Arvind Kejriwal: ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದಿಂದಲೇ ಆರಂಭ! ಭ್ರಷ್ಟಾಚಾರದಿಂದಲೇ ಅಂತ್ಯ!
ಅರವಿಂದ ಕೇಜ್ರಿವಾಲ್ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರನ್ನು ಬಿಜೆಪಿಯ ಪರ್ವೇಶ್ ವರ್ಮಾ ಸೋಲಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಸ್ವತಃ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿ ಜೈಲು ಪಾಲಾಗಿ ರಾಜಕೀಯವಾಗಿ ಅಧಪತನ ಕಂಡಿದ್ದಾರೆ.
![ಭ್ರಷ್ಟಾಚಾರದಿಂದಲೇ ಆರಂಭಗೊಂಡ ಕೇಜ್ರಿವಾಲ್ ರಾಜಕೀಯ ಏರಿಳಿತ ಹೇಗಿತ್ತು?](https://cdn-vishwavani-prod.hindverse.com/media/original_images/kejriwal.jpg)
ಅರವಿಂದ್ ಕೇಜ್ರಿವಾಲ್ ಜೀವನಚರಿತ್ರೆ
![Profile](https://vishwavani.news/static/img/user.png)
ನವದೆಹಲಿ: ದೇಶದ ಗಮನ ಸೆಳೆದಿದ್ದ ಬಹುನಿರೀಕ್ಷಿತ ದಿಲ್ಲಿ ವಿಧಾನಸಭೆ ಚುನಾವಣೆ(Delhi Election Results 2025) ಮತ ಎಣಿಕೆ ಮುಗಿದಿದ್ದು, ಸತತ ಮೂರನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯುವ ಆಸೆಯಲ್ಲಿದ್ದ ಆಡಳಿತರೂಢ ಆಪ್ ಹೀನಾಯ ಸೋಲು ಕಂಡಿದೆ. ಆಮ್ ಆದ್ಮಿ ಪಕ್ಷದ ಘಟಾನುಘಟಿ ನಾಯಕರು ಸೋಲು ಕಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆಪ್ ವರಿಷ್ಠ ನಾಯಕ ಅರವಿಂದ ಕೇಜ್ರಿವಾಲ್(Arvind Kejriwal) ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದ್ದಾರೆ. ಅರವಿಂದ ಕೇಜ್ರಿವಾಲ್ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರನ್ನು ಬಿಜೆಪಿಯ ಪರ್ವೇಶ್ ವರ್ಮಾ ಸೋಲಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಸ್ವತಃ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿ ಜೈಲು ಪಾಲಾಗಿ ರಾಜಕೀಯವಾಗಿ ಅಧಪತನ ಕಂಡಿದ್ದಾರೆ.
ಇಷ್ಟಕ್ಕೂ ಈ ಅರವಿಂದ ಕೇಜ್ರಿವಾಲ್ ರಾಜಕೀಯ ಜೀವನ ಶುರು ಆಗಿದ್ದು ಹೇಗೆ? ಇವರು ರಾಜಕೀಯದ ಪಾತಾಳಕ್ಕೆ ಕುಸಿದಿದ್ದು ಹೇಗೆ? ಇಲ್ಲಿದೆ interesting story. ಅಪಾರವಾದ ಸಾಮಾಜಿಕ ಕಳಕಳಿ ಹೊಂದಿದ್ದ ಅರವಿಂದ್ ಕೇಜ್ರಿವಾಲ್ ಪ್ರವರ್ಧಮಾನಕ್ಕೆ ಬಂದಿದ್ದು ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಉಪವಾಸ ಕುಳಿತ ಸಂದರ್ಭದಲ್ಲಿ. ನಂತರ ಚುನಾವಣಾ ರಾಜಕಾರಣಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ದೆಹಲಿ ಮುಖ್ಯಮಂತ್ರಿಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದರು.
ಕೇಜ್ರಿವಾಲ್ ಆರಂಭಿಕ ಜೀವನ ಹೇಗಿತ್ತು?
ಗೋಬಿಂದ್ ರಣ್ ಕೇಜ್ರಿವಾಲ್ ಹಾಗೂ ಗೀತಾದೇವಿ ಅವರ ಪುತ್ರ ಅರವಿಂದ್ ಕೇಜ್ರಿವಾಲ್. ಜೂನ್ 16, 1968ರಲ್ಲಿ ಹರ್ಯಾಣದಲ್ಲಿ ಜನನ. ಅಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಖರಗ್‌ಪುರದ ಪ್ರತಿಷ್ಠಿತ ಐಐಟಿಯಲ್ಲಿ 1989ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಟಾಟಾ ಸ್ಟೀಲ್‌ನಲ್ಲಿ 1989ರಲ್ಲಿ ವಾರ್ಷಿಕ 5 ರಿಂದ 8 ಲಕ್ಷದ ಪ್ಯಾಕೇಜ್‌ನ ನೌಕರಿ ಪಡೆದರು. 1992ರಲ್ಲಿ ಕೆಲಸವನ್ನು ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದರು. ಐಆರ್‌ಎಸ್ ಅಧಿಕಾರಿಯಾಗಿ 1995ರಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು.
ಸಮಾಜ ಸೇವೆಯಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕೋಲ್ಕತ್ತಾದ ಮದರ್ ಥೆರೇಸಾರ ಮಿಷನರಿ ಆಫ್ ಚಾರಿಟಿ, ರಾಮಕೃಷ್ಣ ಮಿಷನ್, ನೆಹರೂ ಯುವ ಕೇಂದ್ರ ಮುಂತಾದ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸರ್ಕಾರಿ ಕಚೇರಿಯಲ್ಲಿನ ಅವ್ಯವಹಾರಗಳು, ಮೀತಿ ಮೀರಿದ ಭ್ರಷ್ಟಾಚಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ದನಿ ಎತ್ತತೊಡಗಿದರು. 2006ರಲ್ಲಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದರು.
ಭ್ರಷ್ಟಾಚಾರದ ವಿರುದ್ಧ ಕೂಗು:
ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಹೋರಾಟ ಮಾಡಲು ಪರಿವರ್ತನ ಎಂಬ ಸಂಘಟನೆ ಸ್ಥಾಪನೆ ಮಾಡಿದರು. 2006ರ ಡಿಸೆಂಬರ್‌ನಲ್ಲಿ ಮನೀಷ್ ಸಿಸೋಡಿಯಾ ಅವರ ಜೊತೆ ಸೇರಿ ಪಬ್ಲಿಕ್ ಕಾಸ್ ಫಾರ್ ರಿಸರ್ಚ್ ಫೌಂಡೇಷನ್ ಎಂಬ ಸಂಸ್ಥೆ ಸ್ಥಾಪಿಸಿದರು. ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆರಂಭಿಸಿದರು. ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ಆಡಳಿತ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲು ಆರಂಭಿಸಿದರು. ಅರವಿಂದ್ ಕೇಜ್ರಿವಾಲ್ ಅವರ ಜನಪರ ಕಾಳಜಿಗಾಗಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿತು. ಆ ಬಳಿಕ ಇವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು.
ಮುಂದೆ ಕೇಜ್ರಿವಾಲ್ ಅವರು ಕಿರಣ್ ಬೇಡಿ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ನ್ಯಾ. ಸಂತೋಷ್ ಹೆಗ್ಡೆ ಮುಂತಾದ ಸಾಮಾಜಿಕ ಕಳಕಳಿ ಹೊಂದಿರುವವರ ಜತೆ ಸೇರಿದರು. ಭ್ರಷ್ಟರನ್ನು ಶಿಕ್ಷಿಸಲು ಜನ ಲೋಕಪಾಲ ಮಸೂದೆ ಜಾರಿಗೆ ತರಲು ಸರ್ಕಾರವನ್ನು ಆಗ್ರಹಿಸಲು ಜನಾಭಿಪ್ರಾಯ ಸಂಗ್ರಹ ಆರಂಭಿಸಿದರು. 'ಭ್ರಷ್ಟಾಚಾರ ವಿರುದ್ಧ ಭಾರತ' ಎಂಬ ಸಂಘ ಸ್ಥಾಪನೆ ಆಯಿತು. 2011ರ ಏಪ್ರಿಲ್‌ನಲ್ಲಿ ಜನಾಂದೋಲನಕ್ಕೆ ಚಾಲನೆ ನೀಡಲಾಯಿತು. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸುದೀರ್ಘ ಹೋರಾಟ ನಡೆಯಿತು. ಬಳಿಕ ಇದು ದೇಶವ್ಯಾಪಿ ವಿಸ್ತರಣೆ ಆಯಿತು.
ಈ ಸುದ್ದಿಯನ್ನೂ ಓದಿ: Delhi Election Results 2025: ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಪರ್ವೇಶ್ ವರ್ಮಾಗೆ ಜಯ; ಯಾರಿವರು? ಹಿನ್ನೆಲೆ ಏನು?
ರಾಜಕೀಯ ಜೀವನ ಆರಂಭ:
ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವ ನಿರ್ಧಾರವನ್ನು ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದರು. ಆದರೆ, ರಾಜಕೀಯದಲ್ಲಿ ಆಸಕ್ತಿ ಇಲ್ಲದ ಅಣ್ಣಾ ಹಜಾರೆ ಮುಂತಾದವರು ರಾಜಕೀಯದಿಂದ ದೂರ ಉಳಿದರು. 2012ರ ನವೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷವನ್ನು ಅರವಿಂದ್ ಕೇಜ್ರಿವಾಲ್ ಸ್ಥಾಪನೆ ಮಾಡಿದರು. 2013ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜಧಾನಿಯಲ್ಲಿ ಕಾಂಗ್ರೆಸ್ ಆಡಳಿತವನ್ನು ಅಂತ್ಯಗೊಳಿಸಿ ದೆಹಲಿ ಮುಖ್ಯಮಂತ್ರಿಯಾದರು.
ಜನಲೋಕಪಾಲ್ ಮಸೂದೆ ಮಂಡನೆಯಾಗದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಅರವಿಂದ್ ಕೇಜ್ರಿವಾಲ್ ಅವರು 48 ದಿನದಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರ್ಕಾರ ಪತನಗೊಂಡು ಮತ್ತೆ ಚುನಾವಣೆ ಎದುರಾಯಿತು. 2015ರಲ್ಲಿ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರ ತಲೆಕೆಳಗಾಯಿತು. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 67 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಅಪಾರ ಜನ ಬೆಂಬಲವನ್ನು ಪಡೆಯಿತು.
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲು:
ಬಹುಕೋಟಿ ಮೌಲ್ಯದ ಅಬಕಾರಿ ಹಗರಣಕ್ಕೆ ಸಂಬಂಧಿಸಿ ಅರವಿಂದ್ ಕೇಜ್ರಿವಾಲ್ ಅವರನ್ನು 2024ರ ಜುಲೈ 12ರಂದು ಇಡಿ ಅಧಿಕಾರಿಗಳು ಬಂಧಿಸಿದರು. ಇದಕ್ಕೂ ಮೊದಲು ಕೇಜ್ರಿವಾಲ್ ಗೆ ಇಡಿ ಅಧಿಕಾರಿಗಳು 8 ಬಾರಿ ಸಮನ್ಸ್ ನೀಡಿದ್ದರು. ಆದರೆ ವಿಚಾರಣೆಗೆ ಹಾಜರಾಗದೆ ಮೊಂಡುತನ ಪ್ರದರ್ಶಿಸಿದ ಕೇಜ್ರಿವಾಲ್ ಅವರನ್ನು ಅಂತಿಮವಾಗಿ ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಮುಂದೆ ಐದು ತಿಂಗಳ ಕಾಲ ಜೈಲಿನಲ್ಲಿದ್ದ ಕೇಜ್ರಿವಾಲ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಅವರ ರಾಜಕೀಯ ಅಧಪತನ ಅಲ್ಲಿಂದಲೇ ಆರಂಭವಾಗಿ ಇದೀಗ ದಿಲ್ಲಿ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುವಂತಾಗಿದೆ.
ಭ್ರಷ್ಟಾಚಾರವನ್ನೇ ಪ್ರಬಲವಾಗಿ ವಿರೋಧಿಸಿ ದೇಶದ ಪ್ರಭಾವಿ ರಾಜಕಾರಣಿಯಾಗಿ ಮೆರೆದಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಈಗ ಭ್ರಷ್ಟಾಚಾರವೇ ಮುಳುಗಿಸಿದ್ದು ವಿಪರ್ಯಾಸ!