ಭೋಪಾಲ್, ಜ. 26: ಆಂಬ್ಯುಲೆನ್ ಡೋರ್ ಜಾಮ್ ಆದ ಕಾರಣ ಹೊರಬರಲಾರದೆ ತೀವ್ರ ಅಸ್ವಸ್ಥರಾಗಿದ್ದ 67 ವರ್ಷದ ರೋಗಿಯೊಬ್ಬರು ಮೃತಪಟ್ಟ ದುರ್ಘಟನೆ ಮಧ್ಯ ಪ್ರದೇಶದ (Madhya Pradesh) ಸತ್ನಾ ಜಿಲ್ಲೆಯಲ್ಲಿ ಸಂಭವಿಸಿದೆ. ಇದು ಜಿಲ್ಲೆಯ ತುರ್ತು ಆರೋಗ್ಯ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳನ್ನು ಬಹಿರಂಗಪಡಿಸಿದೆ. ಮೃತರನ್ನು ರಾಮ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರನ್ನು ರಾಮ ನಗರ ಸಮುದಾಯ ಆರೋಗ್ಯ ಕೇಂದ್ರದಿಂದ (Health Centre) ಸತ್ನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕುಟುಂಬ ಸದಸ್ಯರ ಪ್ರಕಾರ ಶನಿವಾರ (ಜನವರಿ 24) ಬೆಳಗ್ಗೆ ಮನೆಯಲ್ಲಿ ಬಿಸಿ ನೀರು ಕಾಯಿಸಿಕೊಳ್ಳುತ್ತಿದ್ದಾಗ ರಾಮ್ ಪ್ರಸಾದ್ ಕುಸಿದು ಬಿದ್ದರು. ಮೊದಲು ಅವರನ್ನು ರಾಮ ನಗರ ಸಿಎಚ್‌ಸಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ 108 ತುರ್ತು ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಲೂಡೋ ಆಡುವುದರಲ್ಲಿ ಆಸ್ಪತ್ರೆ ಸಿಬ್ಬಂದಿ ಬ್ಯುಸಿ; ಆಟದ ನಂತರವೇ ರೋಗಿಯ ಬಿಪಿ ಚೆಕ್
ಆಂಬ್ಯುಲೆನ್ಸ್ ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಯ ಗೇಟ್ ತಲುಪಿತು. ಆದರೆ ಸ್ವಲ್ಪ ಸಮಯದ ನಂತರ, ವಾಹನದ ಹಿಂಭಾಗದ ಬಾಗಿಲು ಜಾಮ್ ಆಗಿದೆ ಎಂದು ತಿಳಿದು ಬಂತು. ರೋಗಿಯು ಆಂಬ್ಯುಲೆನ್ಸ್ ಒಳಗೆ ಒದ್ದಾಡುತ್ತಿದ್ದರು. ಬಾಗಿಲನ್ನು ತೆಗೆಯಲು ಅಲ್ಲಿದ್ದವರು ಶತ ಪ್ರಯತ್ನ ನಡೆಸಿದ್ದಾರೆ. ಉಪಕರಣಗಳನ್ನು ಬಳಸಿ ಬಾಗಿಲನ್ನು ಬಲವಂತವಾಗಿ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆಂಬ್ಯುಲೆನ್ಸ್ ಚಾಲಕ ಕಿಟಕಿಯ ಮೂಲಕ ವಾಹನದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ದೀರ್ಘಕಾಲದ ಹೋರಾಟದ ನಂತರ, ಕೊನೆಗೂ ಬಾಗಿಲನ್ನು ಬಲವಂತವಾಗಿ ತೆಗೆಯಲಾಯಿತು. ರಾಮ್ ಪ್ರಸಾದ್ ಅವರನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯ ಒಳಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಘಟನೆಯ ನಂತರ, ಜಿಲ್ಲಾ ಆರೋಗ್ಯ ಇಲಾಖೆಯು ರೋಗಿಯು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ. ಸತ್ನಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ. ಮನೋಜ್ ಶುಕ್ಲಾ, ಘಟನೆಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಸಮನ್ವಯ ಅಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಶಿಮ್ಲಾ ಆಸ್ಪತ್ರೆ ಗಲಾಟೆ ಪ್ರಕರಣ; ಪರಸ್ಪರ ಅಪ್ಪಿಕೊಂಡು ಕ್ಷಮೆಯಾಚಿಸಿದ ವೈದ್ಯ-ರೋಗಿ!
ವಿಷಯ ಬೆಳಕಿಗೆ ಬಂದ ನಂತರ, ಜಿಲ್ಲಾ ಸಂಯೋಜಕರಿಗೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಬಳಿಕ ಸಂಬಂಧಪಟ್ಟವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಶುಕ್ಲಾ ಹೇಳಿದರು.
ಈ ಘಟನೆಯು ಸತ್ನಾ ಜಿಲ್ಲೆಯಲ್ಲಿ 108 ಆಂಬ್ಯುಲೆನ್ಸ್‌ಗಳ ಕಳಪೆ ಸ್ಥಿತಿ ಮತ್ತು ನಿರ್ವಹಣೆಯ ವಿಚಾರ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪುನರಾವರ್ತಿತ ಘಟನೆಗಳು ತುರ್ತು ಆರೋಗ್ಯ ಸೇವೆಗಳಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿವೆ.