Supreme Court: 40 ವರ್ಷ ಬಳಿಕ ಸುಪ್ರೀಂಕೋರ್ಟ್ ನಿಂದ ನ್ಯಾಯ ಪಡೆದ ಅತ್ಯಾಚಾರ ಸಂತ್ರಸ್ತೆ!
ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತೆಯೊಬ್ಬರಿಗೆ ಸುಮಾರು 40 ವರ್ಷಗಳ ನಂತರ ನ್ಯಾಯ ದೊರಕಿದೆ. ಪ್ರಕರಣ ಇಷ್ಟು ವರ್ಷಗಳ ಕಾಲ ವಿಳಂಬವಾಗಿದ್ದಕ್ಕೆ ಸುಪ್ರೀಂ ಕೋರ್ಟ್ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರಲ್ಲಿ ಕ್ಷಮೆ ಕೇಳಿದೆ. 1986 ರಲ್ಲಿ ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿತ್ತು.

ಸುಪ್ರೀಂ ಕೋರ್ಟ್

ನವದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತೆಯೊಬ್ಬರಿಗೆ ಸುಮಾರು 40 ವರ್ಷಗಳ ನಂತರ ನ್ಯಾಯ ದೊರಕಿದೆ. ಪ್ರಕರಣ ಇಷ್ಟು ವರ್ಷಗಳ ಕಾಲ ವಿಳಂಬವಾಗಿದ್ದಕ್ಕೆ ಸುಪ್ರೀಂ ಕೋರ್ಟ್ (Supreme Court) ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರಲ್ಲಿ ಕ್ಷಮೆ ಕೇಳಿದೆ. ತೀರ್ಪು ನೀಡಿದ ನಂತರ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನ್ಯಾಯ ವಿಳಂಬಕ್ಕೆ ವಿಷಾದ ವ್ಯಕ್ತಪಡಿಸಿದರು. ಈ ಅತ್ಯಾಚಾರ ಪ್ರಕರಣದ ವಿಚಾರವನ್ನು ಕೊನೆಗೊಳಿಸಲು ಇಷ್ಟು ಕಾಲಗಳು ಬೇಕಾಯಿತು ಎಂದು ಅವರು ದುಖಃ ವ್ಯಕ್ತಪಡಿಸಿದ್ದಾರೆ. 1986 ರಲ್ಲಿ ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿತ್ತು.
ಸುದೀರ್ಘ ಕಾನೂನು ಹೋರಾಟದ ನಂತರ, 2013 ರಲ್ಲಿ ಹೈಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತು. ನಂತರ ಸಂತ್ರಸ್ತೆಯ ಕುಟುಂಬ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿತ್ತು. ಆರೋಪಿಗಳು 4 ವಾರಗಳಲ್ಲಿ ಶರಣಾಗುವಂತೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂಜಯ್ ಕರೋಲ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ತೀರ್ಪು ಬರಲು ಸುಮಾರು 40 ವರ್ಷಗಳು ತೆಗೆದುಕೊಂಡಿದ್ದಕ್ಕೆ ಇಬ್ಬರೂ ನ್ಯಾಯಾಧೀಶರು ವಿಷಾದ ವ್ಯಕ್ತಪಡಿಸಿದರು.
ಸುಮಾರು 40 ವರ್ಷಗಳ ಹಿಂದೆ, ಮಾರ್ಚ್ 3, 1986 ರಂದು, ಗುಲಾಬ್ ಚಂದ್ ಎಂಬ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ದೌರ್ಜನ್ಯಕ್ಕೊಳಗಾದ ಬಾಲಕಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಹಾಗಾಗಿ ಆರೋಪಿ ಖುಲಾಸೆಗೊಂಡಿದ್ದನು. ಇದೀಗ ಆರೋಪಿ 4 ವಾರಗಳಲ್ಲಿ ಶರಣಾಗುವಂತೆ ನ್ಯಾಯಾಲಯ ಸೂಚಿಸಿದೆ. ಬಾಲ ಸಾಕ್ಷಿ (ಸಂತ್ರಸ್ತೆ) ಆಕೆಯ ವಿರುದ್ಧ ಅಪರಾಧ ಎಸಗಿರುವ ಬಗ್ಗೆ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಘಟನೆ ಬಗ್ಗೆ ಕೇಳಿದಾಗ, ಸಂತ್ರಸ್ತೆ ಮೌನವಾಗಿದ್ದಳು ಎಂದು ವಿಚಾರಣಾ ನ್ಯಾಯಾಧೀಶರು ದಾಖಲಿಸಿಕೊಂಡಿದ್ದರು. ಮತ್ತೆ ಕೇಳಿದಾಗ ಮೌನವಾಗಿ ಕಣ್ಣೀರು ಸುರಿಸಿದ್ದು ಬಿಟ್ಟರೆ ಮತ್ತೇನೂ ಹೇಳಿರಲಿಲ್ಲ" ಎಂದು ನ್ಯಾಯಪೀಠ ಹೇಳಿದೆ.
ಈ ಸುದ್ದಿಯನ್ನೂ ಓದಿ: Goa Murder Case: ವಿದೇಶಿ ಯುವತಿ ಮೇಲೆ ಅತ್ಯಾಚಾರ-ಕೊಲೆ; ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಆದರೆ ಇದನ್ನು ಆರೋಪಿಯ ಪರ ಅಂಶ ಎಂದು ಪರಿಗಣಿಸಲಾಗದು. ಬಾಲಕಿಯ ಮೌನದ ಹಿಂದೆ ಆಘಾತ ಕೆಲಸ ಮಾಡಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮಗುವಿನ ಮೌನವನ್ನು ವಯಸ್ಕ ಸಂತ್ರಸ್ತೆಯ ಮೌನದ ಜತೆ ತಾಳೆ ಮಾಡುವಂತಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಇದನ್ನು ಅಳೆಯಬೇಕಾಗುತ್ತದೆ ಎಂದು ವಿವರಿಸಿದ್ದಾರೆ.