ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಹಲ್ಲೆ; ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

Ujjal Bhuyan: ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ಅತಿಯಾದ ಬಲ ಪ್ರಯೋಗ ಮಾಡಿರುವ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮೇಲೆ ನೇರವಾಗಿ ಹಲ್ಲೆ ನಡೆಸುವುದು ಅತ್ಯಂತ ಬೇಸರದ ಸಂಗತಿ ಎಂದ ಅವರು, ಕಾನೂನು ಪಾಲನೆಯೊಂದಿಗೆ ಮಾನವ ಹಕ್ಕುಗಳನ್ನು ರಕ್ಷಿಸುವುದು ಪೊಲೀಸರ ಕರ್ತವ್ಯ ಎಂದು ಹೇಳಿದ್ದಾರೆ. ‘ಫೇಕ್ ಎನ್‌ಕೌಂಟರ್’ ಪೊಲೀಸ್ ವ್ಯವಸ್ಥೆಯ ಭಾಗವಾಗಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನಾಕಾರರ ಮೇಲಿನ ಪೊಲೀಸ್ ಹಲ್ಲೆಗೆ ನ್ಯಾಯಮೂರ್ತಿ ಕಳವಳ

ಸಾಂದರ್ಭಿಕ ಚಿತ್ರ -

Profile
Sushmitha Jain Sep 5, 2026 8:04 PM

ನವದೆಹಲಿ, ಸೆ. 5: ಇತ್ತೀಚಿನ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿ ಉಜ್ಜಲ್ ಭುಯನ್ (Justice Ujjal Bhuyan) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಪೊಲೀಸ್ ಅಧಿಕಾರಿಗಳೇ ಹಲ್ಲೆ ನಡೆಸುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ. ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರ ‘Policing the Republic’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಭುಯನ್, “ಪೊಲೀಸ್ ಅಧಿಕಾರಿಗಳಿಂದ ನಿರೀಕ್ಷಿಸಲಾಗುವ ನಿಷ್ಪಕ್ಷಪಾತ ಧೋರಣೆ ಕ್ರಮೇಣ ದೂರವಾಗುತ್ತಿರುವಂತೆ ತೋರುತ್ತಿದೆ. ಇದು ಕಳವಳದ ವಿಚಾರ” ಎಂದರು.

ಯುವ ಐಪಿಎಸ್ ಅಧಿಕಾರಿಗಳು ಪ್ರತಿಭಟನಾಕಾರರ ಮೇಲೆ ನೇರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಅತ್ಯಂತ ನೋವುಂಟು ಮಾಡುತ್ತವೆ ಎಂದು ಅವರು ಹೇಳಿದರು. ಅತಿಯಾದ ಬಲಪ್ರಯೋಗ ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯಿಲ್ಲದೇ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ಸಾಧ್ಯವಿದೆ ಎಂದರು.

ಪೊಲೀಸರು ಸಾಮಾನ್ಯ ನಾಗರಿಕರಿಗೆ ರಾಜ್ಯದ ಅಧಿಕಾರ ಮತ್ತು ಶಕ್ತಿಯ ಪ್ರತಿನಿಧಿಗಳಾಗಿರುವುದರಿಂದ, ಪೊಲೀಸ್ ಇಲಾಖೆಯ ಮೇಲಿನ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಕಾಪಾಡುವುದು ಅತ್ಯಂತ ಮುಖ್ಯ ಎಂದು ನ್ಯಾಯಮೂರ್ತಿ ಭುಯನ್ ಒತ್ತಿ ಹೇಳಿದರು. ಜುಲೈ 20ರಂದು ದೆಹಲಿಯ ಜಂತರ್ ಮಂತರ್ ಹಾಗೂ ಸಂಸತ್ ಭವನದತ್ತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಅತಿಯಾದ ಬಲಪ್ರಯೋಗ ಮಾಡಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣ: ಝೀ ಸಂಸ್ಥಾಪಕ ಸುಭಾಷ್ ಚಂದ್ರ ವಿರುದ್ಧ ಎಫ್‌ಐಆರ್‌

ಲಾಠಿ ಚಾರ್ಜ್, ಅಶ್ರುವಾಯು, ಪೆಲೆಟ್ ಗನ್ ಬಳಕೆ, ಎಲೆಕ್ಟ್ರಾನಿಕ್ ಬ್ಯಾಟನ್‌ಗಳ ಬಳಕೆ ಹಾಗೂ ಮಹಿಳಾ ಪ್ರತಿಭಟನಾಕಾರರ ಮೇಲಿನ ಕಿರುಕುಳದ ಆರೋಪಗಳನ್ನು ಸಮಿತಿ ಪರಿಶೀಲಿಸಲಿದೆ. ಇದೇ ವೇಳೆ ದೇಶದಲ್ಲಿ ಹೆಚ್ಚುತ್ತಿರುವ ಕಸ್ಟಡಿ ಹಿಂಸೆ ಮತ್ತು ಕಸ್ಟಡಿ ಸಾವುಗಳ ಬಗ್ಗೆಯೂ ನ್ಯಾಯಮೂರ್ತಿ ಭುಯನ್ ಆತಂಕ ವ್ಯಕ್ತಪಡಿಸಿದರು. ನಾಗರಿಕ ಸಮಾಜದಲ್ಲಿ ಕಸ್ಟಡಿ ಸಾವು ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ ಎಂದರು.

ಸರ್ಕಾರದ ಅಧಿಕಾರಿಗಳೇ ಕಾನೂನು ಉಲ್ಲಂಘಿಸುವಂತಾದರೆ ಅದು ಕಾನೂನಿನ ಮೇಲಿನ ಜನರ ಗೌರವವನ್ನು ಕುಗ್ಗಿಸಿ, ಅರಾಜಕತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು. “ಪೊಲೀಸರು ಬಂಧಿಸಿದ ಕ್ಷಣದಿಂದಲೇ ನಾಗರಿಕನು ತನ್ನ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುತ್ತಾನೆಯೇ?” ಎಂದು ಪ್ರಶ್ನಿಸಿದರು. ‘ಫೇಕ್ ಎನ್‌ಕೌಂಟರ್’ಗಳ ಬಗ್ಗೆಯೂ ಮಾತನಾಡಿದ ಅವರು, ಇಂತಹ ಘಟನೆಗಳು ಕಾನೂನಿನ ಆಳ್ವಿಕೆಯ ಮೂಲತತ್ವವನ್ನೇ ನಾಶಪಡಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪಿನಲ್ಲಿ ಹೇಳಿರುವುದನ್ನು ಉಲ್ಲೇಖಿಸಿದರು. “ಎನ್‌ಕೌಂಟರ್ ತತ್ವವು ಅಪರಾಧಾತ್ಮಕ ತತ್ವ. ಅದು ಪೊಲೀಸ್ ವ್ಯವಸ್ಥೆಯ ಭಾಗವಾಗಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಭುಯನ್ ಸ್ಪಷ್ಟಪಡಿಸಿದರು.