ಲಖನೌ, ಸೆ. 23: ಪೋಷಕರ ವಿರೋಧದ ನಡುವೆಯೂ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ವಯಸ್ಕ ಮಹಿಳೆಗೆ ಇದೆ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಸ್ಪಷ್ಟಪಡಿಸಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ 26 ವರ್ಷದ ಸೋನಿಕಾ ಚೌಹಾಣ್ ಅವರನ್ನು ತಂದೆಯ ವಶದಿಂದ ಬಿಡುಗಡೆ ಮಾಡಿ, ಪತಿ ಅಕ್ಬರ್ ಖಾನ್ ಜತೆ ವಾಸಿಸಲು ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿ ಸಂದೀಪ್ ಜೈನ್ ಈ ಆದೇಶ ಹೊರಡಿಸಿದ್ದಾರೆ. ಪ್ರಕರಣವು ಹೇಬಿಯಸ್ ಕಾರ್ಪಸ್ ಅರ್ಜಿ ಮೂಲಕ ನ್ಯಾಯಾಲಯದ ಮುಂದೆ ಬಂದಿತ್ತು. 2025ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಸೆಪ್ಟೆಂಬರ್ 8ರ ಆದೇಶದಂತೆ ಸೋನಿಕಾ ಅವರನ್ನು ಮಂಗಳವಾರ (ಸೆಪ್ಟೆಂಬರ್ 22) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯದೊಂದಿಗೆ ನೇರವಾಗಿ ಮಾತನಾಡಿದ ಸೋನಿಕಾ, ''ನಾನು 26 ವರ್ಷದವಳು. ಬಿಎ ಪದವಿ ಪೂರ್ಣಗೊಳಿಸಿದ್ದೇನೆ ಮತ್ತು ಅಕ್ಬರ್ ಖಾನ್ ಅವರನ್ನು ಸ್ವಇಚ್ಛೆಯಿಂದ ವಿವಾಹವಾಗಿದ್ದೇನೆʼʼ ಎಂದು ತಿಳಿಸಿದರು. ತಂದೆ ತಮ್ಮ ವಿವಾಹವನ್ನು ವಿರೋಧಿಸುತ್ತಿರುವುದರಿಂದ ಮನೆಯಲ್ಲಿ ಇರಿಸಲಾಗಿತ್ತು ಎಂದು ಅವರು ಆರೋಪಿಸಿದರು. ಅಕ್ಬರ್ ಖಾನ್ ಕೂಡ ನ್ಯಾಯಾಲಯದ ಮುಂದೆ ಹಾಜರಾಗಿ, ಸೋನಿಕಾ ಅವರೊಂದಿಗೆ ವಾಸಿಸಲು ತಾನು ಸಿದ್ಧನಿರುವುದಾಗಿ ತಿಳಿಸಿದರು.
ವಿಯೆಟ್ನಾಂ ಏರ್‌ಲೈನ್ಸ್ ವಿಮಾನ ಚೆನ್ನೈಯಲ್ಲಿ ತುರ್ತು ಭೂಸ್ಪರ್ಶ
ಇದಕ್ಕೆ ವಿರುದ್ಧವಾಗಿ ಸೋನಿಕಾ ಅವರ ತಂದೆ ಲಕ್ಷ್ಮಣ್ ಸಿಂಗ್ ಚೌಹಾಣ್, ಅಕ್ಬರ್ ಖಾನ್ ತಮ್ಮ ಮಗಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದು, ಆಕೆ ಅವರ ಒತ್ತಡದಲ್ಲಿದ್ದಾಳೆ ಎಂದು ಆರೋಪಿಸಿದರು. ತಮ್ಮ ಮಗಳು ಯಾವುದೇ ಒತ್ತಡವಿಲ್ಲದೆ ತಮ್ಮೊಂದಿಗೇ ವಾಸಿಸುತ್ತಿದ್ದಾಳೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಸಂಬಂಧಿಸಿದ ಎಲ್ಲರ ವಾದ-ವೊವಾದ ಆಲಿಸಿದ ಬಳಿಕ ನ್ಯಾಯಾಲಯವು, ವಯಸ್ಕ ವ್ಯಕ್ತಿಗೆ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ತನ್ನ ಇಚ್ಛೆಯಂತೆ ಜೀವನ ನಡೆಸುವ ಮೂಲಭೂತ ಹಕ್ಕು ಇದೆ ಎಂದು ಹೇಳಿತು. ಇಂತಹ ವೈಯಕ್ತಿಕ ಆಯ್ಕೆಯನ್ನು ಪೋಷಕರು ಅಥವಾ ಕುಟುಂಬದ ಇತರ ಸದಸ್ಯರು ನಿಯಂತ್ರಿಸಲು ಅಥವಾ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಸೋನಿಕಾ ಅಕ್ಬರ್ ಖಾನ್ ಅವರೊಂದಿಗೆ ವಾಸಿಸಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿದ ನ್ಯಾಯಾಲಯವು ದಂಪತಿಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತು. ಕುಟುಂಬದ ಸದಸ್ಯರು ಅವರ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದೂ ಸೂಚಿಸಿತು.
ವರದಿಗಳ ಪ್ರಕಾರ, ಈ ಪ್ರಕರಣದ ಹಿನ್ನೆಲೆ 2025ರ ಮೇಯಲ್ಲಿ ಆರಂಭವಾಗಿದ್ದು, ಸೋನಿಕಾ ಅವರನ್ನು ಅಕ್ಬರ್ ಖಾನ್ ಅಪಹರಿಸಿ ಅಕ್ರಮವಾಗಿ ಬಂಧಿಸಿದ್ದರು ಎಂದು ಆಕೆಯ ಕುಟುಂಬ ದೂರು ನೀಡಿತ್ತು. ನಂತರ ಈ ಪ್ರಕರಣದ ಹಿನ್ನೆಲೆಯಲ್ಲಿ ಅಕ್ಬರ್ ಅವರನ್ನು ಪೊಲೀಸರು ಬಂಧಿಸಿದ್ದರು.