ಎಂಜಿನ್ ವೈಫಲ್ಯ: ವಿಯೆಟ್ನಾಂ ಏರ್‌ಲೈನ್ಸ್ ವಿಮಾನ ಚೆನ್ನೈಯಲ್ಲಿ ತುರ್ತು ಭೂಸ್ಪರ್ಶ
Vietnam Airlines emergency landing: ಸುಮಾರು 143 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಯೆಟ್ನಾಂ ಏರ್‌ಲೈನ್ಸ್‌ನ ಹೋ ಚಿ ಮಿನ್ಹ್-ಕೊಲಂಬೊ ಏರ್‌ಬಸ್ ಎ 320 ವಿಮಾನವು ಮಂಗಳವಾರ (ಸೆಪ್ಟೆಂಬರ್ 22) ತಡರಾತ್ರಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 23: ಸುಮಾರು 143 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಯೆಟ್ನಾಂ ಏರ್‌ಲೈನ್ಸ್ (Vietnam Airlines) ವಿಮಾನದ ಹೋ ಚಿ ಮಿನ್ಹ್-ಕೊಲಂಬೊ ಏರ್‌ಬಸ್ ಎ 320 ವಿಮಾನವು ಮಂಗಳವಾರ (ಸೆಪ್ಟೆಂಬರ್ 22) ತಡರಾತ್ರಿ ತಮಿಳುನಾಡು ರಾಜಧಾನಿ ಚೆನ್ನೈ (Chennai)ಯಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಒಂದು ಎಂಜಿನ್ ವಿಫಲವಾದ ಕಾರಣ ವಿಮಾನ ನಿಲ್ದಾಣದ ಅಧಿಕಾರಿಗಳು ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ವಿಮಾನ ನಿಲ್ದಾಣದ ತುರ್ತು ಯೋಜನೆಯ ಪ್ರಕಾರ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ವಿಮಾನ ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ವಿಮಾನ ಲ್ಯಾಂಡ್ ಆದ ನಂತರ ಅದನ್ನು ಬೇರೆ ವಾಹನದ ಸಹಾಯವಿಲ್ಲದೆ, ತನ್ನದೇ ಎಂಜಿನ್ ಶಕ್ತಿಯಿಂದ ಪಾರ್ಕಿಂಗ್ ಬೇಗೆ ಕೊಂಡೊಯ್ಯಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಇಳಿದ ಬಳಿಕ ವಿಮಾನ ನಿಲ್ದಾಣದಲ್ಲಿ ಘೋಷಿಸಲಾಗಿದ್ದ ಫುಲ್ ಎಮರ್ಜೆನ್ಸಿ ಅನ್ನು ರಾತ್ರಿ 11.35ರ ಸುಮಾರಿಗೆ ಹಿಂಪಡೆಯಲಾಯಿತು. ಇದಾದ ಬಳಿಕ ವಿಮಾನ ನಿಲ್ದಾಣದ ಸಾಮಾನ್ಯ ಕಾರ್ಯಾಚರಣೆಗಳು ಮತ್ತೆ ಆರಂಭವಾದವು.
ವಿಯೆಟ್ನಾಂ ಏರ್‌ಲೈನ್ಸ್ ತನ್ನ ಪ್ರಯಾಣಿಕರನ್ನು ಕೊಲೊಂಬೊಗೆ ಕರೆದೊಯ್ಯಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 28 ಕೋಟಿ ರೂ ಹೈಡ್ರೋ ಗಾಂಜಾ, 1.75 ಕೋಟಿ ರೂ ಚಿನ್ನ ಜಪ್ತಿ!
ರನ್‌ವೇಯಲ್ಲಿ ವಿಮಾನ ಚಲಿಸುತ್ತಿದ್ದರೂ ನಿಂತೇ ಇದ್ದ ಪ್ರಯಾಣಿಕರು
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್‌ವೇ ಮೇಲೆ ಚಲಿಸುತ್ತಿರುವಾಗಲೇ ಪ್ರಯಾಣಿಕರು ಸೀಟುಗಳಿಂದ ಎದ್ದು ಸಾಲಾಗಿ ನಿಂತಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಮಾನಯಾನ ಸಂಸ್ಥೆಯ ಸುರಕ್ಷತಾ ಲೋಪ ಹಾಗೂ ಪ್ರಯಾಣಿಕರ ಅಸಡ್ಡೆ ಕುರಿತು ನೆಟ್ಟಿಗರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX 1236 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮಿತಾವ ದಾಸ್ ಎಂಬುವವರು ಈ ಘಟನೆಯ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಮಾನವು ಲ್ಯಾಂಡಿಂಗ್ ಅಥವಾ ಟೇಕ್-ಆಫ್ ವೇಳೆ ರನ್‌ವೇಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಸೀಟ್‌ಬೆಲ್ಟ್ ಧರಿಸಿ ಕುಳಿತುಕೊಳ್ಳುವ ಬದಲು ಲಗೇಜ್ ತೆಗೆಯಲು ಆತುರಪಟ್ಟು ನಿಂತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ವಿಮಾನದಲ್ಲಿ ಯಾವುದೇ ಮುನ್ಸೂಚನೆ ಅಥವಾ ಅನೌನ್ಸ್‌ಮೆಂಟ್ ಇರಲಿಲ್ಲ. ವಿಮಾನ ದಿಢೀರನೆ ವೇಗವಾಗಿ ಚಲಿಸಲು ಆರಂಭಿಸಿತು ಎಂದು ಅಮಿತಾವ ದಾಸ್ ಆರೋಪಿಸಿದ್ದಾರೆ.