ASAP: ಆಮ್ ಅದ್ಮಿ ಪಕ್ಷದಿಂದ ಹೊಸ ವಿದ್ಯಾರ್ಥಿ ಘಟಕಕ್ಕೆ ಚಾಲನೆ
Arvind Kejriwal: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೊಸದಿಲ್ಲಿ ಕ್ಲಬ್‌ನಲ್ಲಿ ಪಕ್ಷದ ಹೊಸ ವಿದ್ಯಾರ್ಥಿ ಘಟಕವಾದ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಫಾರ್ ಆಲ್ಟರ್ನೇಟಿವ್ ಪಾಲಿಟಿಕ್ಸ್‌ಗೆ ಅಧಿಕೃತ ಚಾಲನೆ ನೀಡಿದರು. ಇದರ ಉದ್ದೇಶ ಭಾರತದ ವಿವಿಧ ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ರಾಜಕೀಯ ಸುಧಾರಣೆಗಳಿಗಾಗಿ ಪ್ರೇರೇಪಿಸುವುದು ಹಾಗೂ ಸಂಘಟಿಸುವುದು ಎಂದು ಆಪ್ ವಕ್ತಾರರು ತಿಳಿಸಿದ್ದಾರೆ.


ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಹೊಸದಿಲ್ಲಿ ಕ್ಲಬ್‌ನಲ್ಲಿ ಪಕ್ಷದ ಹೊಸ ವಿದ್ಯಾರ್ಥಿ ಘಟಕವಾದ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಫಾರ್ ಆಲ್ಟರ್ನೇಟಿವ್ ಪಾಲಿಟಿಕ್ಸ್ (ASAP)ಗೆ ಅಧಿಕೃತ ಚಾಲನೆ ನೀಡಿದರು. ಇದರ ಉದ್ದೇಶ ಭಾರತದ ವಿವಿಧ ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ರಾಜಕೀಯ ಸುಧಾರಣೆಗಳಿಗಾಗಿ ಪ್ರೇರೇಪಿಸುವುದು ಹಾಗೂ ಸಂಘಟಿಸುವುದು ಎಂದು ಆಪ್ ವಕ್ತಾರರು ತಿಳಿಸಿದ್ದಾರೆ.
ಇದುವರೆಗೆ ಆಪ್‌ನ ಯುವ ಘಟಕವಾದ ಛಾತ್ರ ಯುವ ಸಂಘರ್ಷ ಸಮಿತಿ (CYSS) ವಿದ್ಯಾರ್ಥಿ ಸಂಘಟನೆ ರೂಪದಲ್ಲಿ ಕೆಲಸ ಮಾಡುತ್ತಿತ್ತು. ದಿಲ್ಲಿ ವಿಶ್ವ ವಿದ್ಯಾನಿಲಯದ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತಿತ್ತು. ಇನ್ನುಮುಂದೆ ASAP ಮತ್ತು CYSS ಎರಡೂ ಜತೆಗೂಡಿ ಕೆಲಸ ಮಾಡಲಿವೆ. ಆಮ್ ಆದ್ಮಿ ಪಕ್ಷದ 12 ವರ್ಷದ ಇತಿಹಾಸದಲ್ಲಿಯೇ ಇದು ಹೊಸ ವಿದ್ಯಾರ್ಥಿ ಘಟಕ ಎನಿಸಿಕೊಂಡಿದೆ.
ಅರವಿಂದ್ ಕೇಜ್ರಿವಾಲ್ ಅವರ ಎಕ್ಸ್ ಪೋಸ್ಟ್ ಇಲ್ಲಿದೆ:
आम आदमी पार्टी की स्टूडेंट विंग ASAP (Association of Students for Alternative Politics) की शुरुआत पर सभी युवा साथियों को ढेरों शुभकामनाएँ।
— Arvind Kejriwal (@ArvindKejriwal) May 20, 2025
ASAP न सिर्फ़ छात्र राजनीति को एक नई दिशा देगा बल्कि Alternative Politics का एक सशक्त मंच बनेगा। इसके ज़रिए हम एक ऐसी युवा पीढ़ी तैयार… pic.twitter.com/4oPPTna7u8
ಈ ಸುದ್ದಿಯನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದಿಂದಲೇ ಆರಂಭ! ಭ್ರಷ್ಟಾಚಾರದಿಂದಲೇ ಅಂತ್ಯ!
ಅರವಿಂದ್ ಕೇಜ್ರಿವಾಲ್ ಮಾತನಾಡಿ "ಇಂದು ದೇಶವು ಆರೋಗ್ಯ ಸೇವೆ, ಉದ್ಯೋಗಾವಕಾಶ, ಆಹಾರ ಭದ್ರತೆ, ಮೂಲಸೌಕರ್ಯಗಳ ಕೊರತೆ ಮುಂತಾದ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ಮೂಲ ರಾಜಕೀಯ ಎಂದು ಕೆಲವರು ಹೇಳುತ್ತಾರೆ. ನನಗೆ ರಾಜಕೀಯದಲ್ಲಿ ಆಸಕ್ತಿಯೇ ಇಲ್ಲ. ಆದರೆ ಇಂದಿನ ಸಮಾಜದಲ್ಲಿ ರಾಜಕೀಯವು ಎಲ್ಲರ ಜೀವನವನ್ನೂ ಪ್ರಭಾವಿಸುತ್ತಿದೆ" ಎಂದರು. ʼʼಆಮ್ ಅದ್ಮಿಪಾರ್ಟಿ ಅಧಿಕಾರದಲ್ಲಿದ್ದಾಗ ದಿಲ್ಲಿಗೆ ನಿರಂತರ ವಿದ್ಯುತ್ ಪೂರೈಕೆ ಸಿಕ್ಕಿತು. ಈಗ ದಿಲ್ಲಿಯಲ್ಲಿ ದಿನಕ್ಕೆ 4-5 ಗಂಟೆಗಳ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ನಾವು ಶೈಕ್ಷಣಿಕವಾಗಿ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿಯೇ ಶಾಲಾ ಶುಲ್ಕ ಹೆಚ್ಚಾಯಿತು. ವಿದ್ಯಾರ್ಥಿಗಳನ್ನು ತಡೆಯಲು ಶಾಲೆಗಳಲ್ಲಿ ಬೌನ್ಸರ್‌ಗಳನ್ನು ನಿಯೋಜಿಸಿದರುʼʼ ಎಂದು ಆರೋಪಿಸಿದರು.
2025ರ ಫೆಬ್ರವರಿಯ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತ ನಂತರ ಕೇಜ್ರಿವಾಲ್ ದಿಲ್ಲಿಯಲ್ಲಿ ನಡೆಸಿದ ಕೆಲವೇ ರಾಜಕೀಯ ಕಾರ್ಯಕ್ರಮಗಳಲ್ಲಿ ಇದೂ ಒಂದು. ಈಗ ಅವರು ಪಂಜಾಬ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಲ್ಲಿ ಅವರ ಪಕ್ಷ ಸದ್ಯ ಅಧಿಕಾರದಲ್ಲಿದೆ.
ಅವರು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಾ, ʼʼಇವತ್ತು ಜಗತ್ತಿನೆಲ್ಲೆಡೆ ಕೃತಕ ಬುದ್ಧಿಮತ್ತೆ (AI)ಯ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ನಮ್ಮ ರಾಜಕಾರಣಿಗಳು ಮಕ್ಕಳನ್ನು ಧಾರ್ಮಿಕ ಕಲಹಗಳಲ್ಲಿ ತೊಡಗಿಸುತ್ತಿದ್ದಾರೆ. ತಮ್ಮ ಸ್ವಂತ ಮಕ್ಕಳಿಗೆ ಒಳ್ಳೆಯ ವಿದೇಶಿ ಕಾಲೇಜುಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಚುನಾವಣೆ ಗೆಲ್ಲುವುದು ಮುಖ್ಯವಲ್ಲ. ಜನರ ಮನ ಗೆಲ್ಲುವುದು, ಪ್ರಾಮಾಣಿಕ ಚುನಾವಣಾ ಗೆಲುವುʼʼ ಎಂದು ಹೇಳಿದರು.
ʼʼರಾಜಕೀಯ ಶಬ್ದವು ಇವತ್ತು ಅರ್ಥ ಕಳೆದುಕೊಂಡಿದೆ. ಇದಕ್ಕೆ ಮರಳಿ ಮಾನ್ಯತೆ ನೀಡಬೇಕಿದೆ. ದೇಶ ಸೇವೆಗೆ ನಿಷ್ಠೆಯಿರುವ ಹೊಸ ಪೀಳಿಗೆಯ ವಿದ್ಯಾರ್ಥಿ ನಾಯಕರನ್ನು ಬೆಳೆಸಬೇಕಿದೆ. ASAP ಸಂಘಟನೆಯು ದೇಶದಾದ್ಯಾಂತ ಕಾಲೇಜುಗಳಲ್ಲಿ ಸಂವಾದ, ಚರ್ಚಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಲಿದೆ. ಪ್ರತಿ ಕಾಲೇಜಿನಲ್ಲಿ ಚರ್ಚಾ ಬಳಗ, ಸಾಂಸ್ಕೃತಿಕ ತಂಡ ರಚಿಸಿ ರಾಜಕೀಯದ ವೈಭವವನ್ನು ಒದಗಿಸುವ ಕೆಲಸ ಮಾಡಲಾಗುವುದುʼʼ ಎಂದು ತಿಳಿಸಿದರು.
ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ವಿದ್ಯಾರ್ಥಿಗಳಿಗೆ ಅಗತ್ಯ ಶಿಕ್ಷಣ ಸಿಗುತ್ತಿಲ್ಲ. ನಮ್ಮ ದೇಶದಲ್ಲಿ 80 ಮಿಲಿಯನ್ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಇವರನ್ನು ಸಮಾಜ ಮತ್ತು ರಾಷ್ಟ್ರದ ಜತೆ ಸಂಪರ್ಕಿಸಬೇಕು. ಅವರಲ್ಲಿ ದೇಶಭಕ್ತಿಯನ್ನು ಬೆಳೆಸಬೇಕು. ಈ ಸಂಘಟನೆ ಶಿಕ್ಷಣ ಸುಧಾರಣೆಗಾಗಿ ಹೋರಾಡಲಿದೆʼʼ ಎಂದು ಹೇಳಿದರು.