ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಕೃತಿ (Belonging: A Journey of Love) ಬಿಡುಗಡೆಯಾಗಿದ್ದು, ಅವರು ಪುಸ್ತಕದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. 1984ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ನಂತರ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಅಪಹರಿಸುವ ಸಂಚಿನ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಅವರಿಬ್ಬರನ್ನೂ ಬೋರ್ಡಿಂಗ್ ಶಾಲೆಯಿಂದ ಅರ್ಧದಲ್ಲೇ ದೆಹಲಿಗೆ ವಾಪಸ್ ಕರೆತರಲಾಗಿತ್ತು ಎಂಬ ಮಹತ್ವದ ವಿಷಯವನ್ನು ಬರೆದುಕೊಂಡಿದ್ದಾರೆ.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತಾ ಸಲಹೆಗಾರ ಮತ್ತು ಮಾಜಿ ಗುಪ್ತಚರ ಮುಖ್ಯಸ್ಥರಾಗಿದ್ದ ಆರ್.ಎನ್. ಕಾವ್ ಅವರು ಈ ಕುರಿತು ಎಚ್ಚರಿಕೆ ನೀಡಿದ್ದರು. ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಸಂಪೂರ್ಣ ಭದ್ರತೆ ಒದಗಿಸುವುದು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಈ ವಿಷಯವನ್ನು ಇಂದಿರಾ ಗಾಂಧಿಯವರು ಒಂದು ದಿನ ರಾತ್ರಿ ಊಟದ ನಂತರ ರಾಜೀವ್ ಮತ್ತು ಸೋನಿಯಾ ಗಾಂಧಿ ಅವರಿಗೆ ತಿಳಿಸಿ, ಮಕ್ಕಳನ್ನು ತಕ್ಷಣವೇ ಮನೆಗೆ ಕರೆತರಬೇಕು ಎಂದು ಸೂಚಿಸಿದ್ದರು.
ಈ ಸುದ್ದಿ ಕೇಳಿ ಸೋನಿಯಾ ಗಾಂಧಿ ತೀವ್ರ ಆತಂಕಕ್ಕೊಳಗಾಗಿ ತಮ್ಮ ಕೋಣೆಯಲ್ಲಿ ಕಣ್ಣೀರಿಟ್ಟಿದ್ದರು. ಇನ್ನೊಂದೆಡೆ, ಮಕ್ಕಳ ಸುರಕ್ಷತೆಯ ಜೊತೆಗೆ ಒಂದು ವೇಳೆ ಅಪಹರಣ ನಡೆದರೆ ಅದು ದೇಶದ ರಾಜಕೀಯದ ಮೇಲೆ ಬೀರಬಹುದಾದ ಭೀಕರ ಪರಿಣಾಮಗಳ ಬಗ್ಗೆಯೂ ರಾಜೀವ್ ಗಾಂಧಿ ಯೋಚಿಸಿದ್ದರು. ಪ್ರಧಾನಿಯಾದ ತಮ್ಮ ತಾಯಿಯನ್ನು ದುಷ್ಟಶಕ್ತಿಗಳು ಬ್ಲ್ಯಾಕ್ಮೇಲ್ ಮಾಡಲು ಅವಕಾಶ ನೀಡಬಾರದು ಎಂಬುದು ಅವರ ನಿಲುವಾಗಿತ್ತು ಎಂದು ಸೋನಿಯಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ದೆಹಲಿಗೆ ಬಂದ ನಂತರ, ಇಂದಿರಾ ಗಾಂಧಿಯವರು ಮಕ್ಕಳನ್ನು ಸಂಜೆಯ ವೇಳೆ ಅಕ್ಬರ್ ರಸ್ತೆಯ ಪಕ್ಕದಲ್ಲಿ ಆಟವಾಡಲು ಬಿಡದಂತೆ ಸೋನಿಯಾ ಅವರಿಗೆ ಸೂಚಿಸಿದ್ದರು. ಆದರೆ, ಜೀವಕ್ಕೆ ಅಪಾಯವಿದ್ದರೂ ತಮ್ಮ ಭದ್ರತಾ ಪಡೆಯಲ್ಲಿದ್ದ ಸಿಖ್ ಸಿಬ್ಬಂದಿಯನ್ನು ಬದಲಾಯಿಸಲು ಇಂದಿರಾ ಗಾಂಧಿ ನಿರಾಕರಿಸಿದ್ದರು. ದೆಹಲಿಯ ಶಾಲೆಗಳಿಗೆ ಸೇರಿದ ನಂತರ, ರಾಹುಲ್ ಮತ್ತು ಪ್ರಿಯಾಂಕಾ ತಮ್ಮ ಅಜ್ಜಿ ಇಂದಿರಾ ಗಾಂಧಿಯವರ ಹತ್ಯೆಗೂ ಮುನ್ನ ಅವರೊಂದಿಗೆ ಜೀವನದ ಕೊನೆಯ ಎರಡು ತಿಂಗಳುಗಳನ್ನು ಕಳೆಯಲು ಸಾಧ್ಯವಾಯಿತು ಎಂದು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.