ಜಮ್ಮು ಕಾಶ್ಮೀರದ ಅನಂತ್‌ನಾಗ್‌ನ ದಟ್ಟ ಕಾಡಿನಲ್ಲಿ ಇಬ್ಬರು ಸೈನಿಕರು ನಾಪತ್ತೆ; ಭಯೋತ್ಪಾದಕರ ಕೈವಾಡ?
2 Army Soldiers Missing: ಗಸ್ತು ತಿರುಗುತ್ತಿದ್ದ ಇಬ್ಬರು ಸೈನಿಕರು ದಟ್ಟ ಕಾಡಿನಲ್ಲಿ ನಾಪತ್ತೆಯಾಗಿರುವ ಘಟನೆ ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದಿದೆ. ಕೊಕರ್ನಾಗ್‌ನ ಗಡೋಲ್ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಸೈನಿಕರು ತಮ್ಮ ಪಡೆಯೊಂದಿಗಿನ ಸಂಪರ್ಕ ಕಳೆದುಕೊಂಡ ನಂತರ ನಾಪತ್ತೆಯಾಗಿದ್ದಾರೆ.

-

ಶ್ರೀನಗರ: ಗಸ್ತು ತಿರುಗುತ್ತಿದ್ದ ಇಬ್ಬರು ಸೈನಿಕರು ದಟ್ಟ ಕಾಡಿನಲ್ಲಿ ನಾಪತ್ತೆಯಾಗಿರುವ ಘಟನೆ ಜಮ್ಮು ಕಾಶ್ಮೀರ (Jammu and Kashmir)ದ ಅನಂತ್‌ನಾಗ್ (Anantnag) ಜಿಲ್ಲೆಯಲ್ಲಿ ನಡೆದಿದೆ. ಅವರ ಪತ್ತೆಗೆ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಕೊಕರ್ನಾಗ್‌ನ ಗಡೋಲ್ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಸೈನಿಕರು ತಮ್ಮ ಪಡೆಯೊಂದಿಗಿನ ಸಂಪರ್ಕ ಕಳೆದುಕೊಂಡ ನಂತರ ನಾಪತ್ತೆಯಾಗಿದ್ದಾರೆ. 2 ದಿನಗಳ ಹಿಂದೆ ಸೈನಿಕರೊಂದಿಗಿನ ಸಂಪರ್ಕ ಕಡಿತಗೊಂಡಿದ್ದು, ಕೆಟ್ಟ ಹವಾಮಾನ ಮತ್ತು ಹಿಮಪಾತವು ಅವರ ಪತ್ತೆ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ʼʼಸೈನಿಕರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ಇಬ್ಬರು ಸೈನಿಕರ ನಾಪತ್ತೆಯ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲʼʼ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗಡೋಲ್ ಅರಣ್ಯ ಪ್ರದೇಶವು ಹಿಂದೆಯೂ ಎನ್‌ಕೌಂಟರ್ ಮತ್ತು ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿತ್ತು. ಕಳೆದ ವರ್ಷ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದರು. 2 ವರ್ಷಗಳ ಹಿಂದೆ, ಸೇನೆಯ ಕಮಾಂಡಿಂಗ್ ಅಧಿಕಾರಿ, ಮೇಜರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಐದು ಮಂದಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು.
ಅನಂತ್‌ನಾಗ್‌ನಲ್ಲಿ ನಡೆಯುತ್ತಿರುವ ಶೋಧ ಕಾರ್ಯ:
A massive anti terror operation launched by security forces in Gadool forests of south Kashmir’s Anantnag district after two Indian elite para commandos went missing during anti terror operation in these dense forests , choppers pressed into service @SudarshanNewsTV pic.twitter.com/nmzT3YLGvx
— Rohil Stv (@rohil_bashir) October 8, 2025
ಈ ಸುದ್ದಿಯನ್ನೂ ಓದಿ: Encounter in Kishtwar: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ; ಭಯೋತ್ಪಾದಕರನ್ನು ಹಿಮ್ಮೆಟ್ಟಿಸುತ್ತಿರುವ ಭಾರತೀಯ ಸೇನೆ
ಭಯೋತ್ಪಾದಕರಿಗಾಗಿ 3 ಕಡೆ ಶೋಧ
ಈ ಮಧ್ಯೆ ಭದ್ರತಾ ಪಡೆಗಳು ಬುಧವಾರ (ಅಕ್ಟೋಬರ್ 8) ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎನ್ನಲಾದ ಜಮ್ಮು ಕಾಶ್ಮೀರದ ರಜೌರಿ ಮತ್ತು ಉಧಂಪುರ ಜಿಲ್ಲೆಯ 3 ಕಡೆಗಳಲ್ಲಿ ಶೋಧ ಕಾರ್ಯ ಆರಂಭಿಸಿವೆ. ಮಂಗಳವಾರ ಸಂಜೆ ರಜೌರಿಯ ಕಂಡಿಯ ಬೀರಂಥಬ್ ಪ್ರದೇಶದಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ಸ್ವಲ್ಪ ಸಮಯದವರೆಗೆ ಗುಂಡಿನ ಚಕಮಕಿ ನಡೆಯಿತು. ಉಧಮ್‌ಪುರದ ಬಸಂತ್‌ಗಢದ ಧರ್ಣಿಯಲ್ಲಿ ಮೂವರು ಶಂಕಿತ ಭಯೋತ್ಪಾದಕರು ಓಡಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
ʼʼಸೇನೆ ಮತ್ತು ಸಿಆರ್‌ಪಿಎಫ್ ಸಹಾಯದಿಂದ ಪೊಲೀಸರು ಈ ಪ್ರದೇಶಗಳನ್ನು ಸುತ್ತುವರಿದಿದ್ದು, ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಹೊಡೆದುರುಳಿಸಲು ಬೃಹತ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಶೋಧ ಕಾರ್ಯಾಚರಣೆಯನ್ನು ಪಕ್ಕದ ಪ್ರದೇಶಗಳಿಗೆ ವಿಸ್ತರಿಸಲಾಗಿದೆ. ಆದರೆ ಇದುವರೆಗೆ ಭಯೋತ್ಪಾದಕರ ಸುಳಿವು ಸಿಕ್ಕಿಲ್ಲ" ಎಂದು ಅವರು ಹೇಳಿದ್ದಾರೆ. "ರಜೌರಿಯ ಕಂಡಿ ಪೊಲೀಸ್ ಠಾಣೆಯ ಬೀರಂಥಬ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಎಸ್‌ಒಜಿ (ವಿಶೇಷ ಕಾರ್ಯಾಚರಣೆ ಗುಂಪು) ತಂಡದ ನಡುವೆ ಸಣ್ಣ ಮಟ್ಟಿನ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರಿದಿದೆ" ಎಂದು ಜಮ್ಮುವಿನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (IGP) ಭೀಮ್ ಸೇನ್ ಟುಟಿ ಮಾಹಿತಿ ನೀಡಿದ್ದಾರೆ.
ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕಾರ್ಯಾಚರಣೆಯನ್ನು ಇನ್ನಷ್ಟು ಶಕ್ತಗೊಳಿಸಲಾಗಿದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ.