Droupadi Murmu: ವಕ್ಫ್ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಪಾಸ್ ಆಗಿದ್ದ ಮಹತ್ವದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಗೀಕರಿಸಿದ್ದಾರೆ. ಜೊತೆಗೆ, ರಾಷ್ಟ್ರಪತಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ-2025ಕ್ಕೂ ಕೂಡ ತಮ್ಮ ಒಪ್ಪಿಗೆ ನೀಡಿದ್ದಾರೆ.


ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಪಾಸ್ ಆಗಿದ್ದ ಮಹತ್ವದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu) ಅವರು ಶನಿವಾರ ಅಂಗೀಕರಿಸಿದ್ದಾರೆ. ಜೊತೆಗೆ, ರಾಷ್ಟ್ರಪತಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ-2025ಕ್ಕೂ ಕೂಡ ತಮ್ಮ ಒಪ್ಪಿಗೆ ನೀಡಿದ್ದಾರೆ.ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ವಕ್ಫ್ ತಿದ್ದುಪಡಿ ಮಸೂದೆ ಕಾನೂನಾಗಿ ಮಾರ್ಪಟ್ಟಿದೆ. ವಕ್ಫ್ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಇದರ ಜೊತೆಗೆ ಮುಸ್ಲಿಮ್ ಸಂಸದರು, ಮುಸ್ಲಿಮ್ ಲೀಗ್, ಮುಸ್ಲಿಮ್ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿತ್ತು.
ಇದೀಗ ವಕ್ಫ್ (ತಿದ್ದುಪಡಿ) ಕಾಯ್ದೆಯು ಏಪ್ರಿಲ್ 5, 2025ರಂದು ರಾಷ್ಟ್ರಪತಿಗಳ ಒಪ್ಪಿಗೆ ಪಡೆದಿದೆ. ಮಸೂದೆಯು ಲೋಕಸಭೆಯಲ್ಲಿ ಪಾಸ್ ಆದ ಬಳಿಕ, ರಾಜ್ಯಸಭೆಯಲ್ಲಿ 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ ಶುಕ್ರವಾರ ಮುಂಜಾನೆ ಈ ಶಾಸನವು ಅನುಮೋದನೆಗೊಂಡಿತ್ತು. ಬಳಿಕ ಸಂಸತ್ತು ಮಸೂದೆಯನ್ನು ಅಂಗೀಕರಿಸಿತ್ತು. ಚರ್ಚೆಯಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಮಸೂದೆಯನ್ನು "ಮುಸ್ಲಿಂ ವಿರೋಧಿ" ಮತ್ತು "ಅಸಂವಿಧಾನಿಕ" ಎಂದು ಟೀಕಿಸಿದ್ದರು. ಆದರೆ ಮಸೂದೆಯು "ಐತಿಹಾಸಿಕ ಸುಧಾರಣೆ" ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು.
ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ 128 ಮತಗಳೊಂದಿಗೆ ಪಾಸ್ ಆಗಿತ್ತು. ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಸರಿಸುಮಾರು 17 ಗಂಟೆ ಬಿಲ್ ಕುರಿತು ಚರ್ಚೆ ನಡೆದಿತ್ತು. ಕೊನೆಗೆ ಮಸೂದೆಯನ್ನು ಮತಕ್ಕೆ ಹಾಕಲಾಗಿತ್ತು. ಈ ವೇಳೆ 128 ಸಂಸದರು ಬಿಲ್ ಪರವಾಗಿ ಮತ ಹಾಕಿದ್ದರೆ, 95 ಸಂಸದರು ಬಿಲ್ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರು. ಇನ್ನು ಲೋಕಸಭೆಯಲ್ಲಿ ಸರಿಸುಮಾರು 12 ಗಂಟೆಗಳ ಕಾಲ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಚರ್ಚೆ ನಡೆದಿತ್ತು. ಬಳಿಕ ಮತ ಚಲಾಣೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪರ 288 ಮತಗಳು ಬಿದ್ದಿತ್ತು. ವಿರುದ್ಧವಾಗಿ 232 ಮತಗಳು ಚಲಾವಣೆಗೊಂಡಿತ್ತು.
ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧವೇಕೆ? ವಕ್ಫ್ ಹೊಂದಿರುವ ಭೂಮಿ ಎಷ್ಟು ಗೊತ್ತೇ?
ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ
ವಕ್ಫ್ (ತಿದ್ದುಪಡಿ) ಮಸೂದೆ ಮಸೂದೆಯ ಸಿಂಧುತ್ವವನ್ನು ಪ್ರಶ್ನಿಸಿ, ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಸೂದೆಯು ವಕ್ಫ್ ಆಸ್ತಿಗಳು ಮತ್ತು ಅವುಗಳ ನಿರ್ವಹಣೆಯ ಮೇಲೆ "ಅನಿಯಂತ್ರಿತ ನಿರ್ಬಂಧ" ವಿಧಿಸುತ್ತದೆ. ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಜಾವೇದ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.