2017ರ ಉನ್ನಾವ್ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್‌ಗೆ ಜಾಮೀನು ಮಂಜೂರು, ಕಠಿಣ ಷರತ್ತು ಅನ್ವಯ
Unnao Rape Case: 2017ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಅವರ ಜೀವಾವಧಿ ಶಿಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಜಾಮೀನಿನೊಂದಿಗೆ ಕೆಲವು ಕಠಿಣ ಷರತ್ತು ವಿಧಿಸಲಾಗಿದೆ.
ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ (ಸಂಗ್ರಹ ಚಿತ್ರ) -
ನವದೆಹಲಿ, ಡಿ. 23: 2017ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ (Unnao Rape Case) ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ (Kuldeep Singh Sengar) ಮಂಗಳವಾರ ದೆಹಲಿ ಹೈಕೋರ್ಟ್ (Delhi High Court) ಜಾಮೀನು ನೀಡಿದ್ದು, ಮೇಲ್ಮನವಿ ವಿಚಾರಣೆ ಬಾಕಿ ಇರುವಾಗಲೇ ಜೀವಾವಧಿ ಶಿಕ್ಷೆಯನ್ನು ಸ್ಥಗಿತಗೊಳಿಸಿದೆ. ಆದರೆ ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದ ಪ್ರತ್ಯೇಕ ಅಪರಾಧದಿಂದಾಗಿ ಸೆಂಗಾರ್ ಜೈಲಿನಲ್ಲೇ ಇರುವುದರಿಂದ, ಈ ಆದೇಶದ ಹೊರತಾಗಿಯೂ ಅವರು ತಕ್ಷಣ ಹೊರ ಬರಲು ಸಾಧ್ಯವಿಲ್ಲ.
ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್‌ನ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. 15 ಲಕ್ಷ ರು.ಗಳ ವೈಯಕ್ತಿಕ ಬಾಂಡ್ ಮತ್ತು ಮೂವರ ಶ್ಯೂರಿಟಿ ಮೇಲೆ ಅವರಿಗೆ ಜಾಮೀನು ನೀಡಲು ಸಮ್ಮತಿಸಿದೆ. ನ್ಯಾಯಾಲಯವು ಅವರ ಮೇಲ್ಮನವಿಯನ್ನು ನಿರ್ಧರಿಸುವವರೆಗೆ ಅಮಾನತು ಜಾರಿಯಲ್ಲಿರುತ್ತದೆ. ಈ ಪರಿಹಾರದ ಹೊರತಾಗಿಯೂ, ಕೊಲೆ ಆರೋಪದ ಮತ್ತೊಂದು ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿರುವುದರಿಂದ ಸೆಂಗಾರ್ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ.
ತಂಗಿಯನ್ನು ಕೊಲ್ಲಲು ಸ್ನೇಹಿತನಿಗೇ ಸುಪಾರಿ ಕೊಟ್ಟ ಅಣ್ಣ; ಅತ್ಯಾಚಾರ ಮಾಡಿ ಬರ್ಬರ ಹತ್ಯೆ!
ಸಂತ್ರಸ್ತೆಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸೆಂಗಾರ್ ಮತ್ತು ಅವರ ಬೆಂಬಲಿಗರು ಸಂಚು ರೂಪಿಸಿದ್ದರು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಸುಳ್ಳು ಆರೋಪದ ಕಾರಣದಿಂದ ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ತಂದೆ ಅಲ್ಲೇ ಮೃತಪಟ್ಟಿದ್ದರು. ಹೀಗಾಗಿ ಈ ಪ್ರಕರಣದಲ್ಲಿ 10 ಲಕ್ಷ ರು. ದಂಡವನ್ನೂ ವಿಧಿಸಲಾಯಿತು. ಈ ಅಪರಾಧಕ್ಕೂ ತಮಗೂ ಯಾವುದೇ ಪಾತ್ರವಿಲ್ಲ ಎಂದು ಸೆಂಗಾರ್ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ನೀಡುವಾಗ, ಹೈಕೋರ್ಟ್ ಕಠಿಣ ಷರತ್ತುಗಳನ್ನು ವಿಧಿಸಿದೆ. ಸಂತ್ರಸ್ತೆಯ ನಿವಾಸದ ಐದು ಕಿಲೋ ಮೀಟರ್ ವ್ಯಾಪ್ತಿಯೊಳಗೆ ಸೆಂಗಾರ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೇಲ್ಮನವಿ ವಿಚಾರಣೆಯ ಸಮಯದಲ್ಲಿ ದೆಹಲಿಯಲ್ಲಿಯೇ ಇರಲು ನಿರ್ದೇಶಿಸಲಾಗಿದೆ.
ಶಿಕ್ಷೆಯನ್ನು ನಾವು ಅಮಾನತುಗೊಳಿಸುತ್ತಿದ್ದೇವೆ. 15 ಲಕ್ಷ ರು.ಗಳ ವೈಯಕ್ತಿಕ ಬಾಂಡ್ ಜತೆಗೆ ಸಮಾನ ಮೊತ್ತದ ಮೂರು ಶ್ಯೂರಿಟಿಗಳನ್ನು ನೀಡಬೇಕು. ಸಂತ್ರಸ್ತೆಯ ನಿವಾಸದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರವೇಶಿಸಬಾರದು. ಮೇಲ್ಮನವಿ ವಿಚಾರಣೆಯ ಅವಧಿಯಲ್ಲಿ ದೆಹಲಿಯಲ್ಲಿಯೇ ಇರಬೇಕು ಎಂದು ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಸಂತ್ರಸ್ತೆ ಹಾಗೂ ಆಕೆಯ ತಾಯಿಗೆ ಬೆದರಿಕೆ ಹಾಕಬಾರದು. ಸೆಂಗಾರ್ ಅವರ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ಪ್ರತಿ ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮಾಡಬೇಕು ಎಂದು ಪೀಠವು ನಿರ್ದೇಶಿಸಿದೆ.
ಈ ಷರತ್ತುಗಳ ಯಾವುದೇ ಉಲ್ಲಂಘನೆಯು ಜಾಮೀನು ರದ್ದತಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ. ಸೆಂಗಾರ್ ಅವರ ಮೇಲ್ಮನವಿ ವಿಚಾರಣೆಯ ಅವಧಿಯಲ್ಲಿ ಮಾತ್ರ ಪರಿಹಾರವು ಮಾನ್ಯವಾಗಿರುತ್ತದೆ. ಶಿಕ್ಷೆ ಎತ್ತಿಹಿಡಿಯಲ್ಪಟ್ಟರೆ ಉಳಿದ ಯಾವುದೇ ಶಿಕ್ಷೆಯನ್ನು ಅನುಭವಿಸಲು ಅವರು ಸಿದ್ಧರಿರಬೇಕು ಎಂದು ಸ್ಪಷ್ಟಪಡಿಸಿದೆ.
ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸೆಂಗಾರ್ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ 2019ರ ಡಿಸೆಂಬರ್‌ನಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಮತ್ತು ಸಂತ್ರಸ್ತೆಗೆ 25 ಲಕ್ಷ ರು. ಪರಿಹಾರ ನೀಡಲು ಆದೇಶಿಸಲಾಯಿತು.