Purvesh Duragkar: ಸುಖೋಯ್ ಪತನ; ದುರಂತ ಅಂತ್ಯ ಕಂಡ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಫ್ಲೈಟ್ ಲೆಫ್ಟಿನೆಂಟ್
Sukhoi Su-30 MKI: ಗುರುವಾರ (ಮಾರ್ಚ್ 5) ಅಸ್ಸಾಂನಲ್ಲಿ ಪತನವಾದ ಭಾರತೀಯ ವಾಯುಪಡೆಯ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನದಲ್ಲಿದ್ದ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಕಳೆದ ವರ್ಷ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಭಾಗವಾಗಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಸುಖೋಯ್ ಸು-30 ಎಂಕೆಐ ಮತ್ತು ಪೂರ್ವೇಶ್ ದುರಾಗ್ಕರ್ (ಸಂಗ್ರಹ ಚಿತ್ರ) -
ದೆಹಲಿ, ಮಾ. 6: ಗುರುವಾರ (ಮಾರ್ಚ್ 5) ಅಸ್ಸಾಂನಲ್ಲಿ ಪತನವಾದ ಭಾರತೀಯ ವಾಯುಪಡೆಯ ಸುಖೋಯ್ ಸು-30 ಎಂಕೆಐ (Sukhoi Su-30 MKI) ಯುದ್ಧ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಾದ ಸ್ಕ್ವಾಡ್ರನ್ ಲೀಡರ್ ಅನುಜ್ (Sqn Ldr Anuj) ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ (Purvesh Duragkar) ದುರಂತ ಅಂತ್ಯ ಕಂಡಿದ್ದು, ದೇಶವೇ ಕಂಬನಿ ಮಿಡಿಯುತ್ತಿದೆ. ಈ ಪೈಕಿ ಮಹಾರಾಷ್ಟ್ರದ ನಾಗ್ಪುರ ಮೂಲದ 28 ವರ್ಷದ ಪೂರ್ವೇಶ್ ದುರಾಗ್ಕರ್ ಕಳೆದ ವರ್ಷ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಭಾಗವಾಗಿದ್ದರು. ವಿಶೇಷ ಎಂದರೆ ಅವರು ಆಪರೇಷನ್ ಸಿಂದೂರ್ ಭಾಗವಾಗಿರುವ ವಿಚಾರ ಕಾರ್ಯಾಚರಣೆ ನಡೆದು 15 ದಿನಗಳವರೆಗೆ ಮನೆಯವರಿಗೆ ಗೊತ್ತೇ ಇರಲಿಲ್ಲ.
ಈ ಬಗ್ಗೆ ಪೂರ್ವೇಶ್ ಅವರ ತಂದೆ ರವೀಂದ್ರ ದುರಾಗ್ಕರ್ ಮಾಹಿತಿ ನೀಡಿದ್ದಾರೆ. ಪೂರ್ವೇಶ್ 10 ದಿನಗಳ ಹಿಂದೆಯಷ್ಟೇ ನಾಗ್ಪುರದ ತಮ್ಮ ಮನೆಗೆ ಭೇಟಿ ನೀಡಿದ್ದರು. ಆತನೊಂದಿಗೆ ಗುರುವಾರ ಮಾತನಾಡಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ರವೀಂದ್ರ ದುರಾಗ್ಕರ್ ಅವರ ಮಾತು:
VIDEO | Sukhoi-30 MKI fighter jet crash: Flight Lieutenant Purvesh Duragkar's father Ravindra Duragkar says, "15 days after Operation Sindoor was paused, did we get to know that he was part of the operation. He did not have his mobile phone with him during that time. We were not… https://t.co/PJSUF33yz1 pic.twitter.com/WY3IT3Yr8f
— Press Trust of India (@PTI_News) March 6, 2026
ರವೀಂದ್ರ ದುರಾಗ್ಕರ್ ಹೇಳಿದ್ದೇನು?
ಸುದ್ದಿಸಂಸ್ಥೆ ಪಿಟಿಐ ಜತೆ ಮಾತನಾಡಿದ ರವೀಂದ್ರ ದುರಾಗ್ಕರ್, ''ಆಪರೇಷನ್ ಸಿಂದೂರ್ ಕಾರ್ಯಾಚರಣೆ ಪೂರ್ಣಗೊಂದ 15 ದಿನಗಳ ಬಳಿಕವಷ್ಟೇ ಪೂರ್ವೇಶ್ ಅದರ ಭಾಗವಾಗಿದ್ದ ಎನ್ನುವುದು ನಮಗೆ ಗೊತ್ತಾದದ್ದು. ಕಾರ್ಯಾಚರಣೆ ವೇಳೆ ಆತ ಮೊಬೈಲ್ ಫೋನ್ ಬಳಸಿರಲಿಲ್ಲ. ಆ ವೇಳೆ ಆತನೊಂದಿಗೆ ನಾವು ಯಾವುದೇ ಸಂಪರ್ಕ ಹೊಂದಿರಲಿಲ್ಲʼʼ ಎಂದು ಸ್ಮರಿಸಿಕೊಂಡಿದ್ದಾರೆ.
ಹೆಮ್ಮೆ ಇದೆ
ʼʼಭಾರತೀಯ ವಾಡುಪಡೆಯ ಭಾಗವಾಗಿದ್ದಕ್ಕೆ ಪೂರ್ವೇಶ್‌ಗೆ ತುಂಬ ಹೆಮ್ಮೆ ಇತ್ತು. ಫೈಟರ್ ಜೆಟ್‌ನ ಹಾರಾಟದ ಅನುಭವವನ್ನು ನಮ್ಮೊಂದಿಗೆ ಆಗಾಗ ಹಂಚಿಕೊಳ್ಳುತ್ತಿದ್ದʼʼ ಎಂದು ರವೀಂದ್ರ ಹೇಳಿದ್ದಾರೆ. ʼʼ4 ವರ್ಷಗಳ ಸೇವೆಯ ಮೂಲಕ ನನ್ನ ಮಗ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾನೆ. ಪ್ರತಿಯೊಬ್ಬರಿಗೂ ಅವನು ಸ್ಫೂರ್ತಿ. ಅವನು ತನ್ನ ಕನಸು ನನಸಾಗಿಸಿಕೊಂಡಿದ್ದಾನೆ. ಅವನಿಗೆ ದೇಶಕ್ಕಾಗಿ ಏನನ್ನಾದರೂ ಸೇವೆ ಸಲ್ಲಿಸಬೇಕು ಎನ್ನುವ ಸಂಕಲ್ಪ ಮೊದಲಿನಿಂದಲೂ ಇತ್ತುʼʼ ಎಂದು ಭಾವುಕರಾಗಿದ್ದಾರೆ.
ನಾಪತ್ತೆಯಾಗಿದ್ದ ಸುಖೋಯ್ ಜೆಟ್ ಅಸ್ಸಾಂನಲ್ಲಿ ಪತನ: ಇಬ್ಬರು ಪೈಲಟ್ ಬಲಿ
ಸುಖೋಯ್ ಯುದ್ಧ ವಿಮಾನಕ್ಕೆ ಆಗಿದ್ದೇನು?
ತರಬೇತಿಯ ಭಾಗವಾಗಿ ಆಕಾಶಕ್ಕೆ ನೆಗೆದ ಸುಖೋಯ್ ಸು-30 ಎಂಕೆಐ ಅಸ್ಸಾಂನಲ್ಲಿ ಗುರುವಾರ ಸಂಜೆ ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ಬಳಿಕ ಪತನವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಅಸ್ಸಾಂನ ಜೋಹಾರ್ಟ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಜೆಟ್ ರಾಡಾರ್ ವ್ಯಾಪ್ತಿಯಿಂದ ಕಣ್ಮರೆಯಾಗಿತ್ತು.
ಜೋಹಾರ್ಟ್ ವಾಯುನೆಲೆಯಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿರುವ ಕರ್ಬಿ ಅಂಗ್ಲಾಂಗ್‌ನ ಗುಡ್ಡಗಾಡು ಪ್ರದೇಶದಲ್ಲಿ ಫೈಟರ್ ಜೆಟ್ ಪತನಗೊಂಡಿದೆ. ʼʼಫೈಟರ್ ಜೆಟ್ ನಾಪತ್ತೆಯಾದ ತಕ್ಷಣವೇ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಜೆಟ್ ಕೊನೆಯ ಬಾರಿಗೆ ಸಂವಹನ ನಡೆಸಿದ್ದು ಸಂಜೆ 7.42ಕ್ಕೆʼʼ ಎಂದು ವಾಯುಪಡೆಯ ಅಧಿಕಾರಿಗಳು ಹೇಳಿದ್ದಾರೆ. ಜೆಟ್ ಪತನಕ್ಕೆ ಕಾರಣವೇನು ಎನ್ನುವುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.