ಚೆನ್ನೈ, ಜೂ. 21: ಸಿಗಡಿ ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ 7 ಜನರು ಮೃತಪಟ್ಟಿದ್ದು, ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿರುವ ದುರ್ಘಟನೆ ತಮಿಳುನಾಡಿನ (Tamil Nadu) ತಿರುವಲ್ಲೂರು ಜಿಲ್ಲೆಯ ಪೆರಿಯಪಾಳಯಂ ಬಳಿಯ ಕನ್ನಿಗೈಪೈರ್ ಎಂಬಲ್ಲಿ ನಡೆದಿದೆ. ಕನ್ನಿಗೈಪೈರ್‌ನಲ್ಲಿರುವ ಸೇಂಟ್ ಪೀಟರ್ಸ್ ಪಾಲ್ ಸೀಫುಡ್ಸ್ ಎಕ್ಸ್‌ಪೋರ್ಟ್ಸ್ ಘಟಕದಲ್ಲಿ ಭಾನುವಾರ (ಜೂ. 21) ಮಧ್ಯಾಹ್ನ ಸುಮಾರಿಗೆ ಅಮೋನಿಯಾ ಅನಿಲ ಸೋರಿಕೆಯಾಗಿದೆ (Ammonia Gas Leak). ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ.
ಅನಿಲ ಸೋರಿಕೆಯಿಂದ ಹಾನಿಗೊಳಗಾದ ಒಟ್ಟು 67 ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿರುವಳ್ಳೂರು ಜಿಲ್ಲಾಧಿಕಾರಿ ಎಸ್. ಕವಿತಾ ತಿಳಿಸಿದ್ದಾರೆ. ಅವರಲ್ಲಿ 46 ಜನರನ್ನು ವೆಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 21 ಜನರನ್ನು ಚಿಕಿತ್ಸೆಗಾಗಿ ವೆಂಕಟೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಒಂಬತ್ತು ರೋಗಿಗಳನ್ನು ನಂತರ ಆಂಬ್ಯುಲೆನ್ಸ್ ಮೂಲಕ ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಿರುವಳ್ಳೂರು ಜಿಲ್ಲಾಧಿಕಾರಿ ಕಚೇರಿಯಿಂದ ಎಚ್ಚರಿಕೆ ಸಂದೇಶ ಬಂದ ಬಳಿಕ, ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಅರಕ್ಕೋಣಂನಲ್ಲಿರುವ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF)ಯ 4ನೇ ಬೆಟಾಲಿಯನ್ ಪ್ರಧಾನ ಕಚೇರಿಯನ್ನು ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಸಜ್ಜುಗೊಳಿಸಲಾಯಿತು.
ವಿಡಿಯೊ ಇಲ್ಲಿದೆ:
ಆಂಧ್ರ ಪ್ರದೇಶದ ONGC ತೈಲ ಬಾವಿಯಲ್ಲಿ ಅನಿಲ ಪೈಪ್‌ಲೈನ್ ಸೋರಿಕೆ; ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ
ಚೆನ್ನೈನಿಂದ ಬಂದ 30 ಸದಸ್ಯರ ಎನ್‌ಡಿಆರ್‌ಎಫ್ ತಂಡವು ತುರ್ತು ಪ್ರತಿಕ್ರಿಯೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಅನಿಲ ಪತ್ತೆ ಸಾಧನಗಳು ಮತ್ತು ವಿಶೇಷ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು (ಸಿಬಿಆರ್‌ಎನ್) ರಕ್ಷಣಾ ಸಾಧನಗಳೊಂದಿಗೆ ಸ್ಥಳಕ್ಕೆ ತಲುಪಿತು. ಘಟನಾ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿರುವ ನಡುವೆಯೇ ಇದುವರೆಗೆ ಏಳು ಮಹಿಳೆಯರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ತಿರುವಲ್ಲೂರಿನ ಸಮುದ್ರಾಹಾರ ರಫ್ತು ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಆದೇಶ ಹೊರಡಿಸಿದ್ದಾರೆ. ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶಕರು, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಮತ್ತು ಸಾರ್ವಜನಿಕ ಆರೋಗ್ಯ ಹೆಚ್ಚುವರಿ ನಿರ್ದೇಶಕರನ್ನು ಒಳಗೊಂಡ ಸಮಿತಿಯು 24 ಗಂಟೆಗಳ ಒಳಗೆ ಮಧ್ಯಂತರ ವರದಿಯನ್ನು ಮತ್ತು ಮೂರು ದಿನಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಒಂದು ದಿನದ ಹಿಂದಷ್ಟೇ ನಡೆದಿದ್ದ ಮತ್ತೊಂದು ದುರ್ಘಟನೆಯಲ್ಲಿ, ತಮಿಳುನಾಡಿನ ತೂತುಕುಡಿ ಜಿಲ್ಲೆಯ ಎಟ್ಟಾಯಪುರಂ ಬಳಿಯ ಪಟಾಕಿ ಉತ್ಪಾದನಾ ಘಟಕದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದರು.