ನವದೆಹಲಿ: ಈ ಬಾರಿಯ ದಸರಾ ಹಬ್ಬದಂದು ದೇಶದ ರಾಜಧಾನಿಯಲ್ಲಿ ಶ್ರೀ ಕೇಶವ ರಾಮಲೀಲಾ ಸಮಿತಿಯು ರಾವಣ, ಕುಂಭಕರ್ಣ ಮತ್ತು ಮೇಘನಾದನ ಸಾಂಪ್ರದಾಯಿಕ ಪ್ರತಿಕೃತಿಗಳ ಜೊತೆಗೆ, ಈ ಬಾರಿ ಬರೋಬ್ಬರಿ 30 ಅಡಿ ಎತ್ತರದ ಜಿರಳೆ (Cockroach) ಪ್ರತಿಕೃತಿಯನ್ನು (Dussehra) ದಹಿಸಲು ನಿರ್ಧರಿಸಿದೆ. 'ಸ್ವಚ್ಛ ಭಾರತ' ಮತ್ತು 'ಸ್ವಚ್ಛ ದೆಹಲಿ' ಅಭಿಯಾನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.
ಜಿರಳೆಯು ಕೊಳಕು, ಅಶುಚಿತ್ವ, ಭ್ರಷ್ಟಾಚಾರ ಮತ್ತು ರೋಗಗಳ ಸಂಕೇತವಾಗಿದೆ. ಸಮಾಜದಿಂದ ಇಂತಹ ಕೆಡುಕುಗಳನ್ನು ತೊಡೆದುಹಾಕುವ ಉದ್ದೇಶದಿಂದ ಇದನ್ನು ದಹಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕ ಅಶೋಕ್ ಗೋಯಲ್ ಮತ್ತು ರಾಮಲೀಲಾ ಸಮಿತಿ ಸ್ಪಷ್ಟಪಡಿಸಿದ್ದಾರೆ. ಹಿಂದಿನ ವರ್ಷಗಳಲ್ಲಿಯೂ ಸಹ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸಲು ಸಮಿತಿಯು ಹೆಚ್ಚುವರಿ ಪ್ರತಿಕೃತಿಗಳನ್ನು ಪರಿಚಯಿಸಿತ್ತು ಎಂದು ಗೋಯಲ್ ಹೇಳಿದ್ದಾರೆ.
ಸಿಜೆಪಿ ಕಿಡಿ
ಈ 30 ಅಡಿ ಜಿರಳೆ ಪ್ರತಿಕೃತಿಯು ತಮ್ಮನ್ನು ಉದ್ದೇಶಿಸಿ ಮಾಡಿದ ವ್ಯಂಗ್ಯ ಎಂದು ಸಿಜೆಪಿ ನಾಯಕರು ಆರೋಪಿಸಿದ್ದಾರೆ. ಇದು ಕೇವಲ ಸ್ವಚ್ಛತೆಯ ಸಂದೇಶವಲ್ಲ, ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಆಕ್ರೋಶ ಹೊರಹಾಕಿರುವ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಮೆಗಳ ಪಕ್ಕದಲ್ಲಿ ಜಿರಳೆ ಪ್ರತಿಮೆಯನ್ನು ನಿಲ್ಲಿಸಿರುವ ವಿಡಿಯೋವನ್ನು ಹಂಚಿಕೊಂಡ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಉಚಿತ ಪ್ರಚಾರಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಮೇಲೆ ಬಸ್ ಪಲ್ಟಿ; 8 ಮಂದಿ ಸಾವು
ಇನ್ನು ದಸರಾ ಮುಗಿದ ಬಳಿಕ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧದ ಹೋರಾಟದ ಭಾಗವಾಗಿ, ಕಾಕ್ರೋಚ್ ಜನತಾ ಪಾರ್ಟಿ (CJP)ಯು ಅಕ್ಟೋಬರ್ 23ರಿಂದ ದೇಶಾದ್ಯಂತ ಬೃಹತ್ ಜನಾಂದೋಲನ ಹಾಗೂ ಪ್ರತಿಭಟನೆ ನಡೆಸಲು ಅಧಿಕೃತವಾಗಿ ಸಜ್ಜಾಗಿದೆ. ದೆಹಲಿಯ ಕನಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಪ್ರತಿಭಟನೆಗಳ ವೇಳೆ ಬಂಧನಕ್ಕೊಳಗಾಗಿದ್ದ ಸಿಜೆಪಿ ಮುಖಂಡರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 21ರವರೆಗೆ (ಬುಧವಾರ) ವಿಸ್ತರಿಸಲಾಗಿದ್ದು, ಅಂದು ಅವರನ್ನು ಮತ್ತೆ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ. ನಾಯಕರ ಸಂಪೂರ್ಣ ಬಿಡುಗಡೆಯ ಬೆನ್ನಲ್ಲೇ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಸಹ-ಸಂಚಾಲಕರು ತಿಳಿಸಿದ್ದಾರೆ.