ಭುವನೇಶ್ವರ, ಜ.25: ಪಾರ್ಶ್ವವಾಯು ಪೀಡಿತ ಪತ್ನಿಯನ್ನು (paralyzed wife) ಆಸ್ಪತ್ರೆಗೆ ಸಾಗಿಸಲು 75 ವರ್ಷದ ವ್ಯಕ್ತಿಯೊಬ್ಬರು 300 ಕಿ.ಮೀವರೆಗೆ ಸೈಕಲ್ ರಿಕ್ಷಾವನ್ನು ತುಳಿದಿರುವ ಮನಕಲಕುವ ಘಟನೆ ಒಡಿಶಾದಲ್ಲಿ (Odisha) ನಡೆದಿದೆ. ಸಂಬಲ್ಪುರದ ಮೋದಿಪದ ನಿವಾಸಿ ಬಾಬು ಲೋಹರ್ ಎಂಬುವವರ 70 ವರ್ಷದ ಪತ್ನಿ ಜ್ಯೋತಿ ಪಾರ್ಶ್ವವಾಯುಗೆ ಒಳಗಾದಾಗ ವೃದ್ಧ ವ್ಯಕ್ತಿ ಈ ನಿರ್ಧಾರ ತೆಗೆದುಕೊಂಡರು.
ಸಂಬಲ್ಪುರದ ಸ್ಥಳೀಯ ವೈದ್ಯರು ಜ್ಯೋತಿ ಅವರಿಗೆ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (SCBMCH) ವಿಶೇಷ ಆರೈಕೆಯ ಅಗತ್ಯವಿದೆ ಎಂದು ಸಲಹೆ ನೀಡಿದರು. ಹಣಕಾಸಿನ ಕೊರತೆ ಮತ್ತು ಖಾಸಗಿ ಆಂಬ್ಯುಲೆನ್ಸ್ ಪಡೆಯಲು ಸಾಧ್ಯವಾಗದ ಕಾರಣ ಏನು ಮಾಡುವುದು ಎಂಬ ಚಿಂತೆಗೊಳಗಾದರು. ಹೀಗಾಗಿ ತನ್ನ ಹಳೆಯ ಸೈಕಲ್ ರಿಕ್ಷಾವನ್ನು ಹಳೆಯ ಕುಶನ್ ಹಾಕಿ ಮಾರ್ಪಾಡು ಮಾಡಿದ ಅವರು ತಾತ್ಕಾಲಿಕ ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದರು.
ದಂಪತಿಗಳು ಜನವರಿ 19 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಆದರೆ, ಚೌದ್ವಾರ ಬಳಿ ವಾಹನವೊಂದು ಅವರ ಸೈಕಲ್ ರಿಕ್ಷಾಕ್ಕೆ ಡಿಕ್ಕಿ ಹೊಡೆದಾಗ ಪಾದಯಾತ್ರೆಯು ಎರಡನೇ ದುರಂತಕ್ಕೆ ಕಾರಣವಾಯಿತು. ಅಪಘಾತದಲ್ಲಿ ವೃದ್ಧ ಮಹಿಳೆಯು ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.
ಅಪಘಾತವಾಗಿ ಚಿಕಿತ್ಸೆ ಪಡೆದ ನಂತರವೂ ಬಾಬು ಲೋಹರ್ ಧೃತಿಗೆಡಲಿಲ್ಲ. ನಮಗೆ ಬೇರೆ ಯಾರೂ ಇಲ್ಲ. ನನಗೆ ಅವಳು, ಅವಳಿಗೆ ನಾನು ಮಾತ್ರ ಇರುವುದು ಎಂದ ಲೋಹರ್, ಮತ್ತೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ವೃದ್ಧ ದಂಪತಿಗಳ ಈ ಪರಿಸ್ಥಿತಿ ಬಗ್ಗೆ ತಿಳಿದ ಡಾ. ವಿಕಾಸ್ ಅವರು ಸಹಾಯ ಮಾಡಲು ಮುಂದಾದರು. ಆಸ್ಪತ್ರೆಗೆ ತಲುಪಲು ಸಹಾಯ ಮಾಡಿದ ಅವರು ವೈಯಕ್ತಿಕವಾಗಿ ಆರ್ಥಿಕ ಸಹಾಯವನ್ನೂ ನೀಡಿದರು. ಸದ್ಯ ವೃದ್ಧ ಬಾಬು ಲೋಹರ್ ಅವರು ತಮ್ಮ ಇಳಿವಯಸ್ಸಿನಲ್ಲೂ ಪತ್ನಿಯ ಚಿಕಿತ್ಸೆಗಾಗಿ ಕರೆದೊಯ್ದ ಕಥೆ ಎಲ್ಲರ ಮನಮಿಡಿದಿದೆ.
ಮಧ್ಯಪ್ರದೇಶದಲ್ಲೂ ಇದೇ ರೀತಿಯ ಘಟನೆ
ಮಧ್ಯಪ್ರದೇಶದಲ್ಲೂ ಇದೇ ರೀತಿಯ ಮನಕಲಕುವ ಘಟನೆ ನಡೆದಿದೆ. ಅನಾರೋಗ್ಯಪೀಡಿತ ಪತ್ನಿಯನ್ನು ಸಾಗಿಸಲು ಆಂಬ್ಯುಲೆನ್ಸ್ ಸಿಗದ ಕಾರಣ ವೃದ್ಧ ವ್ಯಕ್ತಿಯೊಬ್ಬರು, ತಾವು ಜೀವನೋಪಾಯಕ್ಕಾಗಿ ತರಕಾರಿ ಮಾರುವ ತಳ್ಳೋಗಾಡಿಯಲ್ಲಿ ಒಯ್ದಿದ್ದಾರೆ. ಆದರೆ, ದುರಾದೃಷ್ಟವಶಾತ್ ದಾರಿ ಮಧ್ಯೆ ಅವರ ಪತ್ನಿ ಕೊನೆಯುಸಿರೆಳೆದಿದ್ದಾರೆ. ಇದರಿಂದ ವೃದ್ಧ ವ್ಯಕ್ತಿ ನಡುಬೀದಿಯಲ್ಲಿ ಏನು ಮಾಡುವುದು ಎಂದು ತೋಚದೆ ಕರುಣಾಜನಕ ಪರಿಸ್ಥಿತಿಯಲ್ಲಿ ಕುಳಿತಿದ್ದಾರೆ.
ವೃದ್ಧ ವ್ಯಕ್ತಿಯ ಪರಿಸ್ಥಿತಿ ನೋಡಿದ ಜನರು ಬೇಸರಗೊಂಡಿದ್ದಾರೆ. ಈ ದೃಶ್ಯ ನೋಡಿದ ಅನೇಕರು ಕಂಬನಿ ಮಿಡಿದಿದ್ದಾರೆ. ಮಹಿಳೆಯ ಸಾವಿನ ವಿಷಯ ತಿಳಿದ, ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಯಾದ ಅಪ್ನಾ ಸೇವಾ ಸಮಿತಿಯ ವಾಹನವು ಮೃತದೇಹವನ್ನು ನಾರ್ಯವಾಲಿ ನಾಕಾ ಸ್ಮಶಾನಕ್ಕೆ ಕೊಂಡೊಯ್ದಿದೆ. ಅಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.