Allahabad High Court: "ಈ ತೀರ್ಪು ಸಮಾಜಕ್ಕೆ ಅಪಾಯಕಾರಿ"; ಅಲಹಾಬಾದ್ ಹೈಕೋರ್ಟ್ ವಿರುದ್ಧ ಕಿಡಿ ಕಾರಿದ ಕೇಂದ್ರ ಸಚಿವೆ
ಅತ್ಯಾಚಾರ ಆರೋಪ ಎಂದರೇನು? ಎಂಬುದರ ಕುರಿತು ಅಲಹಾಬಾದ್ ಹೈಕೋರ್ಟ್ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಮತ್ತು ಇತರರು ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಕೂಡ ಹೈಕೋರ್ಟ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ.

ಕೇಂದ್ರ ಸಚಿವೆ ಅನ್ನಪೂರ್ಣ ದೇವಿ

ನವದೆಹಲಿ: ಅತ್ಯಾಚಾರ ಆರೋಪ ಎಂದರೇನು? ಎಂಬುದರ ಕುರಿತು ಅಲಹಾಬಾದ್ ಹೈಕೋರ್ಟ್ (Allahabad High Court) ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಮತ್ತು ಇತರರು ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ನ್ಯಾಯಾಂಗ ಸುಧಾರಣೆಗಳಿಗೆ ಕರೆ ನೀಡಿದ್ದಾರೆ. ಮಹಿಳೆಯ ಸ್ತನಗಳನ್ನು ಹಿಡಿಯುವುದು ಹಾಗೂ ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ ಎಂದು ಅಲಹಾಬಾದ್‌ನ ಹೈಕೋರ್ಟ್ ಹೇಳಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಶುಕ್ರವಾರ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರು ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಉದ್ದೇಶಿಸಿ ಮಾತನಾಡುತ್ತಾ, "ನಾನು ಈ ನಿರ್ಧಾರವನ್ನು ಬೆಂಬಲಿಸುವುದಿಲ್ಲ, ಮತ್ತು ಸುಪ್ರೀಂ ಕೋರ್ಟ್ ಕೂಡ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಏಕೆಂದರೆ ಇಂತಹ ತೀರ್ಪುಗಳು ನಾಗರಿಕ ಸಮಾಜದ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದ್ದಾರೆ. ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಕೂಡ ಹೈಕೋರ್ಟ್ ಅನ್ನು ತೀವ್ರವಾಗಿ ಟೀಕಿಸಿದರು ಮತ್ತು "ಎದೆ ಹಿಡಿದುಕೊಳ್ಳುವುದು, ಪೈಜಾಮಾದ ದಾರ ಎಳೆಯುವುದು ಇವೆಲ್ಲಾ ಅತ್ಯಾಚಾರದ ಯತ್ನ ಅಲ್ಲ ಎಂಬ ಹೇಳಿಕೆಯು ಸರಿ ಇಲ್ಲ ಇದು ಸಮಾಜಕ್ಕೆ ತುಂಬಾ ಅಪಾಯಕಾರಿ. ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.
ಬಿಜೆಪಿ ಸದಸ್ಯೆ ಸಿಟಿ ಪಲ್ಲವಿ ಮಾತನಾಡಿ ಹೈಕೋರ್ಟ್‌ನ ಈ ಹೇಳಿಕೆ ಅಸಂಬದ್ಧವಾಗಿದೆ. ಆ ಹುಡುಗಿಗೆ ಕೇವಲ 11 ವರ್ಷ. ಅಂತಹ ತೀರ್ಪುಗಳನ್ನು ನೀಡಿದಾಗ ಪೋಕ್ಸೊ ಮತ್ತು ಬಿಎನ್ಎಸ್‌ನ ಕಠಿಣ ಕಾನೂನುಗಳ ಉಪಯೋಗವೇನು? ಅಸ್ವಾಭಾವಿಕ ಲೈಂಗಿಕತೆಯಿಂದಾಗಿ ತನ್ನ ಹೆಂಡತಿಯ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಛತ್ತೀಸ್‌ಗಢ ಹೈಕೋರ್ಟ್ ತೀರ್ಪನ್ನು ನೆನಪಿಸಿಕೊಳ್ಳಿ?" ಎಂದು ಪೋಸ್ಟ್ ಮಾಡಿದ್ದಾರೆ.ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ಕೂಡ ಈ ಪ್ರಕರಣದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, "ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ’ಗೋವನ್ನು ರಾಷ್ಟ್ರೀಯ ಪ್ರಾಣಿ’ - ಅಲಹಾಬಾದ್ ಕೋರ್ಟ್ ಅಭಿಪ್ರಾಯಕ್ಕೆ ಭಾರೀ ಬೆಂಬಲ
ಏನಿದು ವಿವಾದ?
ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕಣವೊಂದರ ತನಿಖೆ ನಡೆಸುತ್ತಿದ್ದ ಹೈಕೋರ್ಟ್ ಸಂತ್ರಸ್ತೆಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ. ಬದಲಿಗೆ ಅದು ತೀವ್ರ ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ಹೇಳಿಕೆ ನೀಡಿತ್ತು. ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ಪವನ್ ಮತ್ತು ಆಕಾಶ್ ಎಂದು ಗುರುತಿಸಲಾದ ಆರೋಪಿಗಳು 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದು, ಆಕೆಯ ಪೈಜಾಮ ದಾರವನ್ನು ಹರಿದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು. ಸಂತ್ರಸ್ತೆ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ದಾರಿಹೋಕರಿಬ್ಬರು ಸರಿಯಾದ ಸಮಯಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದರು. ಪಟಿಯಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 18 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 9/10 (ಗಂಭೀರ ಲೈಂಗಿಕ ದೌರ್ಜನ್ಯ) ಜೊತೆಗೆ ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ದ ಸಣ್ಣ ಆರೋಪದ ಅಡಿಯಲ್ಲಿ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.