ಪತಿ ರಾಜೀವ್ ಗಾಂಧಿ ರಾಜಕೀಯಕ್ಕೆ ಎಂಟ್ರಿ ಕೊಡದಂತೆ ತಡೆದಿದ್ದ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ವಿಚಾರದಲ್ಲಿ ಯುಟರ್ನ್ ತೆಗೆದುಕೊಂಡಿದ್ದೇಕೆ?
Sonia Gandhi: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ರಿಲೀಸ್ ಆಗಲಿದೆ. ಈ ಆತ್ಮಕಥೆಯಲ್ಲಿನ ಹಲವು ಕುತೂಹಲಕಾರಿ ವಿಚಾರ ಹೊರ ಬಂದಿದೆ. ಪತಿ ರಾಜೀವ್ ಗಾಂಧಿಯನ್ನು ರಾಜಕೀಯಕ್ಕೆ ಬರದಂತೆ ತಡೆದಿದ್ದ ಅವರು ಪುತ್ರ ರಾಹುಲ್ ಗಾಂಧಿಗೆ ವಿರೋಧ ವ್ಯಕ್ತಪಡಿಸಲಿಲ್ಲ ಏಕೆ ಎನ್ನುವುದನ್ನು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ದೆಹಲಿ, ನ. 10: ರಾಜಕೀಯಕ್ಕೆ ಪ್ರವೇಶಿಸದಂತೆ ಪತಿ ರಾಜೀವ್ ಗಾಂಧಿ ಬಳಿ ಅಂಗಲಾಚಿ ಬೇಡಿದ್ದ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ವಿಚಾರದಲ್ಲಿ ಯುಟರ್ನ್ ತೆಗೆದುಕೊಂಡಿದ್ದರು. ರಾಹುಲ್ ಗಾಂಧಿ ರಾಜಕೀಯಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡುವ ಸಮಯ ಬಂದಾಗ ಅವರು ಅದನ್ನು ವಿರೋಧಿಸಲಿಲ್ಲ. ಅದೇಕೆ ಎನ್ನುವ ಕುತೂಹಲಕಾರಿ ವಿಚಾರವನ್ನು ಸೋನಿಯಾ ಗಾಂಧಿ (Sonia Gandhi) ತಮ್ಮ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey Of Love) ನಲ್ಲಿ ವಿವರಿಸಿದ್ದಾರೆ. ಈ ಪುಸ್ತಕ ನವೆಂಬರ್ 10ರಂದು ಬಿಡುಗಡೆಯಾಗುತ್ತಿದೆ.
"ರಾಹುಲ್‌ಗೆ ರಾಜಕೀಯದಲ್ಲಿ ದೀರ್ಘಕಾಲದ ಆಸಕ್ತಿಯಿತ್ತು" ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ. ಅಲ್ಲದೆ ತಮ್ಮ ಕುಟುಂಬದ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿಯೊಂದಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದೀರ್ಘಕಾಲೀನ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಿಯಾಂಕಾ ನೇರವಾಗಿ ಚುನಾವಣೆ ಎದುರಿಸದಿದ್ದರೂ ತಮ್ಮ ಎಲ್ಲ ಚುನಾವಣೆಗಳ ಸಂದರ್ಭದಲ್ಲೂ ಅಮೇಥಿಯಲ್ಲಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಜನರ ಮನಗೆದ್ದಿದ್ದರು ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
"ತಮ್ಮ ಚಿಕ್ಕ ಮಕ್ಕಳನ್ನು ಬೆಳೆಸುವುದು ಮತ್ತು ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆಯುವುದು ಅವರ ಆದ್ಯತೆಯಾಗಿತ್ತು. ರಾಹುಲ್ ಭಾರತಕ್ಕೆ ಮರಳಿದಾಗಲೆಲ್ಲ ನನ್ನೊಂದಿಗೆ ಅಥವಾ ಪ್ರಿಯಾಂಕಾ ಜತೆ ಅಮೇಥಿಗೆ ತೆರಳುತ್ತಿದ್ದರು. ಹೀಗಾಗಿ ಆ ಕ್ಷೇತ್ರದಲ್ಲಿದ್ದವರಿಗೆ ಅವರಿಬ್ಬರೂ ಪರಿಚಿತ ಮುಖಗಳಾಗಿದ್ದರು. ಅಂತಿಮವಾಗಿ ಭಾರತಕ್ಕೆ ಮರಳಿದ ರಾಹುಲ್ ಜನರ ಪ್ರತಿನಿಧಿಯಾಗಿ ಅಲ್ಲಿ ಕೆಲಸ ಮಾಡಲು ನಿರ್ಧರಿಸಿದರು" ಎಂದು ಸೋನಿಯಾ ಗಾಂಧಿ ವಿವರಿಸಿದ್ದಾರೆ.
ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಮಾಡಿದ್ದ ರಾಹುಲ್ ಗಾಂಧಿ ಅವರ ಅಧ್ಯಯನದ ವಿಷಯ 'ಅಭಿವೃದ್ಧಿ ಅಧ್ಯಯನ' (Development Studies) ಆಗಿತ್ತು ಎಂದು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ. ಅಲ್ಲದೆ, ವಿದೇಶದಲ್ಲಿದ್ದಾಗಲೂ ಅವರು ಭಾರತದ ರಾಜಕೀಯ ವಿದ್ಯಮಾನಗಳನ್ನು ನಿಕಟವಾಗಿ ಗಮನಿಸುತ್ತಿದ್ದರು ಎಂದಿದ್ದಾರೆ.
"ಪಕ್ಷವು ಸಕ್ರಿಯ ರಾಜಕೀಯಕ್ಕೆ ಬರುವಂತೆ ರಾಹುಲ್ ಗಾಂಧಿಗೆ ಒತ್ತಡ ಹೇರುತ್ತಿತ್ತು. ಇದು ಅವರ ಜೀವನಶೈಲಿಯಲ್ಲಿ ಸಂಪೂರ್ಣ ಬದಲಾವಣೆ ತಂದಿದೆ. ಪ್ರಿಯಾಂಕಾ ಮತ್ತು ನನ್ನೊಂದಿಗೆ ಚರ್ಚೆ ನಡೆಸಿ ಹಾಗೂ ಆಳವಾಗಿ ಯೋಚಿಸಿದ ನಂತರ ಅವರು ರಾಜಕೀಯಕ್ಕೆ ಪ್ರವೇಶಿಸಿದರುʼʼ ಎಂದು ತಿಳಿಸಿದ್ದಾರೆ. ಅಂತಿಮವಾಗಿ 2004ರಲ್ಲಿ ರಾಹುಲ್ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರು. ಸೋನಿಯಾ ಗಾಂಧಿ ಪಕ್ಕದ ರಾಯ್ ಬರೇಲಿಗೆ ಸ್ಥಳಾಂತರಗೊಂಡರು.
"ಎರಡು ದಶಕಗಳ ಹಿಂದೆ ರಾಜೀವ್ ರಾಜಕೀಯಕ್ಕೆ ಪ್ರವೇಶಿಸಬಾರದೆಂದು, ನಮ್ಮೆಲ್ಲರನ್ನೂ ಆ ಅಪಾಯಕಾರಿ ಜಗತ್ತಿಗೆ ತಳ್ಳಬಾರದೆಂದು ನಾನು ಅವರನ್ನು ಬೇಡಿಕೊಂಡಿದ್ದೆ. ಈಗ ನನ್ನ ಮಗನ ಸರದಿ ಬಂದಿತ್ತು. ಆದರೆ ಈ ಬಾರಿ ನಾನು ಅದನ್ನು ವಿರೋಧಿಸಲಿಲ್ಲ. ರಾಹುಲ್ ತನ್ನ ತಂದೆಯ ಅಂತ್ಯವನ್ನು ಮೊದಲೇ ಊಹಿಸಿದ್ದರು. ಆ ವಿಷಯವಾಗಿ ಅವರು ತಂದೆಯೊಂದಿಗೆ ವಾದವನ್ನೂ ಮಾಡಿದ್ದರು. ಅದಾಗ್ಯೂ ತಂದೆಯ ಮೌಲ್ಯಗಳೊಂದಿಗೆ ಆಳವಾದ ಒಡನಾಟ ಹೊಂದಿದ್ದಾರೆʼʼ ಎಂಬುದಾಗಿ ಸೋನಿಯಾ ವಿವರಿಸಿದ್ದಾರೆ.
ರಾಜೀವ್ ಹಿಂದೆ ಮಾಡಿದ್ದಂತೆಯೇ ಗ್ರಾಮೀಣ ಅಮೇಥಿಯಲ್ಲಿ ಉದ್ಯಮಗಳು ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ತಮ್ಮ ಹೊಸ ಜವಾಬ್ದಾರಿಯನ್ನು ರಾಹುಲ್ ಉತ್ಸಾಹದಿಂದ ಕೈಗೆತ್ತಿಕೊಂಡರು ಎಂದು ತಿಳಿಸಿದ್ದಾರೆ.