Terrorists Attack: ಅಸ್ಸಾಂ ಸೇನಾ ನೆಲೆಯ ಮೇಲೆ ಉಗ್ರರ ದಾಳಿ, ಮೂವರು ಯೋಧರಿಗೆ ಗಾಯ
ಅಸ್ಸಾಂನ ಸೇನಾ ಶಿಬಿರದ ಮೇಲೆ ಇಂದು ಶಂಕಿತ ಉಗ್ರರು ದಾಳಿ ನಡೆಸಿದ್ದು, ಮೂವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕಾಕೋಪಥಾರ್ ಕಂಪನಿ ಮೇಲೆ ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಚಲಿಸುತ್ತಿರುವ ವಾಹನದಿಂದ ಉಗ್ರರು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ -

ದಿಸ್‌ಪುರ: ಅಸ್ಸಾಂ (Assam) ರಾಜ್ಯದ ತಿನುಸ್ಕಿಯಾ ಜಿಲ್ಲೆಯಲ್ಲಿರುವ ಭಾರತೀಯ ಸೇನಾ ನೆಲೆಯ ಮೇಲೆ ಗುರುವಾರ ಮಧ್ಯರಾತ್ರಿ ಶಂಕಿತ ಉಗ್ರರು ದಾಳಿ (Terrorists attack) ನಡೆಸಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಕಾಕೋಪಥಾರ್ ಕಂಪನಿ ಮೇಲೆ ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಚಲಿಸುತ್ತಿರುವ ವಾಹನದಿಂದ ಉಗ್ರರು ದಾಳಿ ನಡೆಸಿದ್ದಾರೆ. ಕೂಡಲೇ ಶಿಬಿರದಲ್ಲಿದ್ದ ಯೋಧರು ಪ್ರತಿದಾಳಿ ನಡೆಸಿದ್ದು, ಸಮೀಪದಲ್ಲಿಯೇ ಇದ್ದ ನಾಗರಿಕರ ಮನೆಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದಾಳಿಯಲ್ಲಿ ಮೂರು ಯುಬಿಜಿಎಲ್ (Under Barrel Grenade Launchers) ಬಳಕೆಯಾಗಿದ್ದು, ಸುಮಾರು 30 ನಿಮಿಷಗಳ ಕಾಲ ನಿರಂತರ ಗುಂಡಿನ ಚಕಮಕಿ ನಡೆದಿದೆ. ದಾಳಿಯ ತೀವ್ರತೆ ಹೆಚ್ಚಿದ್ದರೂ, ಮೂವರು ಸೈನಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿರುವುದನ್ನು ಹೊರತುಪಡಿಸಿ ಯಾವುದೇ ಸಾವು ಸಂಭವಿಸಿಲ್ಲ, ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ, ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು, "ದಾಳಿಯಲ್ಲಿ ಮೂವರು ಸೈನಿಕರಿಗೆ ಸಣ್ಣ ಗಾಯಗಳಾಗಿದ್ದು, ಹೆಚ್ಚಿನ ಹಾನಿಗಳಾಗಿಲ್ಲ. ಘಟನಾ ಸ್ಥಳವನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಉಗ್ರರ ಪತ್ತೆಗಾಗಿ ಸ್ಥಳೀಯ ಪೊಲೀಸರೊಂದಿಗೆ ಜಂಟಿ ಶೋಧಕಾರ್ಯ ನಡೆಸಲಾಗುತ್ತಿದೆ" ಎಂದಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಪರೀಕ್ಷೆ ನಿಲ್ಲಿಸಲು 'ಪ್ರಾಂಶುಪಾಲರು ಸತ್ತಿದ್ದಾರೆ' ಎಂಬ ನೊಟೀಸ್ ನೀಡಿದ ವಿದ್ಯಾರ್ಥಿಗಳು; ಮುಂದೇನಾಯ್ತು ಗೊತ್ತೆ?
ಡೂಮ್‌ಡೂಮಾ (Doomdooma) ಕಡೆಯಿಂದ ಟ್ರಕ್‌ನಲ್ಲಿ ಬಂದಿದ್ದ ಉಗ್ರರು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿ ಅರುಣಾಚಲ ಪ್ರದೇಶ (Arunachal Pradesh) ಕಡೆಗೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಸ್ಸಾಂ-ಅರುಣಾಚಲ (Assam-Arunachal) ಗಡಿ ಸಮೀಪದ ಟೆಂಗಾಪಾನಿ ಘಾಟ್ ಬಳಿ AS 25 EC 2359 ನೋಂದಣಿ ಸಂಖ್ಯೆಯ ಶಂಕಿತ ವಾಹನವನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಈ ದಾಳಿಯ ಹಿಂದೆ ಉಲ್ಫಾ (ಸ್ವತಂತ್ರ) ಸಂಘಟನೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ದಾಳಿಯ ನಂತರ, ಸೇನೆ ಮತ್ತು ಪೊಲೀಸರು ಸಂಯುಕ್ತ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಹತ್ತಿರದ ಗಡಿ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಈ ಪ್ರದೇಶವು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತರ್ ರಾಜ್ಯ ಗಡಿಗೆ ಸಮೀಪವಿರುವುದರಿಂದ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ.