ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಸ್ಐಆರ್ ಬಳಿಕ ಉತ್ತರಪ್ರದೇಶದ ಕರಡು ಪಟ್ಟಿಯಲ್ಲಿ 2.89 ಕೋಟಿ ಮತದಾರರ ಹೆಸರಿಲ್ಲ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಉತ್ತರಪ್ರದೇಶದ 2.89 ಕೋಟಿ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ. ಈ ಹಿಂದೆ ಸುಮಾರು 15.44 ಕೋಟಿ ನೋಂದಾಯಿತ ಮತದಾರರಿದ್ದು, ಪರಿಷ್ಕರಣೆ ಬಳಿಕ ಮತದಾರರ ಸಂಖ್ಯೆ ಸುಮಾರು 12.55 ಕೋಟಿಗೆ ಇಳಿಕೆಯಾಗಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.

ಶೇ. 18ರಷ್ಟು ಉತ್ತರಪ್ರದೇಶದ ಮತದಾರರ ಹೆಸರು ಅಳಿಸಿದ ಎಸ್ಐಆರ್

(ಸಂಗ್ರಹ ಚಿತ್ರ) -

ಲಕ್ನೋ: ಉತ್ತರ ಪ್ರದೇಶ (Uttar Pradesh) ಕರಡು ಮತದಾರರ ಪಟ್ಟಿಯನ್ನು (Draft Electoral Roll) ಬಿಡುಗಡೆ ಮಾಡಲಾಗಿದೆ. ಇದರಲ್ಲಿ 2.89 ಕೋಟಿ ಮತದಾರರನ್ನು (Voters) ಕಾಣೆಯಾಗಿದ್ದಾರೆ ಎಂದು ಗುರುತಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಬಳಿಕ ತೆಗೆದುಹಾಕಿರುವ ಶೇ. 18ರಷ್ಟು ಉತ್ತರಪ್ರದೇಶದ ಮತದಾರರಲ್ಲಿ 46.23 ಲಕ್ಷ ಮೃತ ಮತದಾರರು, ಸುಮಾರು 2.17 ಕೋಟಿ ಮತದಾರರು ಸ್ಥಳಾಂತರಗೊಂಡಿದ್ದಾರೆ ಮತ್ತು 25.47 ಲಕ್ಷ ನಕಲಿ ಮತದಾರರು ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದಲ್ಲಿ ಈ ಹಿಂದೆ ಸುಮಾರು 15.44 ಕೋಟಿ ನೋಂದಾಯಿತ ಮತದಾರರಿದ್ದು, ಪರಿಷ್ಕರಣೆ ಬಳಿಕ ಮತದಾರರ ಸಂಖ್ಯೆ 12.55 ಕೋಟಿಗೆ ಇಳಿಕೆಯಾಗಿದೆ ಎಂದು ಭಾರತದ ಚುನಾವಣಾ ಆಯೋಗ (Election Commission) ತಿಳಿಸಿದೆ.

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಬಳಿಕ ಭಾರತೀಯ ಚುನಾವಣಾ ಆಯೋಗವು ಮಂಗಳವಾರ ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶೇ. 18ರಷ್ಟು ಅಂದರೆ ಸರಿಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.

ಮಹಾರಾಷ್ಟ್ರ ಪಾಲಿಕೆ ಚುನಾವಣೆ; ಬಿಜೆಪಿ–ಕಾಂಗ್ರೆಸ್ ಅಚ್ಚರಿಯ ಮೈತ್ರಿ

ಈ ಕುರಿತು ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ, ಮತದಾರರ ಕರಡು ಪಟ್ಟಿಯ ಸಂಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಮತದಾರರು ಪರಿಶೀಲಿಸಿ ತಮ್ಮ ಹೆಸರುಗಳನ್ನು ಕಾಣಬಹುದು ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯ 2025ರ ಅಕ್ಟೋಬರ್ 27ರಂದು ಪ್ರಾರಂಭವಾಗಿತ್ತು. ಆಗ ರಾಜ್ಯದಲ್ಲಿ 15,30,92,000 ನೋಂದಾಯಿತ ಮತದಾರರಿದ್ದರು. ಮತದಾರರ ಎಣಿಕೆ ಹಂತವು ಡಿಸೆಂಬರ್ 11 ರಂದು ಕೊನೆಗೊಳ್ಳಬೇಕಿತ್ತು. ಆದರೆ ಸುಮಾರು 2.97 ಕೋಟಿ ಹೆಸರುಗಳನ್ನು ತೆಗೆದು ಹಾಕಲಾಗುತ್ತಿದೆ ಎನ್ನುವ ಮಾಹಿತಿ ಬಂದ ಬಳಿಕ ಇದರ ಮರು ಪರಿಶೀಲನೆಗೆ ಹೆಚ್ಚುವರಿ 15 ದಿನಗಳನ್ನು ನೀಡಲಾಯಿತು. ಈ ಬಳಿಕ ಸುಮಾರು 15 ಕೋಟಿಗೂ ಹೆಚ್ಚು ಮತದಾರರು ಅಥವಾ ಅವರ ಕುಟುಂಬ ಸದಸ್ಯರು ಸಹಿ ಮಾಡಿದ ಅರ್ಜಿಗಳು ಬಂದಿದ್ದು, ಶೇ. 18ರಷ್ಟು ಮತದಾರರು ಅರ್ಜಿಯನ್ನು ಹಿಂತಿರುಗಿಸಿಲ್ಲ ಎಂದು ನವದೀಪ್ ರಿನ್ವಾ ತಿಳಿಸಿದ್ದಾರೆ.



ಅರ್ಜಿ ಹಿಂದಿರುಗದ ಪಟ್ಟಿಯಲ್ಲಿ 46.23 ಲಕ್ಷ ಮತದಾರರು ಮೃತಪಟ್ಟಿದ್ದು, ಸುಮಾರು 2.17 ಕೋಟಿ ಮತದಾರರು ಸ್ಥಳಾಂತರಗೊಂಡಿದ್ದಾರೆ ಮತ್ತು 25.47 ಲಕ್ಷ ನಕಲಿ ಮತದಾರರು ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಜನವರಿ 6ರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದ್ದು, ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು ಫೆಬ್ರವರಿ 6ರೊಳಗೆ ಫಾರ್ಮ್ 6 ಅನ್ನು ಸಲ್ಲಿಸುವ ಮೂಲಕ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು. ಅಳಿಸುವಿಕೆ ಅಥವಾ ತಿದ್ದುಪಡಿಗಾಗಿ ಫಾರ್ಮ್ 7 ಮತ್ತು 8ರಲ್ಲಿ ಅರ್ಜಿ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು 2026ರ ಮಾರ್ಚ್ 6ರಂದು ಪ್ರಕಟಿಸುವುದಾಗಿ ಅವರು ತಿಳಿಸಿದರು.

ಕರಡು ಪಟ್ಟಿಯಲ್ಲಿ ಅಳಿಸಲಾಗಿರುವ ಮತದಾರರಲ್ಲಿ ಲಕ್ನೋದಲ್ಲಿ ಅತೀ ಹೆಚ್ಚು ಅಂದರೆ ಸರಿಸುಮಾರು 12 ಲಕ್ಷ ಮತದಾರರ ಹೆಸರುಗಳಿವೆ. ಲಲಿತಪುರದಲ್ಲಿ ಅತೀ ಕಡಿಮೆ ಅಂದರೆ ಸರಿಸುಮಾರು 95,000 ಹೆಸರುಗಳಿವೆ ಎಂದರು.

ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆಯು ಉಚಿತವಾಗಿದ್ದು, ಸಹಾಯಕ್ಕಾಗಿ ಚುನಾವಣಾ ಆಯೋಗವು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು. ಹೊಸ ಸೇರ್ಪಡೆಗೆ 2008ರ ಜನವರಿ 1ರ ಮೊದಲು ಜನಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿನಿಗೆ ನಮಾಜ್ ಮಾಡಲು ಒತ್ತಾಯ; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ, ಪೊಲೀಸರಿಂದ ತನಿಖೆ

ತಮಿಳುನಾಡು ಮತ್ತು ಗುಜರಾತ್‌ನಲ್ಲೂ ಕೂಡ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯವನ್ನು ಇತ್ತೀಚೆಗೆ ಮುಕ್ತಾಯಗೊಳಿಸಲಾಗಿದೆ. ಅಲ್ಲಿ ಕ್ರಮವಾಗಿ ಸುಮಾರು 97 ಲಕ್ಷ, 74 ಲಕ್ಷ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ. ಅಸ್ಸಾಂನ ಕರಡು ಪಟ್ಟಿಯಲ್ಲಿ 10.56 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ. ಇದನ್ನು ಪರಿಶೀಲಿಸಿ ಅರ್ಹರು ನಿಗದಿತ ಗಡುವಿನೊಳಗೆ ಹಕ್ಕು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನವದೀಪ್ ರಿನ್ವಾ ತಿಳಿಸಿದ್ದಾರೆ.