ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತ್ರಿಪುರ ಯುವಕನಿಗೆ ಜನಾಂಗೀಯ ನಿಂದನೆ: ಕೇಂದ್ರ ಸಚಿವರ ಎಚ್ಚರಿಕೆ ಬಳಿಕ ಕ್ಷಮೆ ಕೋರಿದ ಕಂಟೆಂಟ್ ಕ್ರಿಯೇಟರ್ ಅಮೀರ್‌ ಶೋಕೀನ್‌

Amir Shokeen: ತ್ರಿಪುರದ ಬುಡಕಟ್ಟು ಯುವಕನ ವಿರುದ್ಧ ಜನಾಂಗೀಯ ನಿಂದನೆ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಂಟೆಂಟ್ ಕ್ರಿಯೇಟರ್ ಅಮೀರ್ ಶೋಕೀನ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಆರೋಪಿಗೆ ಶಿಕ್ಷೆಯಾಗಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಎಚ್ಚರಿಕೆ ನೀಡಿದ್ದಾರೆ.

ತ್ರಿಪುರ ಯುವಕನನ್ನು ನಿಂದಿಸಿದ ಅಮೀರ್ ಶೋಕೀನ್

ನವದೆಹಲಿ, ಅ. 22: ತ್ರಿಪುರದ ಬುಡಕಟ್ಟು ಯುವಕನ ವಿರುದ್ಧ ಜನಾಂಗೀಯ ನಿಂದನೆ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಂಟೆಂಟ್ ಕ್ರಿಯೇಟರ್ ಅಮೀರ್ ಶೋಕೀನ್ (Amir Shokeen) ಕೊನೆಗೂ ಕ್ಷಮೆಯಾಚಿಸಿದ್ದಾನೆ. ದೆಹಲಿಯಲ್ಲಿ ಬುಡಕಟ್ಟು ಯುವಕನೊಂದಿಗೆ ಆತ ಸಂವಾದ ನಡೆಸಿದ ವೈರಲ್ ವಿಡಿಯೊ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗೆ ಶಿಕ್ಷೆಯಾಗಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣದ ಕುರಿತು ದೆಹಲಿ ಪೊಲೀಸರು (Delhi Police) ತನಿಖೆ ನಡೆಸುತ್ತಿದ್ದಾರೆ.

ಶೋಕೀನ್ ತ್ರಿಪುರದ ಯುವಕನೊಂದಿಗೆ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ವಿವಾದ ಭುಗಿಲೆದ್ದಿದೆ. ವಿಡಿಯೊದಲ್ಲಿ ಅಮೀರ್ ಶೋಕೀನ್ ಯುವಕನ ರೂಪ ಮತ್ತು ಗುರುತನ್ನು ಗೇಲಿ ಮಾಡಿರುವುದರ ಜತೆಗೆ, ಆತನನ್ನು ಚೈನೀಸ್‌ ಎಂದು ಕರೆದು ಇತರ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ. ಈ ವಿಡಿಯೊ ತ್ರಿಪುರ ಸೇರಿ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಂಟೆಂಟ್ ಕ್ರಿಯೇಟರ್ ಜನಾಂಗೀಯ ತಾರತಮ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾನೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ತ್ರಿಪುರದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಶೋಕೀನ್ ವಿಷಾದ ವ್ಯಕ್ತಪಡಿಸಿದ್ದಾನೆ. ಕ್ಷಮೆಯಾಚಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಯಾರನ್ನೂ ಅವಮಾನಿಸುವ ಉದ್ದೇಶ ತನಗಿಲ್ಲ ಎಂದು ಹೇಳಿದ್ದಾರೆ. ವಿಡಿಯೊವನ್ನು ತಾನೇ ಚಿತ್ರೀಕರಿಸಿದ್ದು, ಅದರಲ್ಲಿರುವ ಯುವಕ ತನಗೆ ಪರಿಚಿತ ಎಂದು ಅವರು ಹೇಳಿದ್ದಾರೆ.

ಕಿರಣ್ ರಿಜಿಜು ಪೋಸ್ಟ್ ಇಲ್ಲಿದೆ:



ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ತನ್ನ ಸ್ನೇಹಿತನ ಕೆಫೆಯಲ್ಲಿ ಈ ಯುವಕ ಈ ಹಿಂದೆ ಕೆಲಸ ಮಾಡುತ್ತಿದ್ದ ಎಂದು ಶೋಕೀನ್ ಹೇಳಿದ್ದಾನೆ. ಅಲ್ಲದೆ, ಈ ಸಂವಾದವನ್ನು ತಮಾಷೆಯ ಕಂಟೆಂಟ್‌ ಸೃಷ್ಟಿಸುವ ಉದ್ದೇಶದಿಂದ ಮಾಡಲಾಗಿತ್ತು ಎಂದು ಸಮರ್ಥಿಸಿದ್ದಾನೆ. ಆದರೆ ಸಂವಾದವನ್ನು ಪೂರ್ವಯೋಜಿತವಾಗಿ ನಡೆಸಲಾಗಿದೆ ಎಂದು ಹೇಳಿಕೊಂಡ ಮಾತ್ರಕ್ಕೆ ಜನಾಂಗೀಯ ನಿಂದನೆಯನ್ನು ಹಾಸ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹಲವರು ವಾದಿಸಿದ್ದಾರೆ.

ರಾಹುಲ್ ಗಾಂಧಿ ಬಂಧನದ ವೇಳೆ ಪ್ರತಿಭಟನಾಕಾರರಿಂದ ದೆಹಲಿ ಪೊಲೀಸರ ಮೇಲೆ ಹಲ್ಲೆ?

ಕಿರಣ್ ರಿಜಿಜು ಖಂಡನೆ

ಈ ವಿವಾದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಆರೋಪಿಯು ತನ್ನ ಕೃತ್ಯಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಮೀರ್‌ನನ್ನು ʼದುಷ್ಟ ವ್ಯಕ್ತಿʼ ಎಂದ ಕರೆದ ಅವರು ಆತನಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಧಿಕೃತ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ದೆಹಲಿ ಪೊಲೀಸರು ಮತ್ತು ತ್ರಿಪುರ ಪೊಲೀಸರು ಆತನಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಇಂತಹ ನಡವಳಿಕೆಯನ್ನು ಸಹಿಸಿಕೊಳ್ಳುವವರನ್ನೂ ರಿಜಿಜು ಟೀಕಿಸಿದ್ದಾರೆ. “ಸಮಾಜದಲ್ಲಿ ಇಂತಹ ಕೆಟ್ಟ ನಡವಳಿಕೆಯನ್ನು ಸಹಿಸಿಕೊಳ್ಳುವವರೂ ದ್ವೇಷ ಹರಡುವುದಕ್ಕೆ ಹೊಣೆಗಾರರಾಗಿದ್ದಾರೆ” ಎಂದು ತಿಳಿಸಿದ್ದಾರೆ.

ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾ ದೆಹಲಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚಿಸಿದ್ದಾರೆ. ಟಿಪ್ರಾ ಮೋಥಾ ಪಕ್ಷದ ಸಂಸ್ಥಾಪಕ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಸೇರಿ ಇತರ ರಾಜಕೀಯ ನಾಯಕರು ಕೂಡ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.