ನವದೆಹಲಿ, ಅ.28: ಕಳೆದ ಎಂಟು ತಿಂಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ (West Asia Conflict) ನಡೆಯುತ್ತಿರುವ ಯುದ್ಧದಲ್ಲಿ ಭಾರತವು 14 ನಾವಿಕರು ಸೇರಿದಂತೆ 22 ಪ್ರಜೆಗಳನ್ನು ಕಳೆದುಕೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಹೇಳಿದ್ದಾರೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಬಾಂಬ್ ದಾಳಿ ನಡೆಸಿ ತಮ್ಮ ಸರ್ವೋಚ್ಚ ನಾಯಕ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಹತ್ಯೆ ಮಾಡಿದ ಬಳಿಕ ಸಂಘರ್ಷ ಪ್ರಾರಂಭವಾಯಿತು. ಗಲ್ಫ್ನಾದ್ಯಂತದ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಮತ್ತು ಪ್ರಮುಖ ಜಾಗತಿಕ ಹಡಗು ಮಾರ್ಗವಾದ ಹೊರ್ಮುಜ್ ಜಲಸಂಧಿ ಮೂಲಕ ಸಂಚಾರವನ್ನು ನಿರ್ಬಂಧಿಸುವ ಮೂಲಕ ಟೆಹರಾನ್ ಪ್ರತೀಕಾರ ತೀರಿಸಿಕೊಂಡಿದೆ.
“ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ನಮಗೆ ತೀವ್ರ ಕಳವಳವಿದೆ. ಇಲ್ಲಿಯವರೆಗೆ, ನಾವು ಸಂಘರ್ಷದಲ್ಲಿ 22 ಭಾರತೀಯ ಪ್ರಜೆಗಳನ್ನು ಕಳೆದುಕೊಂಡಿದ್ದೇವೆ. ಇದರಲ್ಲಿ 14 ನಾವಿಕರು ಸೇರಿದ್ದಾರೆ” ಎಂದು ಜೈಸ್ವಾಲ್ ಹೇಳಿದರು. ನಿರಂತರ ಯುದ್ಧದ ನಡುವೆಯೂ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಈ ಪ್ರದೇಶದ ಭಾರತೀಯರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.
ಸೌದಿ ತೈಲ ಘಟಕದ ಮೇಲೆ ಡ್ರೋನ್ ದಾಳಿ: ಇಬ್ಬರು ಸಾವು
ಸೌದಿ ಅರೇಬಿಯಾದ ತೈಲ ಘಟಕವೊಂದರ ಮೇಲೆ ಡ್ರೋನ್ ದಾಳಿ ನಡೆಸಿದ ಪರಿಣಾಮವಾಗಿ, ಫಿಲಿಪೈನ್ಸ್ ಮತ್ತು ನೇಪಾಳದ ತಲಾ ಒಬ್ಬರು ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ. ಅಲ್ಲದೆ, ಭಾರತೀಯರೊಬ್ಬರು ಸೇರಿದಂತೆ ಮತ್ತಿಬ್ಬರು ಗಾಯಗೊಂಡಿದ್ದಾರೆ. ಸೌದಿ ಇಂಧನ ಸಚಿವಾಲಯವು, ಯುನೈಟೆಡ್ ಅರಬ್ ಎಮಿರೇಟ್ಸ್ನ ಗಡಿಯ ಸಮೀಪವಿರುವ ಶಾಯ್ಬಾ ತೈಲ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಆದರೆ ಈ ಡ್ರೋನ್ ದಾಳಿ ಯಾರು ನಡೆಸಿದ್ದಾಗಿ ಸಚಿವಾಲಯವು ಬಹಿರಂಗಪಡಿಸಿಲ್ಲ.
"ಈ ದಾಳಿಯ ಪ್ರಯತ್ನದಲ್ಲಿ ಫಿಲಿಪೈನ್ಸ್ ಮತ್ತು ನೇಪಾಳದ ತಲಾ ಒಬ್ಬರು, ಒಟ್ಟು ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಹಾಗೂ ಇನ್ನಿಬ್ಬರು ಗಾಯಗೊಂಡಿದ್ದಾರೆ" ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಸಚಿವಾಲಯದ ಪ್ರಕಾರ, ಗಾಯಗೊಂಡ ಇಬ್ಬರು ವ್ಯಕ್ತಿಗಳು ಪಾಕಿಸ್ತಾನ ಮತ್ತು ಭಾರತದ ಪ್ರಜೆಗಳಾಗಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ, ಕ್ಷಿಪಣಿಯನ್ನು ತಡೆಹಿಡಿದಾಗ ಉದುರಿದ ಅವಶೇಷಗಳು ಬಿದ್ದಿದ್ದರಿಂದ ಒಬ್ಬ ಭಾರತೀಯ ಮತ್ತು ಒಬ್ಬ ಪಾಕಿಸ್ತಾನಿ ಪ್ರಜೆ ಸೇರಿದಂತೆ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.