ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anti-Waqf Act Protest: ವಕ್ಫ್ ಕಾಯ್ದೆಗೆ ವಿರೋಧ; ಪಶ್ವಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: 3 ಬಲಿ

Waqf (Amendment) Act 2025: ಬಹು ಚರ್ಚಿತ ವಕ್ಫ್ ಕಾಯ್ದೆ ಜಾರಿಯಾಗಿದೆ. ಈ ಮಧ್ಯೆ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 3 ಮಂದಿ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಈ ಹಿಂಸಾಚಾರ ಭುಗಿಲೆದ್ದಿದೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತಾ: ಬಹು ಚರ್ಚಿತ ವಕ್ಫ್ ತಿದ್ದುಪಡಿ ಮಸೂದೆಯನ್ನು (Waqf (Amendment) Act 2025) ಕಳೆದ ವಾರ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ್ದು, ಈಗಾಗಲೇ ಕಾಯ್ದೆ ಜಾರಿಯಾಗಿದೆ. ಈ ಮಧ್ಯೆ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 3 ಮಂದಿ ಬಲಿಯಾಗಿದ್ದಾರೆ (Anti-Waqf Act Protest). ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸಂಶೇರ್ಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜಫ್ರಾಬಾದ್‌ನಲ್ಲಿ ತಂದೆ ಮತ್ತು ಮಗನನ್ನು ಅವರ ಮನೆಯೊಳಗೆ ಕೊಲೆ ಮಾಡಲಾಗಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಯುವಕನೊಬ್ಬ ಶನಿವಾರ (ಏ. 12) ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಜಫ್ರಾಬಾದ್‌ನಲ್ಲಿ ಮೃತಪಟ್ಟ ತಂದೆ ಮತ್ತು ಮಗನ ಕುಟುಂಬವು ಈ ಬಗ್ಗೆ ಮಾಹಿತಿ ನೀಡಿ, ಶನಿವಾರ ಬೆಳಗ್ಗೆ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ತಮ್ಮ ಮನೆಗೆ ಪ್ರವೇಶಿಸಿದರು. ಇವರು ದಾಳಿ ನಡೆಸಿ 60 ವರ್ಷದ ಹರ್ಗೋಬಿಂದಾ ದಾಸ್ ಮತ್ತು ಅವರ ಮಗ ಚಂದನ್ ದಾಸ್ (45)ನ ಕತ್ತು ಹಿಸುಕಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ತಂದೆ-ಮಗನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 138 ಮಂದಿಯನ್ನು ಬಂಧಿಸಲಾಗಿದೆ ಎಂದು ನ್ಯೂಸ್‌18 ವರದಿ ಮಾಡಿದೆ.



ಈ ಸುದ್ದಿಯನ್ನೂ ಓದಿ: Droupadi Murmu: ವಕ್ಫ್​ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ನಿಮ್ತಿಟಾ, ಶಂಶೇರ್ಗಂಜ್, ಜಂಗಿಪುರ, ಸುತಿ ಮತ್ತು ಜಫ್ರಾಬಾದ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ ಎಂದು ಮೂಲಗಳು ತಿಳಿಸಿದ್ದು, ರೈಲ್ವೆ ಪೊಲೀಸ್ ಪಡೆ (RPF) ಮತ್ತು ಗಡಿ ಭದ್ರತಾ ಪಡೆಗಳು (BSF) ಸ್ಥಳಗಳಲ್ಲಿ ಬೀಡುಬಿಟ್ಟಿವೆ. ಪಶ್ಚಿಮ ಬಂಗಾಳದಲ್ಲಿ ಕಂಡುಬಂದಿರುವ ಅಶಾಂತಿಯ ಮಧ್ಯೆ ಗೂಂಡಾಗಿರಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿದ ಡಿಜಿಪಿ ರಾಜೀವ್ ಕುಮಾರ್, "ಶುಕ್ರವಾರದಿಂದ ಜಂಗಿಪುರದಲ್ಲಿ ಅಶಾಂತಿಯ ವಾತಾವರಣ ಮುಂದುವರಿದಿದೆ ಮತ್ತು ಕೋಮು ಗಲಭೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ನಾವು ಯಾವುದೇ ರೀತಿಯ ಗೂಂಡಾಗಿರಿಯನ್ನು ಸಹಿಸುವುದಿಲ್ಲ. ಸಾರ್ವಜನಿಕರನ್ನು ಕಾಪಾಡುವುದೇ ನಮ್ಮ ಜವಾಬ್ದಾರಿʼʼ ಎಂದು ಭರವಸೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಪೋಸ್ಟ್‌ ಇಲ್ಲಿದೆ:



ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ

ಈ ಮಧ್ಯೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದ್ದಾರೆ. ʼʼಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಈ ಕಾಯ್ದೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ. ಹಾಗಾದರೆ ಈ ಗಲಭೆ ಯಾಕಾಗಿ?ʼʼ ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.

ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ. ಈ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಒತ್ತಿ ಹೇಳಿದ್ದಾರೆ. ಗಲಭೆಗಳನ್ನು ಪ್ರಚೋದಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. "ಈ ಕಾನೂನನ್ನು ನಾವು ಜಾರಿ ಮಾಡಲಿಲ್ಲ. ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದ್ದರಿಂದ ನೀವು ಕೇಂದ್ರ ಸರ್ಕಾರದಿಂದ ಉತ್ತರ ಪಡೆಯಬೇಕು" ಎಂದು ಅವರು ಪ್ರತಿಭಟನಾಕಾರರಿಗೆ ಸೂಚಿಸಿದ್ದಾರೆ.

ಪಶ್ವಿಮ ಬಂಗಾಳದ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಶುಕ್ರವಾರ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸ್ ವ್ಯಾನ್‌ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಜತೆಗೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.