ಭೋಪಾಲ್, ಫೆ. 4: ಅಂಗನವಾಡಿ ಕಾರ್ಯಕರ್ತೆಯೊಬ್ಬರು (Anganwadi worker) ತಮ್ಮ ಧೈರ್ಯ ಹಾಗೂ ಮಕ್ಕಳ ಮೇಲಿನ ಕಾಳಜಿಯಿಂದ ಪ್ರಾಣವನ್ನೇ ಅರ್ಪಿಸಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ನೀಮಚ್ ಜಿಲ್ಲೆಯಲ್ಲಿ ನಡೆದಿದೆ. ರಣಪುರ ಗ್ರಾಮದ ಅಂಗನವಾಡಿಯ ಕಾರ್ಯಕರ್ತೆಯ ತ್ಯಾಗದಿಂದ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮದವಾಡ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ನೊಣಗಳ ಹಿಂಡು ಇದ್ದಕ್ಕಿದ್ದಂತೆ ದಾಳಿ ನಡೆಸಿದೆ. ಆ ವೇಳೆ ಅಂಗನವಾಡಿಯಲ್ಲಿ ಅಡುಗೆ ಕಾಯಕ ಮಾಡುವ ಕಾಂಚನ್ ಬಾಯಿ ಮೇಘವಾಲ್, ತನ್ನ ಸುರಕ್ಷತೆಯ ಬಗ್ಗೆ ಯೋಚಿಸದೆ ಕೂಡಲೇ ಹತ್ತಿರದಲ್ಲಿ ಬಿದ್ದಿದ್ದ ಟಾರ್ಪಲ್‌ಗಳು ಮತ್ತು ಚಾಪೆಗಳನ್ನು ಹಿಡಿದುಕೊಂಡರು. ಒಬ್ಬೊಬ್ಬರಾಗಿ, ಮಕ್ಕಳನ್ನು ಅದರಲ್ಲಿ ಸುತ್ತಿ, ತಾವು ಅಡ್ಡ ನಿಂತು ಅವರನ್ನು ರಕ್ಷಿಸಿಕೊಂಡು ಅಂಗನವಾಡಿಯ ಒಳಗೆ ಕಳುಹಿಸಿದರು.
ಶಾಲಾ ಶಿಕ್ಷಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ನಡುವೆ ಮಾರಾಮಾರಿ
ಜೇನುನೊಣಗಳು ಮಕ್ಕಳಿಗೆ ಏನೂ ಮಾಡದಂತೆ ಕಾಂಚನ್ ಬಾಯಿ ಕಲ್ಲುಬಂಡೆಯಂತೆ ಅಡ್ಡ ನಿಂತಿದ್ದರಿಂದ ಆ ಹಿಂಡು ಅವರ ಮೇಲೆ ದಾಳಿ ಮಾಡಿತು. ನೂರಾರು ಜೇನು ನೊಣಗಳು ಕಚ್ಚಿದವು. ಆದರೂ ಮಕ್ಕಳು ಸುರಕ್ಷಿತರಾಗಿ ಒಳಗೆ ಹೋಗುವವರೆಗೂ ಅವರು ಹಿಂದೆ ಸರಿಯಲಿಲ್ಲ. ಗ್ರಾಮಸ್ಥರು ಸಹಾಯಕ್ಕೆ ಧಾವಿಸುವ ಹೊತ್ತಿಗೆ ಕಾಂಚನ್ ಬಾಯಿ ಕುಸಿದು ಬಿದ್ದಿದ್ದರು. ಕಾನ್‌ಸ್ಟೇಬಲ್ ಕಲುನಾಥ್ ಮತ್ತು ಪೈಲಟ್ ರಾಜೇಶ್ ರಾಥೋಡ್ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಅವರ ದೇಹವು ಲೆಕ್ಕವಿಲ್ಲದಷ್ಟು ಜೇನುನೊಣಗಳ ಕಡಿತದಿಂದ ಕೂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇದು ಅವರ ಧೈರ್ಯಕ್ಕೆ ಸಾಕ್ಷಿ. ಕಾಂಚನ್ ಬಾಯಿ ಕೇವಲ ಅಂಗನವಾಡಿ ಕಾರ್ಯಕರ್ತೆ ಮಾತ್ರವಲ್ಲ ಮಕ್ಕಳಿಗೆ ಅಮ್ಮನಂತಿದ್ದರು. ಅವರು ಹಳ್ಳಿಯ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸುತ್ತಿದ್ದರು. ಜೈ ಮಾತಾ ದಿ ಸ್ವ-ಸಹಾಯ ಗುಂಪಿನ ಅಧ್ಯಕ್ಷೆಯಾಗಿದ್ದರು ಮತ್ತು ಅವರ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ಅವರ ಪತಿ ಶಿವಲಾಲ್ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಅವರು ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳೇ ಬುನಾದಿ
ಮರಣೋತ್ತರ ಪರೀಕ್ಷೆಯ ನಂತರ ಆಕೆಯ ದೇಹವು ರಣಪುರ ಗ್ರಾಮಕ್ಕೆ ಕರೆ ತರಲಾಯಿತು. ಈ ವೇಳೆ ಗ್ರಾಮಸ್ಥರು ಮೌನವಾಗಿ ನಿಂತು, ಧೀರ ಮಹಿಳೆಗೆ ನಮಸ್ಕರಿಸಿದರು. ಆಕೆಯ ಧೈರ್ಯ, ತ್ಯಾಗಕ್ಕೆ ಕಂಬನಿ ಮಿಡಿದರು.
ಇನ್ನೂ ಆವರಿಸಿದೆ ಭಯ
ಹಳ್ಳಿಯಲ್ಲಿ ಇನ್ನೂ ಭಯ ಆವರಿಸಿದೆ. ಅಂಗನವಾಡಿ ಕೇಂದ್ರದ ಬಳಿಯ ಮರದಲ್ಲಿ ದೊಡ್ಡ ಜೇನುಗೂಡೊಂದು ನೇತಾಡುತ್ತಿದೆ. ಗ್ರಾಮದ ಏಕೈಕ ಕೈಪಂಪ್ ಇರುವ ಸ್ಥಳ ಇದು. ಮತ್ತೊಂದು ದಾಳಿಯ ಭೀತಿಯಿಂದ ನಿವಾಸಿಗಳು ನೀರು ತರುವುದನ್ನು ನಿಲ್ಲಿಸಿದ್ದಾರೆ. ಜೇನುಗೂಡನ್ನು ತಕ್ಷಣ ತೆಗೆದುಹಾಕಬೇಕು ಮತ್ತು ಕಾಂಚನ್ ಬಾಯಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.