ಚೆನ್ನೈ: ಸೋಮವಾರ(ಫೆ.3) ತಡರಾತ್ರಿ ಚೆನ್ನೈನಲ್ಲಿ(Chennai) ಆಟೋ ಚಾಲಕರು 18 ವರ್ಷದ ವಲಸೆ ಕಾರ್ಮಿಕ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ(Physical Assault) ನಡೆಸಿದ್ದಾರೆ. ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನು ಬಲವಂತವಾಗಿ ಆಟೋದೊಳಗೆ ಎಳೆದುಕೊಂಡು ದೌರ್ಜನ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮೂವರು ಶಂಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈ ಬಳಿಯ ಕಿಲಂಬಕ್ಕಂ ಬಸ್ ಟರ್ಮಿನಸ್ ಹೊರಗೆ ಬಸ್‌ಗಾಗಿ ಕಾಯುತ್ತಿದ್ದಾಗ, ಒಬ್ಬ ಆಟೋ ಚಾಲಕ ಆಟೋ ಹತ್ತುವಂತೆ ಹೇಳಿದ್ದಾನೆ. ಆಕೆ ನಿರಾಕರಿಸಿದಾಗ ಆಕೆಯನ್ನು ಬಲವಂತವಾಗಿ ಆಟೋದೊಳಗೆ ಎಳೆದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಇನ್ನಿಬ್ಬರು ಪುರುಷರು ಆಟೋದೊಳಗೆ ಹತ್ತಿ ಚಾಕು ತೋರಿಸಿ ಬೆದರಿಕೆ ಹಾಕಿದ್ದು,ಅಮಾನೀಯವಾಗಿ ಅತ್ಯಾಚಾರ ಮಾಡಿದ್ದಾರೆ.
ಆಟೋ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದಂತೆ ಯುವತಿ ಜೋರಾಗಿ ಕಿರುಚಲು ಶುರು ಮಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ಕೆಲವು ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತಂಡವೊಂದು ವಾಹನವನ್ನು ಬೆನ್ನಟ್ಟಿದೆ. ಕಿಡಿಗೇಡಿಗಳು ಮಹಿಳೆಯನ್ನು ರಸ್ತೆ ಬದಿಗೆ ನೂಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಯುವತಿಯನ್ನು ರಕ್ಷಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಬೇರೆ ರಾಜ್ಯದವಳಾಗಿದ್ದು, ಸೇಲಂನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ:Physical Abuse: ಮಂಡ್ಯದಲ್ಲಿ ಕಾಮುಕರ ಅಟ್ಟಹಾಸ; 8 ವರ್ಷದ ಬಾಲಕಿ ಮೇಲೆ ಮೂವರಿಂದ ಲೈಂಗಿಕ ದೌರ್ಜನ್ಯ
ಇತ್ತೀಚೆಗಷ್ಟೇ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿತ್ತು. ಆ ಪ್ರಕರಣವು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಬಿಜೆಪಿ ನಾಯಕ ಅಣ್ಣಾಮಲೈ ಸೇರಿದಂತೆ ಹಲವು ನಾಯಕರು ಪ್ರತಿಭಟನೆ ನಡೆಸಿದ್ದರು. ಇದೀಗ ವಲಸೆ ಕಾರ್ಮಿಕ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದು, ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.