ನವದೆಹಲಿ, ಮೇ 27: ಸುಮಾರು 230 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು (Air India Flight) ತಾಂತ್ರಿಕ ದೋಷದ ಕಾರಣದಿಂದಾಗಿ ಬುಧವಾರ ಬೆಳಗ್ಗೆ ಸುಮಾರು ಎಂಟು ಗಂಟೆಗಳ ಸುದೀರ್ಘ ಹಾರಾಟದ ನಂತರ ಮತ್ತೆ ರಾಷ್ಟ್ರೀಯ ರಾಜಧಾನಿ ದೆಹಲಿಗೆ ಮರಳಿದೆ ಎಂದು ಮೂಲಗಳು ತಿಳಿಸಿವೆ. "ವಿಮಾನವು ಸುರಕ್ಷಿತವಾಗಿ ನವದೆಹಲಿಯಲ್ಲಿ ಭೂಸ್ಪರ್ಶ ಮಾಡಿದ್ದು, ಏರ್ ಇಂಡಿಯಾದ ಸುರಕ್ಷತಾ ಮಾನದಂಡಗಳ ಪ್ರಕಾರ ಈಗ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗುವುದು" ಎಂದು ಏರ್‌ಲೈನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬೋಯಿಂಗ್ 777-300 ಇಆರ್ ಮಾದರಿಯ ಈ ಬೃಹತ್ ವಿಮಾನದಲ್ಲಿ ಸಿಬ್ಬಂದಿ ಜತೆ ಸುಮಾರು 230 ಪ್ರಯಾಣಿಕರಿದ್ದರು ಎಂದು ಮೂಲಗಳು ಖಚಿತಪಡಿಸಿವೆ.
"ಮೇ 27ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ AI173 ವಿಮಾನವು, ನಾಗರಿಕ ವಿಮಾನಯಾನ ನಿಯಮಾವಳಿಗಳು ನಿಗದಿಪಡಿಸಿದ ಸುರಕ್ಷತಾ ಕಾರ್ಯವಿಧಾನಗಳ ಪ್ರಕಾರ ತಾಂತ್ರಿಕ ಸಮಸ್ಯೆಯಿಂದಾಗಿ ದೆಹಲಿಗೆ ಮರಳಿದೆ" ಎಂದು ಸಂಸ್ಥೆ ಹೇಳಿದೆ. ವಿಮಾನ ಹಾರಾಟದ ಲೈವ್ ಮಾಹಿತಿ ನೀಡುವ 'ಫ್ಲೈಟ್‌ರಾಡಾರ್24' ವೆಬ್‌ಸೈಟ್‌ನ ದತ್ತಾಂಶಗಳ ಪ್ರಕಾರ, ವಿಮಾನವು ಒಟ್ಟು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಗಾಳಿಯಲ್ಲೇ ಇತ್ತು ಎಂದು ತಿಳಿದುಬಂದಿದೆ. ವಿಮಾನವು ಹಾರಾಟ ಆರಂಭಿಸಿದ ಮೂರು ಗಂಟೆಗಳ ಬಳಿಕ ಚೀನಾ ವೈಮಾನಿಕ ವಲಯದಲ್ಲಿದ್ದಾಗ ತಾಂತ್ರಿಕ ದೋಷ ಪತ್ತೆಯಾಗಿದ್ದು, ತಕ್ಷಣವೇ ಅದನ್ನು ದೆಹಲಿಯತ್ತ ಹಿಂತಿರುಗಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.
ತಾಂತ್ರಿಕ ದೋಷದಿಂದ ದೆಹಲಿಗೆ ಮರಲಿದ ಏರ್ ಇಂಡಿಯಾ ವಿಮಾನ:
ಸುದೀರ್ಘ ಪ್ರಯಾಣದ ಬಳಿಕವೂ ನಿಗದಿತ ಸ್ಥಳ ತಲುಪಲಾಗದ ಪ್ರಯಾಣಿಕರಿಗೆ ಉಂಟಾದ ತೀವ್ರ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಏರ್ ಇಂಡಿಯಾ, ಅವರನ್ನು ಆದಷ್ಟು ಬೇಗ ಸುರಕ್ಷಿತವಾಗಿ ತಲುಪಿಸಬೇಕಾದ ಸ್ಥಳಕ್ಕೆ ಕಳುಹಿಸಲು ಪರ್ಯಾಯ ವಿಮಾನದ ವ್ಯವಸ್ಥೆಗಳನ್ನು ಮಾಡುತ್ತಿರುವುದಾಗಿ ತಿಳಿಸಿದೆ.
ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಪೂರಕ; ಎಸ್‌ಐಆರ್ ಎತ್ತಿಹಿಡಿದ ಸುಪ್ರೀಂ ಕೋರ್ಟ್
"ಈ ಮಧ್ಯೆ, ನಮ್ಮ ನೆಲದ ಮೇಲಿನ ಸಿಬ್ಬಂದಿ ತಂಡಗಳು ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಉಪಾಹಾರ, ಹೋಟೆಲ್ ವಸತಿ ಅಥವಾ ಟಿಕೆಟ್ ಮರುಕಾಯ್ದಿರಿಸುವಿಕೆ ಸೇರಿದಂತೆ ಎಲ್ಲ ಅಗತ್ಯ ಸಹಾಯವನ್ನು ಒಡನೆ ಒದಗಿಸುತ್ತಿದ್ದಾರೆ" ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.