ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಜನವರಿ 28 ರ ಬುಧವಾರದಂದು ( Ajit Pawar Political Journey) ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದ್ದು, ಪವಾರ್ ಸೇರಿದಂತೆ ಐದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಮಾನವು ಪುಣೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ವಿಮಾನ ಅಪಘಾತ ಸಂಭವಿಸಿದೆ. ವರದಿಯ ಪ್ರಕಾರ, ವಿಮಾನವು ಮುಂಬೈನಿಂದ ಬಾಡಿಗೆಗೆ ಪಡೆಯಲ್ಪಟ್ಟಿದ್ದು, ರನ್‌ವೇ ಬಳಿ ಅಪಘಾತಕ್ಕೀಡಾಗಿದೆ. ಘಟನೆಯ ನಂತರ ಪವಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಅಜಿತ್ ಸಾವು ಅಭಿಮಾನಿಗಳಿಗೆ ಬರಸಿಡಿಲಿನಂತಾಗಿದೆ.
ಮಹಾರಾಷ್ಟ್ರದಲ್ಲಿ ಅಜಿತ್ ಪವರ್ ಹೇಗಿತ್ತು?
1959ರ ಜುಲೈ 22 ರಂದು ಅಹಮದ್ ನಗರ್ ಜಿಲ್ಲೆಯ ದೇವಲಾಲಿ ಪ್ರವರ ಎಂಬಲ್ಲಿ ಅಜಿತ್ ಜನಿಸಿದರು. ಅವರ ತಂದೆ ಅನಂತ್ ರಾವ್ ಪವಾರ್ ಹಾಗೂ ಅವರ ಚಿಕ್ಕಪ್ಪ ಎನ್‌ಸಿಪಿ ಮುಖ್ಯಸ್ಥ ಶರದ್ ಪವರ್ ಅನಂತ್ ರಾವ್ ಅವರು ಚಿತ್ರಕರ್ಮಿ ವಿ ಶಾಂತಾರಾಮ್ ಅವರ ಜೊತೆ ರಾಜ್ ಕಮಲ್ ಸ್ಟುಡಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಂದೆಯ ಅಕಾಲಿಕ ಮರಣದಿಂದ ಕಾಲೇಜು ವ್ಯಾಸಂಗ ತೊರೆದ ಅಜಿತ್ ಅವರು ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು.
1982 ರಲ್ಲಿ ಸಹಕಾರಿ ಕ್ಷೇತ್ರ (ಸಕ್ಕರೆ ಕಾರ್ಖಾನೆ) ಮೂಲಕ ರಾಜಕೀಯ ಪ್ರವೇಶ. 1991 ರಲ್ಲಿ ತಮ್ಮ ಮೊದಲ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರು. ಮೊದಲ ಚುನಾವಣೆಯಲ್ಲಿಯೇ ಜನರ ವಿಶ್ವಾಸವನ್ನು ಗಳಿಸಿದ್ದರು. ಬಳಿಕ ಎನ್‌ಸಿಪಿಯ ಉನ್ನತ ಹುದ್ದೆಗೇರುತ್ತಾರೆ. ಅಲ್ಲಿಂದ ರಾಜಕೀಯ ಯಶಸ್ಸು ಇವರ ಹೆಗಲೇರುತ್ತದೆ. ಕೆಳಹಂತದಿಂದ ಪಕ್ಷ ಸಂಘಟನೆಯನ್ನು ಮಾಡುತ್ತಾರೆ. ಬಾರಾಮತಿ ಕ್ಷೇತ್ರದಿಂದ 8 ಬಾರಿ ಜಯಗಳಿಸಿದ ವಿಶೇಷತೆ ಇವರದು. ಮಹಾರಾಷ್ಟ್ರದಲ್ಲಿ ಆಡಳಿತಾತ್ಮಕ ದಕ್ಷತೆ ಮತ್ತು ರಾಜ್ಯ ನೀತಿಯಲ್ಲಿ, ವಿಶೇಷವಾಗಿ ಹಣಕಾಸು, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಇವರ ಕೊಡುಗೆ ಅಪಾರ.
ಶರದ್ vs ಅಜಿತ್
ಎನ್‌ಸಿಪಿ ಮುಖ್ಯಸ್ಥ ಮತ್ತು ಅನುಭವಿ ರಾಜಕಾರಣಿಯೂ ಆಗಿರುವ ಶರದ್ ಪವಾರ್ ಅವರನ್ನೇ ಎದುರು ಹಾಕಿಕೊಂಡರು. ಸ್ವಂತ ಚಿಕ್ಕಪ್ಪನಿಗೇ ಸವಾಲ್ ಹಾಕಿದ ಅಜಿತ್ ಎನ್‌ಸಿಪಿ ತೊರೆದು ತಮ್ಮದೇ ಪಕ್ಷ ಸ್ಥಾಪಿಸಿದರು. ಮ್ಮ ಚಿಕ್ಕಪ್ಪನ ಮಾತನ್ನು ಮೀರಿ, ಎನ್‌ಸಿಪಿ ಪಕ್ಷವನ್ನೇ ಇಬ್ಭಾಗ ಮಾಡಿ ಬಿಜೆಪಿ ಜೊತೆಗೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಅಜಿತ್ ಪವಾರ್ ಅಲ್ಲಿಂದ ಬಣ ರಾಜಕೀಯ ಶುರುವಾಯಿತು. ಪಕ್ಷದ ಚಿನ್ಹೆಗಾಗಿ ಎರಡೂ ಬಣಗಳ ನಡುವೆ ಕಿತ್ತಾಟ ನಡೆದಿತ್ತು. ಬಳಿಕ ಕೋರ್ಟ್ ಅಜಿತ್‌ಗೆ ಚಿನ್ಹೆ ಬಳಕೆಗೆ ಅವಕಾಶ ನೀಡಿತ್ತು.
ಐದು ಬಾರಿ ಡಿಸಿಎಂ
ಅಜಿತ್ ಪವಾರ್ ಮೊದಲು ನವೆಂಬರ್ 2010 ರಲ್ಲಿ ಉಪಮುಖ್ಯಮಂತ್ರಿಯಾದರು. 2012 ರಿಂದ ಸೆಪ್ಟೆಂಬರ್ 2014ರ ವರೆಗೆ ಮತ್ತೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 2019 ರಲ್ಲಿ, ಎನ್‌ಸಿಪಿ ನಾಯಕ ತನ್ನ ಚಿಕ್ಕಪ್ಪನೊಂದಿಗೆ ಹಿಂತಿರುಗಿ ಉದ್ಧವ್ ಠಾಕ್ರೆ ಅವರ ಮಹಾ ವಿಕಾಸ್ ಅಘಾಡಿ ಒಕ್ಕೂಟದ ನೇತೃತ್ವದಲ್ಲಿ ಉಪಮುಖ್ಯಮಂತ್ರಿಯಾಗಿ ಸರ್ಕಾರವನ್ನು ಮತ್ತೆ ಸೇರಿದರು. ಜುಲೈ 2023 ರಲ್ಲಿ, ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ, ಅಜಿತ್ ಪವಾರ್ ಮತ್ತೊಮ್ಮೆ ತಮ್ಮ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದರು, ಅವರ ಪಕ್ಷದಲ್ಲಿ ಲಂಬವಾದ ವಿಭಜನೆಗೆ ಕಾರಣರಾದರು ಮತ್ತು ಬಿಜೆಪಿ-ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರವನ್ನು ಸೇರಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಎನ್‌ಸಿಪಿಯಿಂದ ದೂರ ಸರಿದ ಅಜಿತ್ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ಮಹಾಯುತಿ ಮೈತ್ರಿಕೂಟದಿಂದ ಸ್ಫರ್ಧಿಸಿ ಮತ್ತೆ ಡಿಸಿಎಂ ಆಗಿದ್ದರು.