ಗಾಂಧಿನಗರ: 2008ರ ಅಹಮದಾಬಾದ್ ಸರಣಿ ಸ್ಪೋಟದ ( Ahmedabad serial blasts) ವಿಶೇಷ ನ್ಯಾಯಾಲಯದ ತೀರ್ಪನ್ನು ಗುಜರಾತ್ ಹೈಕೋರ್ಟ್ (Gujarat High Court) ಎತ್ತಿಹಿಡಿದಿದೆ. ಪ್ರಕರಣದ 38 ಅಪರಾಧಿಗಳಿಗೆ ಮರಣದಂಡನೆಯಾಗಿದ್ದು, 11 ಅಪರಾಧಿಗಳ ಜೀವಾವಧಿ ಶಿಕ್ಷೆ ಮತ್ತು ಈ ಸರಣಿ ಸ್ಪೋಟದಲ್ಲಿ ಮೃತ ಕುಟುಂಬಗಳಿಗೆ 10 ರೂ. ಲಕ್ಷ ಮತ್ತು ಗಾಯಗೊಂಡವರಿಗೆ 5 ರೂ. ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ. ಶಿಕ್ಷೆ ಮತ್ತು ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಎಲ್ಲಾ ಮೇಲ್ಮನವಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜುಲೈ 26, 2008 ರಂದು ಅಹಮದಾಬಾದ್ ನಗರದ 21 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟವಾಗಿತ್ತು. ಈ ಸ್ಫೋಟದಲ್ಲಿ ಒಟ್ಟು 56 ಜನರು ಸಾವನ್ನಪ್ಪಿ 250 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದವು. ಈ ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದ್ದೀನ್ ಹೊತ್ತುಕೊಂಡಿತ್ತು. ಜುಲೈ 26, 2008 ರಂದು ಸಂಜೆ 6:30 ರಿಂದ ರಾತ್ರಿ 8:15 ರ ನಡುವೆ ಅಹಮದಾಬಾದ್‌ನ 20 ಸ್ಥಳಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಇದಾದ ಎರಡು ದಿನಗಳ ನಂತರ ಸೂರತ್ ನಗರದಲ್ಲೂ ಜೀವಂತ ಬಾಂಬುಗಳು ಪತ್ತೆಯಾಗಿದ್ದವು. 2002ರಲ್ಲಿ ನಡೆದಿದ್ದ ಗೋದ್ರಾ ನರಮೇಧಕ್ಕೆ ಪ್ರತಿಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಗಳು ಕಳುಹಿಸಿದ್ದ ಇ-ಮೇಲ್‌ಗಳಲ್ಲಿ ಹೇಳಲಾಗಿದೆ ಎಂದು ವರದಿಯಾಗಿತ್ತು.
ಅಹಮದಾಬಾದ್‌ನಲ್ಲಿ ದಾಖಲಾಗಿದ್ದ 20 ಮತ್ತು ಸೂರತ್‌ನಲ್ಲಿ ದಾಖಲಾಗಿದ್ದ 15 ಸೇರಿದಂತೆ ಒಟ್ಟು 35 ಪ್ರತ್ಯೇಕ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಲಾಗಿತ್ತು. . ಈ ದೀರ್ಘಾವಧಿಯ ವಿಚಾರಣೆಯಲ್ಲಿ 9 ಬೇರೆ ಬೇರೆ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಬರೋಬ್ಬರಿ 1,163 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ 26 ಪ್ರಮುಖ ಸಾಕ್ಷಿಗಳ ಸುರಕ್ಷತೆಯ ದೃಷ್ಟಿಯಿಂದ ಅವರ ಗುರುತನ್ನು ಗೌಪ್ಯವಾಗಿಡಲಾಗಿತ್ತು.
2022ರ ಫೆಬ್ರವರಿಯಲ್ಲಿ ವಿಶೇಷ ನ್ಯಾಯಾಲಯವು 49 ಜನರನ್ನು ಅಪರಾಧಿಗಳು ಎಂದು ಘೋಷಿಸಿತ್ತು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಮುಬೀನ್ ಶೇಖ್ ಮತ್ತು ಮನ್ಸೂರ್ ಪೀರ್ಭಾಯ್ ಸೇರಿದಂತೆ 28 ಜನರನ್ನು ಖುಲಾಸೆಗೊಳಿಸಿತ್ತು. ಶಿಕ್ಷೆಗೊಳಗಾದವರಲ್ಲಿ ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ನ ಮಾಜಿ ನಾಯಕ ಸಫ್ದಾರ್ ನಾಗೋರಿ ಮತ್ತು ಗುಜರಾತ್, ಮಧ್ಯಪ್ರದೇಶ, ಕೇರಳ, ಉತ್ತರ ಪ್ರದೇಶ ಸೇರಿದಂತೆ 11 ರಾಜ್ಯದವರು ಸೇರಿದ್ದಾರೆ ಎಂದು ತಿಳಿದು ಬಂದಿತ್ತು.
ವಿಚಾರಣಾ ನ್ಯಾಯಾಲಯವು ಅವರನ್ನು ಐಪಿಸಿ ಆರೋಪಗಳು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ), ಸ್ಫೋಟಕ ವಸ್ತು ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆಯಡಿಯಲ್ಲಿ ದೋಷಿಗಳೆಂದು ಘೋಷಿಸಿತ್ತು. ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಆ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದೆ. ನ್ಯಾಯಮೂರ್ತಿಗಳಾದ ಎ.ವೈ. ಕೊಗ್ಜೆ ಮತ್ತು ಸಮೀರ್ ಡೇವ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆ.