ನವದೆಹಲಿ, ಜೂ. 3: ತಮಿಳುನಾಡು ರಾಜಕೀಯದಲ್ಲಿ(Tamil Nadu Politics) ಮಹತ್ವದ ಬೆಳವಣಿಗೆಯೊಂದು ನಡೆಯುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಬಿಜೆಪಿ ತೊರೆದು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಲಿದ್ದಾರೆಯೇ (New Political Party) ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ಅಣ್ಣಾಮಲೈ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಬಿಜೆಪಿ ಇನ್ನೂ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ರಾಜೀನಾಮೆ ಸ್ವೀಕರಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಕೂಡ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ಅಣ್ಣಾಮಲೈ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ಹಿರಿಯ ನಾಯಕರು ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವುದು ಊಹಾಪೋಹಗಳಿಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿಯ ಕಾರ್ಯವೈಖರಿ, ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಹಾಗೂ ಎಐಎಡಿಎಂಕೆ ಜತೆಗಿನ ಮೈತ್ರಿಯ ಪರಿಣಾಮದ ಕುರಿತು ತಮ್ಮ ಅಸಮಾಧಾನವನ್ನು ಪಕ್ಷದ ನಾಯಕರ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಬಿಜೆಪಿ ಸ್ವತಂತ್ರವಾಗಿ ತನ್ನ ಸಂಘಟನೆಯನ್ನು ಬಲಪಡಿಸಬೇಕು ಎಂಬ ನಿಲುವು ಅಣ್ಣಾಮಲೈ ಅವರದ್ದಾಗಿತ್ತು. ಆದರೆ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ವಿಚಾರವೇ ಎಐಎಡಿಎಂಕೆ ಮತ್ತು ಅಣ್ಣಾಮಲೈ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆದ್ದಿರುವುದು ಕೂಡ ಅಣ್ಣಾಮಲೈ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಪಕ್ಷದ ಕೆಲ ನಾಯಕರು ಹಾಗೂ ಮೈತ್ರಿ ಪಕ್ಷದ ನಾಯಕರ ವರ್ತನೆಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಮಿತ್ ಶಾ ಭೇಟಿಯಾದ ಅಣ್ಣಾಮಲೈ:
ಅಣ್ಣಾಮಲೈ ಹೃದಯಕ್ಕೆ ಹತ್ತಿರವಾಗಿದ್ದ ಬಿಜೆಪಿ ಭಾರವಾಗಿದ್ದೇಕೆ ?
ಇತ್ತ ಅಣ್ಣಾಮಲೈ ರಾಜೀನಾಮೆ ಕುರಿತು ನಡೆದಿರುವ ಚರ್ಚೆಗಳನ್ನು ಬಿಜೆಪಿ ಮೂಲಗಳು ತಳ್ಳಿ ಹಾಕಿವೆ. ಮಂಗಳವಾರ ನಡೆದ ಸಭೆಗಳಲ್ಲಿ ರಾಜೀನಾಮೆ ವಿಚಾರ ಪ್ರಸ್ತಾಪವಾಗಿಲ್ಲ ಎಂದು ತಿಳಿದುಬಂದಿದೆ. ಅಣ್ಣಾಮಲೈ ಎತ್ತಿದ ವಿಷಯಗಳನ್ನು ರಾಜ್ಯ ನಾಯಕರೊಂದಿಗೆ ಚರ್ಚಿಸುವುದಾಗಿ ಪಕ್ಷದ ಹೈಕಮಾಂಡ್ ಭರವಸೆ ನೀಡಿದೆ. ಇದರ ನಡುವೆ ತಮಿಳುನಾಡು ಬಿಜೆಪಿ ಅಧ್ಯಕ್ಷ ನಯನಾರ್ ನಾಗೇಂದ್ರನ್ ಅವರನ್ನು ಕೂಡ ದೆಹಲಿಗೆ ಕರೆಸಲಾಗಿದೆ ಎಂದು ವರದಿಯಾಗಿದೆ. ಅಣ್ಣಾಮಲೈ ಎತ್ತಿದ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ಅಣ್ಣಾಮಲೈ ಶೀಘ್ರದಲ್ಲೇ ಸಾರ್ವಜನಿಕ ಸಂಪರ್ಕ ಅಭಿಯಾನ ಆರಂಭಿಸುವ ಸಾಧ್ಯತೆ ಇದೆ. ಮೊದಲಿಗೆ ಒಂದು ಜನಾಂದೋಲನವನ್ನು ಆರಂಭಿಸಿ ಬಳಿಕ ಅದನ್ನು ರಾಜಕೀಯ ಪಕ್ಷವಾಗಿ ರೂಪಿಸುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ವಿವಿಧ ವೃತ್ತಿ ಮತ್ತು ಸಾಮಾಜಿಕ ಹಿನ್ನೆಲೆಯ ಜನರನ್ನು ಒಗ್ಗೂಡಿಸಿ ಬಲವಾದ ಸ್ವಯಂಸೇವಕರ ಜಾಲ ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಇದೇ ವೇಳೆ, ಬಿಜೆಪಿ ಅಣ್ಣಾಮಲೈ ಅವರಿಗೆ ರಾಜ್ಯಸಭಾ ಸ್ಥಾನವನ್ನು ಆಫರ್ ಮಾಡಿತ್ತು ಎನ್ನಲಾಗಿದ್ದು, ಅದನ್ನು ಅವರು ನಿರಾಕರಿಸಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಅಣ್ಣಾಮಲೈ ಭವಿಷ್ಯದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ತಮಿಳುನಾಡಿನ ಉಪಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆ ಅಣ್ಣಾಮಲೈ ಇನ್ನೂ ಬಿಜೆಪಿ ತೊರೆದಿಲ್ಲ ಎಂಬುದನ್ನು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.