Al-Qaeda Terrorists Arrested: ಭರ್ಜರಿ ಉಗ್ರ ಬೇಟೆ; 4 ಆಲ್-ಖೈದಾ ಭಯೋತ್ಪಾದಕರು ಅರೆಸ್ಟ್
Anti Terrorist Squad: ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 4 ಆಲ್-ಖೈದಾ ಭಯೋತ್ಪಾದಕರನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಇಬ್ಬರನ್ನು ಗುಜರಾತ್‌ನಿಂದ, ಮತ್ತಿಬ್ಬರನ್ನು ದೆಹಲಿ ಮತ್ತು ಉತ್ತರ ಪ್ರದೇಶದ ನೋಯ್ಡಾದಿಂದ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮೊಹಮ್ಮದ್ ಫೈಕ್, ಮೊಹಮ್ಮದ್ ಫರ್ದೀನ್, ಸೆಫುಲ್ಲಾ ಕುರೇಶಿ ಮತ್ತು ಜೀಶನ್ ಅಲಿ ಎಂದು ಗುರುತಿಸಲಾಗಿದೆ.


ಗಾಂಧಿನಗರ: ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ದೇಶದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಚುರುಕುಗೊಂಡಿದೆ. ಇದೀಗ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 4 ಆಲ್-ಖೈದಾ (Al-Qaeda) ಭಯೋತ್ಪಾದಕರನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ (Anti Terrorist Squad) ಅಧಿಕಾರಿಗಳು ಬಂಧಿಸಿದ್ದಾರೆ. ಇಬ್ಬರನ್ನು ಗುಜರಾತ್‌ನಿಂದ, ಮತ್ತಿಬ್ಬರನ್ನು ದೆಹಲಿ ಮತ್ತು ಉತ್ತರ ಪ್ರದೇಶದ ನೋಯ್ಡಾದಿಂದ ವಶಕ್ಕೆ ಪಡೆಯಲಾಗಿದೆ. ಇವರು ನಕಲಿ ನೋಟು ದಂಧೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಫೈಕ್, ಮೊಹಮ್ಮದ್ ಫರ್ದೀನ್, ಸೆಫುಲ್ಲಾ ಕುರೇಶಿ ಮತ್ತು ಜೀಶನ್ ಅಲಿ ಎಂದು ಗುರುತಿಸಲಾಗಿದೆ. ಇವರು ಅಲ್-ಖೈದಾದ ಸಿದ್ಧಾಂತವನ್ನು ಹರಡಲು ಸಾಮಾಜಿಕ ಜಾಲತಾಣ ಮತ್ತು ಅನುಮಾನಾಸ್ಪದ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ತಮ್ಮ ಚಲನವಲನ ಗೊತ್ತಾಗದಿರಲು ಆಟೋ-ಡಿಲೀಟ್ ಆ್ಯಪ್ ಉಪಯೋಗಿಸಿದ್ದಾರೆ ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಮಹತ್ವದ ಮಾಹಿತಿ ಕಲೆ ಹಾಕಲಾಗುತ್ತಿದೆ.
#WATCH | Gujarat ATS arrested four terrorists with links to AQIS (Al-Qaeda in the Indian subcontinent). The four have been identified as Mohd Faiq r/o Delhi, Mohd Fardeen r/o Ahmedabad (Gujarat), Sefullah Kureshi r/o Modasa (Gujarat) and Zeeshan Ali r/o Noida (UP). pic.twitter.com/IyFutWglUi
— ANI (@ANI) July 23, 2025
ಈ ಸುದ್ದಿಯನ್ನೂ ಓದಿ: Encounter In Kishtwar: ಜಮ್ಮು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಮತ್ತೆ ಎನ್‌ಕೌಂಟರ್; ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳಿಂದ ಗುಂಡಿನ ದಾಳಿ
ಆರೋಪಿಗಳು ಆಲ್-ಖೈದಾ ಸಂಘಟನೆಯಲ್ಲಿ ಹಲವು ದಿನಗಳಿಂದ ತೊಡಗಿಸಿಕೊಂಡಿದ್ದಾರೆ ಎಂದು ಗುಜರಾತ್ ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ. ಈ ಎಲ್ಲ ಉಗ್ರರು 20ರಿಂದ 25 ವರ್ಷ ವಯಸ್ಸಿನವರು. ಎಟಿಎಸ್‌ನ ರಾಡಾರ್ ಸಂಪರ್ಕಕ್ಕೆ ಬಂದ ಬಳಿಕ ಇವರ ಕೃತ್ಯ ಅಧಿಕಾರಿಗಳಿಗೆ ತಿಳಿಯಿತು. ಸದ್ಯ ಅವರ ಚಾಟಿಂಗ್ ಮತ್ತು ಸೋಶಿಯಲ್ ಮೀಡಿಯಾದಲ್ಲಿನ ಚಟುವಟಿಕೆಯ ಮಾಹಿತಿ ಕಲೆ ಹಾಕಲಾಗುತ್ತಿದೆ.
ಜನರ ದಾರಿ ತಪ್ಪಿಸುತ್ತಿದ್ದರು
ಈ ನಾಲ್ವರು ಭಯೋತ್ಪಾದಕರು ವಾಟ್ಸ್‌ಆ್ಯಪ್ ಮೂಲಕ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದ್ದರು. ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದಿಸುತ್ತಿದ್ದರು. ಮನೆಯಲ್ಲಿ ಕುಳಿತುಕೊಂಡೇ ಭಯೋತ್ಪಾದಕ ಚಟುವಟಿಕೆ ನಡೆಸುವಂತೆ ಜನರಿಗೆ ಕರೆ ನೀಡುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇವರು ಪಾಕಿಸ್ತಾನದ ಜತೆ ನಂಟು ಹೊಂದಿದ್ದಾರೆಯೇ ಎನ್ನವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.
ಯಾವುದು ಈ ಆಲ್-ಖೈದಾ ಸಂಘಟನೆ?
ಒಸಾಮಾ ಬಿನ್ ಲಾಡೆನ್‌ನ ಮಾರ್ಗದರ್ಶಕ ಶೇಖ್ ಅಬ್ದುಲ್ಲಾ ಅಜ್ಜಮ್ ರಚಿಸಿದ ಮಖ್ತಾಬ್ ಅಲ್-ಖಿದಾಮತ್ ಸಂಘಟನೆಯಿಂದ ಅಲ್-ಖೈದಾ ರೂಪುಗೊಂಡಿದೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಸಂಘಟನೆಯಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಅಲ್-ಖೈದಾ ಮತ್ತು ಅದರ ಅಂಗಸಂಸ್ಥೆಗಳು, ಗುಂಪಿನಿಂದ ಪ್ರೇರಿತರಾದವರು ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ದಾಳಿಗಳನ್ನು ನಡೆಸುತ್ತಿದ್ದಾರೆ.
ಮಹತ್ವದ ಮಾಹಿತಿ ಹೊರ ಬೀಳುವ ನಿರೀಕ್ಷೆ
1991ರಲ್ಲಿ ಆರಂಭವಾದ ಅಲ್-ಖೈದಾ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಪೇಶಾವರದಲ್ಲಿ ನೆಲೆಗೊಂಡಿದೆ. 1996ರಿಂದ 2001ರ ಅಂತ್ಯದವರೆಗೆ ಬಿನ್ ಲಾಡೆನ್ ಮತ್ತು ಆತನ ಸಹಚರರು ಇದನ್ನು ನಿರ್ವಹಿಸುತ್ತಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಿಸಲು ಅಲ್-ಖೈದಾ ಯೋಜನೆ ರೂಪಿಸಿದೆ ಎನ್ನಲಾಗಿದ್ದು, ಇದೀಗ ಅಧಿಕಾರಿಗಳ ಬಲೆಗೆ ಬಿದ್ದಿರುವ ನಾಲ್ವರಿಂದ ಮಹತ್ವದ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.