ಇಟಾನಗರ, ಡಿ. 13: ಪಾಕಿಸ್ತಾನಕ್ಕೆ ಗೂಢಚಾರಿಕೆ ಮಾಡಿರುವ ಆರೋಪದ ಮೇಲೆ ಭಾರತೀಯ ವಾಯುಸೇನಾ (IAF) ನಿವೃತ್ತ ಅಧಿಕಾರಿಯನ್ನು ಅಸ್ಸಾಂ ಪೊಲೀಸರು (Assam Police) ಬಂಧಿಸಿದ್ದಾರೆ. ಆರೋಪಿಯನ್ನು ತೆಜ್ಪುರದ ಪಾಟಿಯಾ ಪ್ರದೇಶದ ನಿವಾಸಿ ಕುಲೆಂದ್ರ ಶರ್ಮಾ (Kulendra Sharma) ಎಂದು ಗುರುತಿಸಲಾಗಿದೆ. ಶರ್ಮಾನ ಚಲನವಲನಗಳನ್ನು ನಿರಂತರವಾಗಿ ಪೊಲೀಸರು ಗಮನಿಸುತ್ತಿದ್ದರು. ಪ್ರಾಥಮಿಕ ತನಿಖೆಯ ನಂತರ ಆತನನ್ನು ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ವ್ಯಕ್ತಿಯ ಮೇಲೆ ಕೆಲವು ದಿನಗಳಿಂದ ನಿಗಾ ಇರಿಸಲಾಗಿತ್ತು. ಆತ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳ ಜತೆ ಸಂಪರ್ಕದಲ್ಲಿದ್ದು, ಅವರಿಗೆ ಸೂಕ್ಷ್ಮ ಮಾಹಿತಿಯನ್ನು (sensitive information) ಪೂರೈಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಿಂದ ಅನುಮಾನಾಸ್ಪದ ಡೇಟಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಕೆಲವು ಡೇಟಾವನ್ನು ಅಳಿಸಲಾಗಿದೆ ಎಂದು ಶಂಕಿಸಲಾಗಿದೆ. ಶರ್ಮಾಗೆ ಪಾಕಿಸ್ತಾನದವರ ಜತೆ ಸಂಪರ್ಕವಿದೆ ಎಂಬ ಅನುಮಾನ ಪ್ರಬಲವಾಗಿದ್ದರೂ, ತನಿಖೆ ಪೂರ್ಣಗೊಳ್ಳುವವರೆಗೆ ಅದನ್ನು ದೃಢಪಡಿಸಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಹರಿಚರಣ್ ಭೂಮಿಜ್ ಹೇಳಿದರು.
ಅಸ್ಸಾಂ ಸೇನಾ ನೆಲೆಯ ಮೇಲೆ ಉಗ್ರರ ದಾಳಿ, ಮೂವರು ಯೋಧರಿಗೆ ಗಾಯ
ಶರ್ಮಾ ನಿವೃತ್ತರಾಗುವ ಮೊದಲು ತೇಜ್ಪುರದ ವಾಯುಪಡೆಯಲ್ಲಿ ಜೂನಿಯರ್ ವಾರೆಂಟ್ ಅಧಿಕಾರಿ (Junior Warrant Officer) ಆಗಿ ನಿಯೋಜನೆಗೊಂಡಿದ್ದ. ಅಲ್ಲಿ ಸುಖೋಯಿ 30, ಸ್ಕ್ವಾಡ್ರನ್ ಸೇರಿದಂತೆ ಪ್ರಮುಖ ವಾಯು ಸಂಪನ್ಮೂಲಗಳಿವೆ. 2002ರಲ್ಲಿ ನಿವೃತ್ತನಾದ. ಬಳಿಕ ಸ್ವಲ್ಪ ಸಮಯ ತೇಜ್ಪುರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದ. ಸದ್ಯ ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಗೆಳತಿ ಮೇಲೆ ಫೈರಿಂಗ್ ಮಾಡಿದ ಹುಚ್ಚು ಪ್ರೇಮಿ
ಯುವಕನೊಬ್ಬ ತನ್ನ ಗೆಳತಿಯ ಮನೆಗೆ ನುಗ್ಗಿ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಡೆದಿದೆ. ಅದೃಷ್ಟವಶಾತ್ ಯುವತಿ ಬದುಕುಳಿದಿದ್ದಾಳೆ. ಈ ಘಟನೆ ಪ್ಯಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಚ್ಚು ಪ್ರೇಮಿ ಆಕಾಶ್ ಕಶ್ಯಪ್ ಎಂಬಾತ ಯುವತಿ ಲಕ್ಷ್ಮೀ ಥಾಪಾ ಮೇಲೆ ಗುಂಡು ಹಾರಿಸಿದ್ದಾನೆ. ಆರೋಪಿ ಯುವಕ ಮನೆಗೆ ನುಗ್ಗಿ ತನ್ನ ಗೆಳತಿ ಲಕ್ಷ್ಮೀಯತ್ತ ಗುಂಡಿನ ಮಳೆಗೆರೆದಿದ್ದಾನೆ. ಗುಂಡು ಯುವತಿಯ ಕೈಗೆ ತಗುಲಿತು. ಗಾಯಗೊಂಡ ಆಕೆಯನ್ನು ಲೋಕಬಂಧು ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ಯಾರಾದ ಕಾಶಿರಾಮ್ ಕಾಲೋನಿಯಲ್ಲಿ ವಾಸಿಸುವ ಲಕ್ಷ್ಮೀ ಥಾಪಾ ಅವರ ಅಕ್ಕ ರಾಧಿಕಾ ಥಾಪಾ ನೀಡಿದ ದೂರಿನ ಆಧಾರದ ಮೇಲೆ, ಪ್ಯಾರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿಗಳು ಈ ಹಿಂದೆ ಸಂಬಂಧದಲ್ಲಿದ್ದರು. ಆದರೆ ನಂತರ ಆತನಿಂದ ಯುವತಿಯು ಬೇರ್ಪಟ್ಟಳು. ಕಳೆದ ಒಂದು ವರ್ಷದಿಂದ, ಯುವತಿಯು ಆರೋಪಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ ಆಕಾಶ್ ಈ ಅಪರಾಧ ಎಸಗಿದ್ದಾನೆ. ಪ್ರಸ್ತುತ ಯುವತಿ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.