ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಹಮದಾಬಾದ್ ವಿಮಾನ ದುರಂತಕ್ಕೆ ಒಂದು ವರ್ಷ: ಪ್ರಯಾಣಿಕರಲ್ಲಿ ಇನ್ನೂ ಮಾಸಿಲ್ಲ ನೆನಪು

ಅಹಮದಾಬಾದ್ ಏರ್ ಇಂಡಿಯಾ ಫ್ಲೈಟ್ 171 ದುರಂತಕ್ಕೆ ಒಂದು ವರ್ಷವಾದರೂ ಪ್ರಯಾಣಿಕರ ಮನಸ್ಸಿನಲ್ಲಿ ಭಯ ಇನ್ನೂ ಉಳಿದಿದೆ. ಕೆಲವರು ವಿಮಾನ ಪ್ರಯಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿ ವಿಮಾನಯಾನವೇ ಇನ್ನೂ ಅತ್ಯಂತ ಸುರಕ್ಷಿತ ಸಾರಿಗೆ ವಿಧಾನ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಮಾನಯಾನ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಗಾಂಧಿನಗರ: 2025ರ ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಫ್ಲೈಟ್ 171 (Air India Flight 171) ಬೋಯಿಂಗ್ 787-8 ಡ್ರೀಮ್‌ಲೈನರ್ (Boeing 787-8 Dreamliner) ಟೇಕ್‌ಆಫ್ ಆದ ಕೇವಲ 32 ಸೆಕೆಂಡುಗಳಲ್ಲೇ ಪತನಗೊಂಡು ಭೀಕರ ದುರಂತಕ್ಕೆ ಕಾರಣವಾಗಿತ್ತು. ವಿಮಾನದಲ್ಲಿದ್ದ 242 ಮಂದಿಯಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರೂ ಹಾಗೂ ನೆಲದಲ್ಲಿದ್ದ 19 ಮಂದಿ ಸಾವನ್ನಪ್ಪಿದ್ದರು (Fatalities). ದುರಂತ ಸಂಭವಿಸಿ ಒಂದು ವರ್ಷ ಕಳೆದರೂ ಅದರ ನೆನಪು ಜನರ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿದಂತೆಯೇ ಉಳಿದಿದೆ.

ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅನು ಚಿಕ್ಕಾರಾ, "ವಿಮಾನದಲ್ಲಿ ಅಲ್ಪ ಪ್ರಮಾಣದ ಅಲುಗಾಟವಾದರೂ ಆತಂಕ ಹೆಚ್ಚಾಗುತ್ತದೆ. ಈಗ ನನ್ನ ಮಗುವಿನ ಸುರಕ್ಷತೆಯೇ ಮೊದಲ ಆದ್ಯತೆ. ಆದರೆ ಅನಿವಾರ್ಯವಾದ ಕಾರಣಗಳಿಂದ ಮಾತ್ರ ವಿಮಾನ ಪ್ರಯಾಣ ಮಾಡುತ್ತೇನೆ" ಎಂದು ಹೇಳಿದರು. ಜೈಪುರದ ವೈರೆಶ್ ಶರ್ಮಾ ಮತ್ತು ತನಿಶ್ಕಾ ಶರ್ಮಾ ದಂಪತಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ ಅನುಭವ ಹಂಚಿಕೊಂಡರು. "ಅಹಮದಾಬಾದ್ ದುರಂತದ ಬಳಿಕ ನಮ್ಮ ಪ್ರಯಾಣ ಯೋಜನೆಗಳನ್ನು ಮುಂದೂಡಿದ್ದೆವು. ಈಗಲೂ ಬಸ್ ಮತ್ತು ರೈಲು ಪ್ರಯಾಣವನ್ನೇ ಹೆಚ್ಚು ಸುರಕ್ಷಿತವೆಂದು ಭಾವಿಸುತ್ತೇವೆ" ಎಂದು ಅವರು ಹೇಳಿದರು.

"ರಾಜಸ್ಥಾನದಿಂದ ತಮಿಳುನಾಡಿಗೆ ನಮ್ಮ ತಂದೆ-ತಾಯಿಯನ್ನು ರೈಲಿನಲ್ಲೇ ಕಳುಹಿಸುತ್ತೇವೆ. ಹೆಚ್ಚು ಸಮಯ ತೆಗೆದುಕೊಂಡರೂ ಸುರಕ್ಷಿತವಾಗಿ ತಲುಪುವುದು ಮುಖ್ಯ" ಎಂದು ವೈರೆಶ್ ಶರ್ಮಾ ತಿಳಿಸಿದರು. ಇನ್ನೊಂದೆಡೆ, ದೆಹಲಿಯ ಮಾರ್ಕೆಟಿಂಗ್ ಮ್ಯಾನೇಜರ್ ಗುರ್ವೀರ್ ಸಿಂಗ್ ವಿಮಾನಯಾನದ ಮೇಲಿನ ವಿಶ್ವಾಸವನ್ನು ವ್ಯಕ್ತಪಡಿಸಿದರು. "ವಿಮಾನ ಪ್ರಯಾಣವೇ ಅತ್ಯಂತ ಅನುಕೂಲಕರ. ನಾನು ಯಾವಾಗಲೂ ವಿಮಾನವನ್ನೇ ಆಯ್ಕೆ ಮಾಡುತ್ತೇನೆ. ಆದರೆ ಬುಕ್ಕಿಂಗ್ ಮಾಡುವ ಮೊದಲು ವಿಮಾನದ ಮಾದರಿಯನ್ನು ಪರಿಶೀಲಿಸುತ್ತೇನೆ" ಎಂದರು.

ಬೆಂಗಳೂರಿನ ವೃತ್ತಿಪರ ಶ್ರೇಶ್ ಮಾಧ್ವಾಲ್, "ವಿಮಾನಯಾನವು ಕೇವಲ ತಂತ್ರಜ್ಞಾನ ಮತ್ತು ನಿಯಮಗಳ ಮೇಲೆ ಮಾತ್ರ ನಡೆಯುವುದಿಲ್ಲ. ಅದು ನಂಬಿಕೆಯ ಮೇಲೆಯೂ ನಿಂತಿದೆ. ಆ ನಂಬಿಕೆಯನ್ನು ಕಟ್ಟಲು ವರ್ಷಗಳು ಬೇಕು, ಆದರೆ ಅದು ಕೆಲವೇ ದಿನಗಳಲ್ಲಿ ಕುಸಿಯಬಹುದು. ಅದನ್ನು ಮರುಸ್ಥಾಪಿಸಲು ಪ್ರತಿಯೊಂದು ಸುರಕ್ಷಿತ ಹಾರಾಟವೂ ಮುಖ್ಯ" ಎಂದು ಅಭಿಪ್ರಾಯಪಟ್ಟರು.

ಲಖನೌ-ದೆಹಲಿ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಮೇಲೆ ಬಾಂಬ್ ಬೆದರಿಕೆ ಸಂದೇಶ; ವಿಮಾನ ಹಾರಾಟ ಸ್ಥಗಿತ

ನಂಬಿಯಾರ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಆಯುಷ್ ನಂಬಿಯಾರ್, "ವಿಮಾನಯಾನ ಸಂಸ್ಥೆಗಳು ಮತ್ತು ಡಿಜಿಸಿಎ ಪಾರದರ್ಶಕತೆಯನ್ನು ಸುರಕ್ಷತಾ ಸಾಧನವಾಗಿ ಪರಿಗಣಿಸಬೇಕು. ಪ್ರಯಾಣಿಕರಿಗೆ ವಿಮಾನಗಳ ನಿರ್ವಹಣೆ ಹಾಗೂ ಸುರಕ್ಷತಾ ಮಾಹಿತಿಯ ಕುರಿತು ಹೆಚ್ಚಿನ ಸ್ಪಷ್ಟತೆ ನೀಡಬೇಕು" ಎಂದು ಆಗ್ರಹಿಸಿದರು.

ಆದರೆ ವಿಮಾನಯಾನ ಕ್ಷೇತ್ರದ ಸಿಬ್ಬಂದಿ ಮತ್ತು ಪೈಲಟ್‌ಗಳು ಇನ್ನೂ ವಿಮಾನ ಪ್ರಯಾಣವೇ ಅತ್ಯಂತ ಸುರಕ್ಷಿತ ಸಾರಿಗೆ ವಿಧಾನ ಎಂದು ನಂಬಿದ್ದಾರೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಪೈಲಟ್ ಒಬ್ಬರು, "ಇಂತಹ ದುರಂತಗಳು ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡುತ್ತವೆ. ಆದರೆ ಅಂಕಿ-ಅಂಶಗಳ ಪ್ರಕಾರ ವಿಮಾನ ಪ್ರಯಾಣವೇ ಇನ್ನೂ ಅತ್ಯಂತ ಸುರಕ್ಷಿತವಾಗಿದೆ. ಪ್ರತಿಯೊಬ್ಬ ಪೈಲಟ್ ಕಠಿಣ ಸುರಕ್ಷತಾ ಮಾನದಂಡಗಳ ಅಡಿಯಲ್ಲಿ ತರಬೇತಿ ಪಡೆಯುತ್ತಾನೆ ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ಅವರ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ" ಎಂದು ಹೇಳಿದರು.

ಪ್ರಮುಖ ವಿಮಾನಯಾನ ಸಂಸ್ಥೆಯೊಬ್ಬ ವಿಮಾನ ಪರಿಚಾರಿಕೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. "ದುರಂತದ ನಂತರದ ಕೆಲವು ದಿನಗಳಲ್ಲಿ ಎಲ್ಲರೂ ಹೆಚ್ಚು ಎಚ್ಚರಿಕೆಯಿಂದಿದ್ದರು. ಆದರೆ ದಿನಕ್ಕೆ ನಾಲ್ಕು ವಿಮಾನಗಳವರೆಗೆ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಮತ್ತೆ ಸಾಮಾನ್ಯ ಪರಿಸ್ಥಿತಿ ನಿರ್ಮಾಣವಾಯಿತು" ಎಂದು ಅವರು ಹೇಳಿದರು.

ಒಟ್ಟಾರೆ, ಅಹಮದಾಬಾದ್ ವಿಮಾನ ದುರಂತವು ಪ್ರಯಾಣಿಕರ ಮನಸ್ಸಿನಲ್ಲಿ ಭಯ ಮತ್ತು ಪ್ರಶ್ನೆಗಳನ್ನು ಮೂಡಿಸಿದ್ದರೂ, ವಿಮಾನಯಾನ ಕ್ಷೇತ್ರದ ಮೇಲಿನ ವಿಶ್ವಾಸವನ್ನು ಪುನಃ ಕಟ್ಟುವ ಪ್ರಯತ್ನಗಳು ಮುಂದುವರಿದಿವೆ.