ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kartavya Bhavan: ಕರ್ತವ್ಯ ಭವನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ; 700 ಕ್ಯಾಮೆರಾ, 26 ಲಿಫ್ಟ್‌....ಈ ಕಟ್ಟಡ ವಿಶೇಷತೆಗಳೇನು?

ಇಂದು ಆಗಸ್ಟ್ 6 ರಂದು ದೆಹಲಿಯ ಕರ್ತವ್ಯ ಪಥದಲ್ಲಿರುವ ಕರ್ತವ್ಯ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಈ ಕಟ್ಟಡವು ವಿಶಾಲವಾದ ಜಾಗದಲ್ಲಿದ್ದು, ತಳಪಾಯದ ವಿಸ್ತೀರ್ಣ 1.5 ಲಕ್ಷ ಚದರ ಮೀಟರ್ ಮತ್ತು ಅದರ ನೆಲಮಾಳಿಗೆಯ ವಿಸ್ತೀರ್ಣ 40,000 ಚದರ ಮೀಟರ್ ಆಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಆಗಸ್ಟ್ 6 ರಂದು ದೆಹಲಿಯ ಕರ್ತವ್ಯ ಪಥದಲ್ಲಿರುವ ಕರ್ತವ್ಯ ಭವನವನ್ನು (Kartavya Bhavan) ಉದ್ಘಾಟನೆ ಮಾಡಿದ್ದಾರೆ. ಗೃಹ ಸಚಿವಾಲಯ ಸೇರಿದಂತೆ ದೆಹಲಿಯ ಹಲವು ಇಲಾಖೆಗಳು ಇದೇ ಕಟ್ಟಡದ ಸೂರಿನಲ್ಲಿ ಕಾರ್ಯನಿರ್ವಹಿಸಲಿದೆ. ಹೊಸ ಕಟ್ಟಡದ ಉದ್ಘಾಟನೆಯ ನಂತರ ಪ್ರಧಾನಮಂತ್ರಿಯವರು ಕರ್ತವ್ಯ ಪಥದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೊಸ ಕಟ್ಟಡದಲ್ಲಿ ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ, ಎಂಎಸ್‌ಎಂಇ, ಪೆಟ್ರೋಲಿಯಂ ಸಚಿವಾಲಯ ಮತ್ತು ಇತರ ಹಲವು ಪ್ರಮುಖ ಸಚಿವಾಲಗಳು ಕಾರ್ಯ ನಿರ್ವಹಿಸಲಿದೆ.



ಒಳಾಂಗಣ ವಿನ್ಯಾಸ ಹೇಗಿದೆ?

ಕರ್ತವ್ಯ ಭವನದ ತಳಪಾಯದ ವಿಸ್ತೀರ್ಣ 1.5 ಲಕ್ಷ ಚದರ ಮೀಟರ್ ಮತ್ತು ಅದರ ನೆಲಮಾಳಿಗೆಯ ವಿಸ್ತೀರ್ಣ 40,000 ಚದರ ಮೀಟರ್. ಇದರ ಪಾರ್ಕಿಂಗ್ ಸ್ಥಳವು 600 ಕಾರುಗಳಿಗೆ ಸ್ಥಳಾವಕಾಶ ಕಲ್ಪಿಸಬಹುದಾದ ವಿಶಾಲ ಜಾಗವನ್ನು ಹೊಂದಿದೆ. ಕರ್ತವ್ಯ ಭವನದ ಕಟ್ಟಡವು 2 ನೆಲಮಾಳಿಗೆಗಳು, 1 ನೆಲ ಮಹಡಿ ಮತ್ತು 6 ಮಹಡಿಗಳನ್ನು ಹೊಂದಿದೆ. ಒಟ್ಟು 850 ಕಚೇರಿ ಕೊಠಡಿಗಳನ್ನು ಇದು ಹೊಂದಿದೆ. ಇದೇ ಕಟ್ಟಡದಲ್ಲಿ ಶಿಶುವಿಹಾರ, ಯೋಗ ಕೊಠಡಿ, ವೈದ್ಯಕೀಯ ಕೊಠಡಿ, ಕೆಫೆ, ಅಡುಗೆಮನೆ ಮತ್ತು ಬಹುಪಯೋಗಿ ಸಭಾಂಗಣವಿದೆ.



ಒಂದೇ ಸೂರಿನಡಿ 10 ಕಚೇರಿ!

ಕರ್ತವ್ಯ ಭವನದ 1ನೇ ಮಹಡಿಯಲ್ಲಿ ಪೆಟ್ರೋಲಿಯಂ ಸಚಿವಾಲಯ, 2ನೇ ಮಹಡಿಯಲ್ಲಿ MSME ಮತ್ತು DOPT, 3ನೇ ಮಹಡಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, 4ನೇ, 5ನೇ ಮತ್ತು 6ನೇ ಮಹಡಿಗಳಲ್ಲಿ ಗೃಹ ಸಚಿವಾಲಯದ ಕಚೇರಿ ಇರಲಿದೆ. ಗೃಹ ಸಚಿವರ ಕಚೇರಿ ಐದನೇ ಮಹಡಿಯಲ್ಲಿದೆ. 6ನೇ ಮಹಡಿಯಲ್ಲಿ ಗುಪ್ತಚರ ಬ್ಯೂರೋ ಕಚೇರಿ ಇದೆ. ಕರ್ತವ್ಯ ಭವನದಲ್ಲಿ 45 ಜನರಿಗೆ ಕುಳಿತುಕೊಳ್ಳುವ ಸಾಮರ್ಥ್ಯವಿರುವ 24 ಮುಖ್ಯ ಕೊಠಡಿಗಳಿವೆ. ಈ ವಿಶಾಲವಾದ ಕಟ್ಟಡ 67 ಸಭೆ ಕೊಠಡಿಗಳು ಮತ್ತು 27 ಲಿಫ್ಟ್‌ಗಳನ್ನು ಹೊಂದಿದೆ. ಇಡೀ ಕಟ್ಟಡದ ಒಳಗೆ ಮತ್ತು ಹೊರಗೆ 700 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.