ನೌಗಾಂ ಪೊಲೀಸ್ ಠಾಣೆಯಲ್ಲಿ ಸ್ಫೋಟ ಸಂಭವಿಸಿದ್ದು ಹೇಗೆ? ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡ ಸ್ಫೋಟಕ ಶ್ರೀನಗರಕ್ಕೆ ಸಾಗಿಸಿದ್ದೇಕೆ?
Nowgam Blast: ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ ವೇಳೆ ಜಪ್ತಿ ಮಾಡಿ ಸಂಗ್ರಹಿಸಿ ಇಟ್ಟಿದ್ದ ಸ್ಫೋಟಕಗಳ ಪರಿಶೀಲನೆ ವೇಳೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ನೌಗಾಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ (ನವೆಂಬರ್ 14) ತಡರಾತ್ರಿ ಅವು ಸಿಡಿದು 9 ಮಂದಿ ಬಲಿಯಾಗಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯವಲ್ಲ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಜಮ್ಮು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ನೌಗಾಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಸ್ಫೋಟ ಸಂಭವಿಸಿದೆ. -
ಶ್ರೀನಗರ, ನ. 15: ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 12 ಮಂದಿ ಬಲಿಯಾಗಿರುವ ಘಟನೆಯ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ. ಅದಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಭೀಕರ ಸ್ಫೋಟ ನಡೆದಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ ವೇಳೆ ಜಪ್ತಿ ಮಾಡಿ ಸಂಗ್ರಹಿಸಿ ಇಟ್ಟಿದ್ದ ಸ್ಫೋಟಕಗಳ ಪರಿಶೀಲನೆ ವೇಳೆ ಶ್ರೀನಗರದ ಹೊರವಲಯದಲ್ಲಿರುವ ನೌಗಾಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ (ನವೆಂಬರ್ 14) ತಡರಾತ್ರಿ ಅವು ಸಿಡಿದು ದುರಂತ ಸಂಭವಿಸಿದೆ (Nowgam Blast). ಈ ವೇಳೆ ಪೊಲೀಸ್ ಸಿಬ್ಬಂದಿ, ಫೋಟೊಗ್ರಾಫರ್ ಸೇರಿ 9 ಮಂದಿ ಬಲಿಯಾಗಿದ್ದಾರೆ. ಹಾಗಾದರೆ ಹರಿಯಾಣದ ಫರಿದಾಬಾದ್‌ನಿಂದ ವಶಪಡಿಸಿಕೊಳ್ಳಲಾದ ಸ್ಫೋಟಕಗಳನ್ನು ಯಾಕೆ ಶ್ರೀನಗರಕ್ಕೆ ಕೊಂಡೊಯ್ಯಲಾಯಿತು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೃತರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ತಂಡದ ಸಿಬ್ಬಂದಿ, ಎಫ್‌ಎಸ್‌ಎಲ್ ತಂಡದ ಮೂವರು ಸದಸ್ಯರು, ಇಬ್ಬರು ಫೋಟೊಗ್ರಾಫರ್‌ಗಳು, ಮ್ಯಾಜಿಸ್ಟ್ರೇಟ್ ತಂಡದ ಭಾಗವಾಗಿದ್ದ ಇಬ್ಬರು ಕಂದಾಯ ಅಧಿಕಾರಿಗಳು ಸೇರಿದ್ದಾರೆ.
ನೌಗಾಂ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟದ ದೃಶ್ಯ:
🚨Can you IMAGINE?
— Mohit Chauhan (@mohitlaws) November 15, 2025
Explosives seized from Faridabad (including ammonium nitrate) were brought to the Nowgam Police Station in Srinagar for examination by police and forensic experts, and they exploded unexpectedly.
The blast was so powerful that it killed at least 13 police… pic.twitter.com/URdsNFPTbT
ಶ್ರೀನಗರಕ್ಕೆ ಸಾಗಿಸಿದ್ದೇಕೆ?
ʼʼಫರಿದಾಬಾದ್‌ನಿಂದ ವಶಪಡಿಸಿಕೊಂಡ ಸ್ಫೋಟಕಗಳನ್ನು ವಿಧಿವಿಜ್ಞಾನ ತಂಡದ ತಜ್ಞರು ಪರಿಶೀಲಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆʼʼ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ನಳಿನ್ ಪ್ರಭಾತ್ ತಿಳಿಸಿದ್ದಾರೆ. ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಮೇಲೆ ನಡೆದ ದಾಳಿಗಳ ವೇಳೆ ಭದ್ರತಾ ಪಡೆಗಳು ಸಂಗ್ರಹಿಸಿದ 2,900 ಕಿಲೋಗ್ರಾಂಗಳಷ್ಟು ತೂಕದ ಸ್ಫೋಟಕ ಬ್ಲಾಸ್ ಆಗಿದ್ದು, ಇದು ಉದ್ದೇಶ ಪೂರ್ವಕ ಕೃತ್ಯವಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.
ಅಕ್ಟೋಬರ್ 19ರಂದು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಬೆಂಬಲ ಸೂಚಿಸಿ ಶ್ರೀನಗರದಲ್ಲಿ ಪೋಸ್ಟರ್ ಅಳವಡಿಸಿರುವ ಪ್ರಕರಣಕ್ಕೆ ಸಂಬಂಧಿಸಿ ನೌಗಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಭಯೋತ್ಪಾದಕರ ಸಂಚು ಬಯಲಾಗಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್‌ನಲ್ಲಿ ಪರಿಶೀಲನೆ ನಡೆಸಿ 3,000 ಕೆಜಿಗಳಷ್ಟು ಅಧಿಕ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಅಲ್ ಫಲಾಹ್ ವಿಶ್ವವಿದ್ಯಾನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಈ ಕೃತ್ಯದ ಹಿಂದೆ ಇರುವುದು ತನಿಖೆ ವೇಳೆ ಬಯಲಾಗಿದ್ದು, ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Kashmir Blast: ಜಮ್ಮು ಕಾಶ್ಮೀರದ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ, 7 ಜನ ಸಾವು
ಹೀಗೆ ಫರಿದಾಬಾದ್‌ನಲ್ಲಿ ವಶಪಡಿಸಿಕೊಳ್ಳಲಾದ ಅಮೋನಿಯಂ ನೈಟ್ರೇಟ್ ಸೇರಿದಂತೆ ಸ್ಫೋಟಕಗಳನ್ನು ನೌಗಾಂ ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿತ್ತು. ತಜ್ಞರ ಪ್ರಕಾರ, ಇದು ಮಾನವರ ಲೋಪದಿಂದ ಆದ ಸ್ಫೋಟವಲ್ಲ. ಬದಲಿಗೆ, ತಾಪಮಾನ, ರಾಸಾಯನಿಕ ಸಂಯೋಜನೆ ಮತ್ತು ಕೆಲವು ವಿಶೇಷ ಅಂಶಗಳಿಗೆ ಸ್ಫೋಟಕಗಳು ಒಡ್ಡಿಕೊಂಡಾಗ ಸ್ಫೋಟ ಸಂಭವಿಸಿದೆ. ಈ ಆಯಾಮದ ಜತೆಗೆ ಸ್ಫೋಟಕ್ಕೆ ಟೈಮರ್ ಬಳಸಲಾಗಿದೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಅಲ್ ಫಲಾಹ್ ವಿವಿ ವಿರುದ್ಧ ಎಫ್‌ಐಆರ್
ದೆಹಲಿ ಪೊಲೀಸ್ ಅಪರಾಧ ವಿಭಾಗವು ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ ವಿರುದ್ಧ 2 ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದೆ. ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಬಳಿಕ ಈ ಶಿಕ್ಷಣ ಸಂಸ್ಥೆ ವಿವಾದದ ಕೇಂದ್ರಬಿಂದು ಎನಿಸಿಕೊಂಡಿದೆ. ಭಾರತೀಯ ವಿಶ್ವವಿದ್ಯಾಲಯಗಳ ಸಂಘ (AIU) ಈಗಾಗಲೇ ಅದರ ಸದಸ್ಯತ್ವವನ್ನು ರದ್ದುಗೊಳಿಸಿದೆ. ವೈಟ್ ಕಾಲರ್ ಟೆರರಿಸಂಗೆ ಸಂಬಂಧಿಸಿ ಈಗಾಗಲೇ ಬಂಧಿಸಲ್ಪಟ್ಟ ಡಾ. ಮುಝಮ್ಮಿಲ್ ಶಕೀಲ್, ಡಾ. ಶಹೀನ್ ಶಾಹಿದ್, ಆತ್ಮಹತ್ಯ ಬಾಂಬರ್ ಡಾ. ಉಮರ್ ಮತ್ತಿತರರು ಇದೇ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು.