ಸಿಜೆಪಿಯ ದೆಹಲಿ ಪ್ರತಿಭಟನೆಗೂ ಮುನ್ನ 400 ಜನರ ಬಂಧನ: ಮೆಟ್ರೋ ಸಂಚಾರ ಸ್ಥಗಿತ, ರೈಲುಗಳ ಸಂಚಾರ ರದ್ದು
CJP’s Delhi Protest: ದೆಹಲಿಯ ಹೃದಯಭಾಗದಲ್ಲಿ ಇಂದು (ಶನಿವಾರ, ಅ.10) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ, ರಾತ್ರೋರಾತ್ರಿ 400ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರವು ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ.10: ದೆಹಲಿಯ ಹೃದಯಭಾಗದಲ್ಲಿ ಇಂದು (ಶನಿವಾರ, ಅ.10) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ, ರಾತ್ರೋರಾತ್ರಿ 400ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ನೂರಾರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಹಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಜಂತರ್ ಮಂತರ್‌ನಲ್ಲಿ ಸೇರಲು ಬೆಂಬಲಿಗರನ್ನು ಸಜ್ಜುಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರವು ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜುಲೈ 20ರಂದು ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಉಂಟಾದ ಗೊಂದಲ ಮತ್ತು ಪೊಲೀಸರ ಕ್ರಮಗಳು ಇನ್ನೂ ಎರಡೂ ಕಡೆಯವರ ಮನಸ್ಸಿನಲ್ಲಿ ಹಸಿರಾಗಿವೆ. ಈ ಪ್ರತಿಭಟನೆಯ ಪರಿಣಾಮವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದರು. ಹೀಗಾಗಿ, ಈ ಬಾರಿಯ ಪ್ರತಿಭಟನೆ ವಿಭಿನ್ನ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಯೂಟ್ಯೂಬರ್ ಧ್ರುವ್ ರಾಠೀ ಅವರನ್ನು ಗುರುಗ್ರಾಮ ನಿವಾಸದಿಂದ ಬಂಧಿಸಲಾಗಿದೆ. ರಾಜೀವ್ ಚೌಕ್, ನವದೆಹಲಿ, ಸೆಂಟ್ರಲ್ ಸೆಕ್ರೆಟರಿಯೇಟ್, ಪಟೇಲ್ ಚೌಕ್ ಮತ್ತು ಕಾಶ್ಮೀರಿ ಗೇಟ್ ಸೇರಿದಂತೆ ದೆಹಲಿ ಮೆಟ್ರೋದ 45 ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಶನಿವಾರ (ಅ.10) ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಇತರ ರಾಜ್ಯಗಳ 250ಕ್ಕೂ ಹೆಚ್ಚು ರೈಲುಗಳು ಹಾಗೂ ಸ್ಥಳೀಯ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಸಿಜೆಪಿ ಪ್ರತಿಭಟನೆಗೂ ಮುನ್ನ ಯೂಟ್ಯೂಬರ್ ಧ್ರುವ್ ರಾಠಿ ಬಂಧನ; ದೆಹಲಿಯಲ್ಲಿ ಹೆಚ್ಚಿದ ಭದ್ರತೆ
ಶುಕ್ರವಾರ (ಅ.9) ರಾತ್ರಿ 10 ಗಂಟೆಯಿಂದ 24 ಗಂಟೆಗಳ ಕಾಲ ಜನಪಥ್-ಕರ್ತವ್ಯ ಪಾತ್ ಕ್ರಾಸಿಂಗ್‌ನಿಂದ 4 ಕಿ.ಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ನಿರ್ಬಂಧಗಳ ನಡುವೆಯೂ ಸ್ವಯಂಸೇವಕರು ಮತ್ತು ಬೆಂಬಲಿಗರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಯೋಜನೆಯನ್ನು ಮುಂದುವರಿಸಲಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಂದು ತಿಳಿಸಿದ್ದಾರೆ.
“ಒಂದೆಡೆ, ಪ್ರತಿಭಟನೆಗಳಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳುತ್ತೀರಿ. ಮತ್ತೊಂದೆಡೆ, ಮೆಟ್ರೋ, ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿ, ರಸ್ತೆಗಳನ್ನು ಬಂದ್ ಮಾಡಿದ್ದೀರಿ. ಇದರಿಂದ ಜನರಿಗೆ ತೊಂದರೆಯಾಗುವುದಿಲ್ಲವೇ?” ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.
ದೆಹಲಿ ಪೊಲೀಸರು ಸುಮಾರು 1.5 ಕಿಲೋಮೀಟರ್ ವ್ಯಾಪ್ತಿಯನ್ನು ಅತ್ಯಂತ ಸೂಕ್ಷ್ಮ ವಲಯವೆಂದು ಗುರುತಿಸಿದ್ದಾರೆ. ಈ ಪ್ರದೇಶವು ಜಂತರ್ ಮಂತರ್, ಜನಪಥ್, ಚುನಾವಣಾ ಆಯೋಗದ ಕಚೇರಿ ಮತ್ತು ದೆಹಲಿ ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ. ಜಂತರ್ ಮಂತರ್‌ನಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದ್ದು, ಪ್ರತಿಭಟನಾ ಸ್ಥಳಕ್ಕೆ ಹೋಗುವ ರಸ್ತೆಯ ಉದ್ದಕ್ಕೂ ಕನಿಷ್ಠ ಏಳು ಪದರಗಳ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.