ಅಜ್ಜಿಯ ಅಂತ್ಯಕ್ರಿಯೆಗೆ ಮಹಾರಾಷ್ಟ್ರದ ಹಳ್ಳಿಗೆ ಮರಳಿದ ಅಭಿಜಿತ್ ದೀಪ್ಕೆ; ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಪ್ರತಿಜ್ಞೆ
Abhijeet Dipke Returns to Village: ಬಂಧನದಿಂದ ಬಿಡುಗಡೆಯಾದ ಕೆಲವೇ ಗಂಟೆಗಳ ಬಳಿಕ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ತಮ್ಮ ಅಜ್ಜಿ ನಿಧನರಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದರು. ತಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಪತ್ರಿಜ್ಞೆ ಮಾಡಿದರು.
ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ) -
ಮುಂಬೈ, ಅ. 11: ಬಂಧನದಿಂದ ಬಿಡುಗಡೆಯಾದ ಕೆಲವೇ ಗಂಟೆಗಳ ಬಳಿಕ, ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಸಂಸ್ಥಾಪಕ ಅಭಿಜಿತ್ ದೀಪ್ಕೆ ತಮ್ಮ ಅಜ್ಜಿ ನಿಧನರಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ತವರು ಗ್ರಾಮಕ್ಕೆ ತೆರಳಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಈ ಬೆಳವಣಿಗೆಯ ನಡುವೆಯೂ, ಪಕ್ಷದ ಸಹ-ಸಂಚಾಲಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಅಭಿಜಿತ್ ದೀಪ್ಕೆ (Abhijeet Dipke) ತಿಳಿಸಿದ್ದಾರೆ. ಅಲ್ಲದೆ, ತಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಪಣ ತೊಟ್ಟಿದ್ದಾರೆ.
“ದುಃಖದ ಈ ಕ್ಷಣದಲ್ಲಿ ನನ್ನ ಕುಟುಂಬದೊಂದಿಗೆ ಇರಲು ನನ್ನ ಹಳ್ಳಿಗೆ ಹಿಂತಿರುಗುತ್ತಿದ್ದೇನೆ. ಸೌರವ್ ಮತ್ತು ಅಶುತೋಷ್ ರಂಕಾ ಶೀಘ್ರದಲ್ಲೇ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಯಾವುದೇ ಕಾರಣಕ್ಕೂ ಸಿಜೆಪಿ ಹಿಂದೆ ಸರಿಯುವುದಿಲ್ಲ ಅಥವಾ ಬೆದರಿಕೆಗೆ ಮಣಿಯುವುದಿಲ್ಲ. ಅಕ್ಟೋಬರ್ 10 ಈ ಸರ್ವಾಧಿಕಾರದ ಅಂತ್ಯದ ಆರಂಭವಾಗಿ ಇತಿಹಾಸದಲ್ಲಿ ದಾಖಲಾಗಲಿದೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಇಲ್ಲಿದೆ ದೀಪ್ಕೆ ಪೋಸ್ಟ್:
Heading back to my village to be with my family during this moment of grief. Saurav and Ashu will address a press conference shortly in Delhi. The CJP will neither back down nor be intimidated. October 10 will go down as the beginning of the end of this dictatorship.
— Abhijeet Dipke (@abhijeet_dipke) October 11, 2026
ಸಿಜೆಪಿ ನಾಯಕರ ಬಿಡುಗಡೆ
ದೀಪ್ಕೆ, ದಾಸ್ ಮತ್ತು ರಂಕಾ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ ನಂತರ ಭಾನುವಾರ ಬಿಡುಗಡೆ ಮಾಡಲಾಯಿತು. ಜಂತರ್ ಮಂತರ್‌ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಗೆ ಮುಂಚಿತವಾಗಿ ಶನಿವಾರ (ಅ. 10) ಮೂವರು ನಾಯಕರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ದೆಹಲಿಯಲ್ಲಿ ಪ್ರತಿಭಟನಾಕಾರರ ಬಂಧನಗಳ ಕುರಿತು ವಿಶ್ವಸಂಸ್ಥೆ ಹೇಳಿಕೆಗೆ ಭಾರತ ಖಂಡನೆ
ಒಂದು ವರ್ಷದವರೆಗೆ ಶಾಂತಿಯನ್ನು ಉಲ್ಲಂಘಿಸಬಾರದು ಎಂಬ ಷರತ್ತಿನ ಮೇಲೆ ಮೂವರು ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಭಾರತಕ್ಕೆ ಮುಜುಗರ ತಂದಿದ್ದಾರೆ. ಈ ದೇಶವು ಇದಕ್ಕಿಂತ ದೊಡ್ಡ ಹೇಡಿ ಮತ್ತು ಗೂಂಡಾಗಿರಿಯನ್ನು ಎಂದಿಗೂ ನೋಡಿಲ್ಲ ಎಂದು ಬಿಡುಗಡೆಯಾದ ನಂತರ ತಮ್ಮ ಮೊದಲ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದೀಪ್ಕೆ ಬರೆದಿದ್ದಾರೆ.
ಶನಿವಾರ ದೆಹಲಿಯಾದ್ಯಂತ ದೊಡ್ಡ ಪ್ರಮಾಣದ ಭದ್ರತಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು. 7,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಯಿತು. ಈ ಮೂಲಕ ಅವರು ಜಂತರ್ ಮಂತರ್ ತಲುಪುವುದನ್ನು ತಡೆಯಲಾಯಿತು.
ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನ ಗುರುಗ್ರಾಮ ಪೊಲೀಸರು ಬಂಧಿಸಿದ್ದ ಯುಟ್ಯೂಬರ್ ಧ್ರುವ್ ರಾಠಿ ಅವರನ್ನು ಭಾನುವಾರ (ಅ. 11) ಬೆಳಗಿನ ಜಾವ 3 ಗಂಟೆಗೆ ಬಿಡುಗಡೆ ಮಾಡಲಾಯಿತು. ಇನ್ನು ಶಾಂತಿಯುತ ಸಭೆಗಳಲ್ಲಿ ಭಾಗವಹಿಸುವ ಜನರನ್ನು ಕಾನೂನುಬಾಹಿರವಾಗಿ ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳ ಮೇಲೆ ಸಂಪೂರ್ಣ ನಿಷೇಧ ಹೇರಿದ್ದರ ವಿರುದ್ಧದ ತನ್ನ ಹಿಂದಿನ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ನೀಡಿದೆ.