ತಿರುವನಂತಪುರಂ: ದೇವರ ಉತ್ಸವಕ್ಕೆಂದು ತಂದಿದ್ದ ಆನೆಗಳು ಏಕಾಏಕಿ ರೊಚ್ಚಿಗೆದ್ದು ಬೇಕಾಬಿಟ್ಟಿ ಓಡಿದ್ದು, ಪರಿಣಾಮವಾಗಿ ಮೂವರು ಬಲಿಯಾದ ಘಟನೆ ಕೇರಳದ (Kerala) ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಕೊಯಿಲಾಂಡಿಯಲ್ಲಿ ದೇವಾಲಯ ಉತ್ಸವದ ಸಮಯದಲ್ಲಿ, ಆನೆಗಳು ಪಟಾಕಿ ಸದ್ದುಕೇಳಿ ರೊಚ್ಚಿಗೆದ್ದು ಇದ್ದಕ್ಕಿದ್ದಂತೆ ಓಡಲಾರಂಭಿಸಿದ್ದರಿಂದ ಕಾಲ್ತುಳಿತದಲ್ಲಿ 3 ಜನ ಮೃತ ಪಟ್ಟಿದ್ದು, 36 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳು ರೊಚ್ಚಿಗೆದ್ದ ನಂತರ ಈ ಘಟನೆ ನಡೆಯಿತು. ಉತ್ಸವಕ್ಕೆ ತಂದಿದ್ದ ಒಂದು ಆನೆ ಮದವೇರಿತು. ನಂತರ ಮತ್ತೊಂದು ಆನೆಯ ಮೇಲೆ ಆಕ್ರಮಣ ಮಾಡಲು ಸಜ್ಜಾಯಿತು. ಆಗ ಈ ಘಟನೆ ನಡೆದಿದೆ.
ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಕೊಯಿಲಾಂಡಿಯ ಕುರುವಂಗಾಡ್‌ನಲ್ಲಿರುವ ಮನಕುಲಂಗರ ದೇವಸ್ಥಾನದಲ್ಲಿ ಉತ್ಸವಕ್ಕೆಂದು ತಂದ ಎರಡು ಆನೆಗಳು ಕಾಳಗಕ್ಕಿಳಿದಿದ್ದವು. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ ಉತ್ಸವದ ಸಂದರ್ಭದಲ್ಲಿ ಪಟಾಕಿಗಳ ಶಬ್ದದಿಂದ ವಿಚಲಿತನಾದ ಆನೆಯೊಂದು ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಕುರವಂಗಡ್ ಮೂಲದ ಅಮ್ಮುಕುಟ್ಟಿ ಮತ್ತು ಲೀಲಾ ಮತ್ತು ರಾಜನ್ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Mahakumbh 2025: ಮಹಾಕುಂಭ ಮೇಳದ ಕಾಲ್ತುಳಿತದ ನಂತರ 15 ಸಾವಿರ ಜನ ಮಿಸ್ಸಿಂಗ್?
ಘಟನೆಯಲ್ಲಿ 30 ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಅವರನ್ನು ಕೊಯಿಲಾಂಡಿ ತಾಲ್ಲೂಕು ಆಸ್ಪತ್ರೆ ಮತ್ತು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೃತರಿಗೆ ಸಂತಾಪ ಸೂಚಿಸಿದ್ದು, ಇದೊಂದು ದುರಂತ ಘಟನೆ ಎಂದು ಹೇಳಿದ್ದಾರೆ. ಇನ್ನು ರಾಜ್ಯ ಅರಣ್ಯ ಸಚಿವ ಎ.ಕೆ. ಸಸೀಂದ್ರನ್ ಅವರು ಜಿಲ್ಲಾಧಿಕಾರಿಯಿಂದ ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಆನೆಗಳನ್ನು ಉತ್ಸವಕ್ಕೆ ಕರೆ ತರುವಾಗ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ವರದಿ ಬಂದ ನಂತರ ತನಿಖೆ ನಡೆಸಲಾಗವುದು ಎಂದು ಅವರು ಹೇಳಿದ್ದಾರೆ.