್‌ನದ್ದಲ್ಲ. ಬದಲಾಗಿ ಧನ್‌ಬಾದ್‌ನದ್ದು ಎಂದು ತಿಳಿದು ಬಂದಿದೆ. ಕುಂಭಮೇಳದ ಪೊಲೀಸರು ಸಹ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ’ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ʼಇಂತಹ ಉದ್ದೇಶಪೂರ್ವಕ ಕೃತ್ಯಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಇಲ್ಲಿನ ಪೊಲೀಸ್ ವ್ಯವಸ್ಥೆಯ ಇಮೇಜಿಗೆ ಧಕ್ಕೆ ತರಲಾಗುತ್ತಿದ್ದು, ಸಾರ್ವಜನಿಕರ ನಡುವೆ ಅಶಾಂತಿ ಸೃಷ್ಟಿಸುವ ಕ್ರಮಗಳೂ ಇದಾಗಿವೆʼ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ʼ‘ಇಂತಹ ತಪ್ಪು ಸಂದೇಶಗಳನ್ನು ಸಮಾಜದಲ್ಲಿ ಹರಡುವುದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಪೊಲೀಸರು, ಇಂತಹ 14 ಎಕ್ಸ್ ಅಕೌಂಟ್‌ಗಳ ಮೇಲೆ ಎಫ್.ಐ.ಆರ್. ದಾಖಲಿಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆʼʼ ಎಂದೂ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಹಾ ಕುಂಭಮೇಳ 2025ರ ಬಗ್ಗೆ ತಪ್ಪು ಸಂದೇಶ ಮತ್ತು ಮಾಹಿತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.