ನವದೆಹಲಿ, ಫೆ.7: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿಯಲ್ಲಿ (India–US trade deal) ಘೋಷಿಸಲಾದ ರೂಪುರೇಷೆಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಶ್ಲಾಘಿಸಿದ್ದಾರೆ. ಎರಡು ಮಹಾ ಆರ್ಥಿಕ ಶಕ್ತಿಗಳ ನಡುವಿನ ವ್ಯಾಪಾರ ಒಪ್ಪಂದದಡಿಯಲ್ಲಿ, ಹಲವಾರು ಅಮೆರಿಕ ಉತ್ಪನ್ನಗಳು ಭಾರತದಲ್ಲಿ ಶೂನ್ಯ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಗೋಯಲ್ ತಿಳಿಸಿದರು.
ಆಲ್ಕೋಹಾಲಿಕ್ ಪಾನೀಯಗಳು, ಸೌಂದರ್ಯವರ್ಧಕಗಳು ಮತ್ತು ವೈದ್ಯಕೀಯ ಸಾಧನಗಳು ಸೇರಿದಂತೆ ಹಲವಾರು ಉತ್ಪನ್ನಗಳು ಶೂನ್ಯ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಈ ಉತ್ಪನ್ನಗಳು ಮಾರುಕಟ್ಟೆಗೆ ಬಂದಾಗ ಸ್ಪರ್ಧೆ ಹೆಚ್ಚಾಗುತ್ತದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ದೊರೆಯಲಿದ್ದು, ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತದೆ ಹಾಗೂ ಮಾರುಕಟ್ಟೆಯಲ್ಲಿ ದಕ್ಷತೆ ಹೆಚ್ಚಲಿದೆ ಎಂದು ಗೋಯಲ್ ಅವರು ಹೇಳಿದರು.
ಅಮೆರಿಕದ ವ್ಯಾಪಾರ ಒಪ್ಪಂದ ಬೆಳೆಯುತ್ತಿರುವ ವಿಶ್ವಾಸದ ಪ್ರತಿಬಿಂಬ: ಪ್ರಧಾನಿ ಮೋದಿ
ಇದೇ ವೇಳೆ, ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ ಅಡಿಯಲ್ಲಿ ಕೆಲವು ವಾಹನ ಹಾಗೂ ವಿಮಾನ ಭಾಗಗಳಿಗೆ ಅಮೆರಿಕದಲ್ಲಿ ಭಾರತಕ್ಕೆ ಸುಂಕಮುಕ್ತ (ಡ್ಯೂಟಿ ಫ್ರೀ) ಪ್ರವೇಶ ದೊರೆಯಲಿದೆ ಎಂದು ಪಿಯೂಷ್ ಗೋಯಲ್ ಅವರು ಹೇಳಿದರು.
ಪಟ್ಟಿ ಇಲ್ಲಿದೆ:
- ಪಶುಸಂಗೋಪನೆಯಲ್ಲಿ ಬಳಸುವ ಡಿಸ್ಟಿಲರ್ಸ್ ಡ್ರೈಡ್ ಗ್ರೇನ್ಸ್ ವಿತ್ ಸೊಲ್ಯೂಬಲ್ಸ್ (DDGS)
- ವೈನ್, ಮದ್ಯ ಹಾಗೂ ಇತರ ಆಲ್ಕೊಹಾಲ್ಯುಕ್ತ ಪಾನೀಯಗಳು
- ಕೆಲವು ಕ್ಯಾನ್ಸರ್ ಔಷಧಿಗಳನ್ನು ಒಳಗೊಂಡಂತೆ ಆಯ್ದ ಔಷಧಿಗಳು
- ಕೆಲವು ಸೌಂದರ್ಯವರ್ಧಕ ವಸ್ತುಗಳು
- ಕೆಲವು ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು
- ಕಂಪ್ಯೂಟರ್ ಸಂಬಂಧಿತ ಉತ್ಪನ್ನಗಳು
- ಸೂಕ್ಷ್ಮದರ್ಶಕಗಳಂತಹ ಕೆಲವು ವೈದ್ಯಕೀಯ ಸಾಧನಗಳು.
ದೇಶೀಯ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ವ್ಯಾಪಾರವನ್ನು ಸಮತೋಲನಗೊಳಿಸಲು ಈ ಉತ್ಪನ್ನಗಳಿಗೆ ಕನಿಷ್ಠ ಆಮದು ಬೆಲೆಯನ್ನು ನಿಗದಿಪಡಿಸಲಾಗಿದೆ ಎಂದು ಗೋಯಲ್ ಹೇಳಿದರು.
ಭಾರತದಿಂದ ರಫ್ತು ಮಾಡಲಾಗುವ ವಸ್ತುಗಳಿಗೆ ಶೂನ್ಯ ಸುಂಕ
ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಹಲವು ಉತ್ಪನ್ನಗಳಿಗೆ ಇದೀಗ ಶೂನ್ಯ ಸುಂಕ (Zero Duty) ವಿಧಿಸಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ನಮ್ಮ ರಫ್ತುದಾರರು ಅಮೆರಿಕಕ್ಕೆ ಕಳುಹಿಸುವ ಹಲವು ವಸ್ತುಗಳ ಮೇಲೆ ಇನ್ನುಮುಂದೆ ಶೂನ್ಯ ಸುಂಕ ಅನ್ವಯವಾಗಲಿದೆ. ಉದಾಹರಣೆಗೆ, ರತ್ನ ಮತ್ತು ವಜ್ರಗಳಿಗೆ ಶೂನ್ಯ ಸುಂಕ ವಿಧಿಸಲಾಗುತ್ತದೆ. ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಔಷಧಿ ಉತ್ಪನ್ನಗಳಿಗೂ ಶೂನ್ಯ ಸುಂಕ ಅನ್ವಯವಾಗಲಿದೆ. ಇದೇ ರೀತಿ, ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಅಮೆರಿಕಕ್ಕೆ ರಫ್ತು ಆಗುವ ಸ್ಮಾರ್ಟ್‌ಫೋನ್‌ಗಳಿಗೂ ಶೂನ್ಯ ಸುಂಕ ಮುಂದುವರಿಯಲಿದೆ. ಈ ರೀತಿಯಾಗಿ ಮುಂದಿನ ದಿನಗಳಲ್ಲಿ ಶೂನ್ಯ ಸುಂಕ ಅನ್ವಯವಾಗುವ ಅನೇಕ ವಸ್ತುಗಳಿವೆ ಎಂದು ಗೋಯಲ್ ಹೇಳಿದರು.
ಭಾರತ ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ; ಮೋದಿ ಹೇಳಿದ್ದೇನು? ಯಾರಿಗೆ ಹೆಚ್ಚು ಲಾಭ?
ಕೃಷಿ ಉತ್ಪನ್ನಗಳ ಮೇಲೆ ಅಮೆರಿಕಕ್ಕೆ ಯಾವುದೇ ಆಮದು ಪ್ರಯೋಜನಗಳನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಭಾರತ-ಯುಎಸ್ ಜಂಟಿ ಹೇಳಿಕೆಯ ಕುರಿತು ವಿವರಿಸಿದ ಗೋಯಲ್, ಭಾರತ ಕೃಷಿ ವಲಯದಲ್ಲಿ ಸ್ವಾವಲಂಬಿಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಆಮದು ಪ್ರಯೋಜನಗಳಿಲ್ಲದ ಉತ್ಪನ್ನಗಳ ಪಟ್ಟಿಯಲ್ಲಿ ಮಾಂಸ, ಕೋಳಿ, ಡೈರಿ, ಸೋಯಾಬೀನ್, ಮೆಕ್ಕೆಜೋಳ, ಅಕ್ಕಿ, ಗೋಧಿ, ಧಾನ್ಯಗಳು, ರಾಗಿ, ಹಣ್ಣುಗಳು, ಗ್ರೀನ್ ಟೀ, ಎಣ್ಣೆ ಬೀಜಗಳು, ನೆಲಗಡಲೆ, ಜೇನುತುಪ್ಪ, ಆಲ್ಕೊಹಾಲ್ಯುಕ್ತವಲ್ಲದ ಪಾನೀಯಗಳು, ಎಥೆನಾಲ್ ಮತ್ತು ತಂಬಾಕು ಸೇರಿವೆ ಎಂದು ಹೇಳಿದರು.
ಮಸಾಲೆಗಳು, ಚಹಾ, ಕಾಫಿ ಹಾಗೂ ಅವುಗಳ ಉಪ ಉತ್ಪನ್ನಗಳು, ತೆಂಗು ಮತ್ತು ತೆಂಗಿನೆಣ್ಣೆ, ಸಸ್ಯ ಜನ್ಯ, ಅಡಿಕೆ, ಬ್ರೆಜಿಲ್ ನಟ್, ಗೋಡಂಬಿ, ಚೆಸ್ಟ್ನಟ್ ಸೇರಿದಂತೆ ಅನೇಕ ಹಣ್ಣುಗಳು ಮತ್ತು ತರಕಾರಿಗಳಿಗೆ ಶೂನ್ಯ ಸುಂಕ ವಿಧಿಸಲಾಗಿದೆ.